ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿಯುತ ಸ್ವಯಂ ಪ್ರೇರಿತ ಬೆಂಗಳೂರು ಬಂದ್‌

By Staff
|
Google Oneindia Kannada News

* ದಟ್ಸ್‌ಕನ್ನಡ ಬ್ಯೂರೊ

Police force imposed in sesitive areas of Bangaloreಬೆಂಗಳೂರು : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ನಡೆಸಿದ ಸೆ.12 ರ ಬೆಂಗಳೂರು ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ ಎಂದು ಬಂದ್‌ಗೆ ಕರೆ ನೀಡಿದ್ದ ಕನ್ನಡ ಪರ ಸಂಘಟನೆಗಳು ಹೇಳಿಕೊಂಡಿವೆ.

ಲಾಠಿ ಪ್ರಹಾರ : ಬಾಗಿಲು ತೆರೆದಿದ್ದ ಕೆಲವೇ ಕೆಲವು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಕೆಲವು ಬಂದ್‌ ಕಾರ್ಯಕರ್ತರು ಒತ್ತಾಯಿಸಿದಾಗ ಉಂಟಾದ ಬಿಗು ಪರಿಸ್ಥಿತಿಯಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ರಾಜಾಜಿನಗರ ಹಾಗೂ ಗಾಯತ್ರಿ ನಗರಗಳಲ್ಲಿ ನಡೆದಿದೆ.

ಚಾಮರಾಜಪೇಟೆ, ಭೂಪಸಂದ್ರ, ಯಲಹಂಕ ಮುಂತಾದೆಡೆಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿಯನ್ನು ದಹಿಸಿದ ಕನ್ನಡ ಪರ ಕಾರ್ಯಕರ್ತರು, ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ರಸ್ತೆಗಿಳಿಯದ ಬಸ್ಸುಗಳು, ಸಂಚಾರ ಅಸ್ತವ್ಯಸ್ತ
ಮುಂಜಾಗರೂಕತಾ ಕ್ರಮವಾಗಿ ಬೆಂಗಳೂರು ಮಹಾನಗರ ಸಾರಿಗೆ ಹಾಗೂ ಕೆಎಸ್‌ಆರ್ಟಿಸಿ ಬಸ್ಸುಗಳು ರಸ್ತೆಗಿಳಿಯದ ಕಾರಣ, ನಗರ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು . ಹೊರ ಊರುಗಳಿಂದ ಬಂದ ಪ್ರಯಾಣಿಕರು ಹಾಗೂ ಬೇರೆ ಪ್ರದೇಶಗಳಿಗೆ ತೆರಳಬೇಕಾದವರು ವಾಹನ ಸೌಲಭ್ಯವಿಲ್ಲದೆ ಪರಿತಪಿಸಬೇಕಾಯಿತು. ಆಟೊ ಸಂಚಾರ ಕೂಡ ವಿರಳವಾಗಿತ್ತು . ರಸ್ತೆಗಿಳಿದಿದ್ದ ಕೆಲವೇ ಕೆಲವು ಆಟೋ ಚಾಲಕರು ಪರಿಸ್ಥಿತಿಯ ಲಾಭ ಪಡೆದು ಪ್ರಯಾಣಿಕರಿಂದ ಒಂದಕ್ಕೆರಡು ಬಾಡಿಗೆ ವಸೂಲು ಮಾಡುತ್ತಿದ್ದರು.

ವಕೀಲರ ಸಂಘ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು , ವಕೀಲರ ಕೊರತೆಯಿಂದಾಗಿ ಗುರುವಾರ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಂಡವು. ಶಾಲಾ ಕಾಲೇಜುಗಳು ರಜೆ ಘೋಷಿಸಿದ್ದವು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಬಿಕೋ ಎನ್ನುತ್ತಿದ್ದವು. ಸಿನಿಮಾ ಮಂದಿರ, ಪೆಟ್ರೋಲ್‌ ಪಂಪ್‌ಗಳು ಕೂಡ ಬಾಗಿಲು ಮುಚ್ಚಿದ್ದವು.

ಸದಾ ಜನ ಸಂದಣಿಯಿಂದ ಗಿಜಿಗುಡುವ ಮೆಜೆಸ್ಟಿಕ್‌, ಕೃಷ್ಣರಾಜ ಮಾರುಕಟ್ಟೆ , ರಸೆಲ್‌ ಮಾರ್ಕೆಟ್‌, ಶಿವಾಜಿ ನಗರ, ಯಶವಂತಪುರ ಮುಂತಾದ ಪ್ರದೇಶಗಳು ಬಂದ್‌ ಕಾರಣದಿಂದಾಗಿ ಖಾಲಿ ಖಾಲಿಯಾಗಿದ್ದವು.

ವಾಟಾಳ್‌, ನಾರಾಯಣಕುಮಾರ್‌ ಬಂಧನ- ಬಿಡುಗಡೆ:
ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಂದ್‌ ಸಂಪೂರ್ಣ ಶಾಂತಿಯುತವಾಗಿತ್ತು . ಮುಂಜಾಗ್ರತಾ ಕ್ರಮವಾಗಿ 500 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜಭವನ ಮುಂಭಾಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಲು ಯತ್ನಿಸಿದ ವಾಟಾಳ್‌ ನಾಗರಾಜ್‌, ಜಿ.ನಾರಾಯಣಕುಮಾರ್‌ ಸೇರಿದಂತೆ 15 ಕನ್ನಡ ಹೋರಾಟಗಾರರನ್ನು ಬಂಧಿಸಿ, ಆನಂತರ ಬಿಡುಗಡೆ ಮಾಡಲಾಯಿತು. ಸುಪ್ರಿಂಕೋರ್ಟ್‌ ಹಾಗೂ ಕಾವೇರಿ ನದಿ ಪ್ರಾಧಿಕಾರಗಳ ತೀರ್ಮಾನ ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ ಎಂದು ಬಣ್ಣಿಸಿದ ವಾಟಾಳ್‌ ನಾಗರಾಜ್‌- ಸದ್ಯದಲ್ಲೇ ಕರ್ನಾಟಕ ಬಂದ್‌ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ತುಮಕೂರು, ಆನೇಕಲ್‌, ಮಂಡ್ಯದಲ್ಲೂ ಬಂದ್‌
ರಾಜ್ಯದ ವಿವಿಧೆಡೆಗಳಲ್ಲಿ ಗುರುವಾರ ನಡೆದ ಬಂದ್‌ ಸಂಪೂರ್ಣ ಶಾಂತಿಯುತವಾಗಿತ್ತು ಎಂದು ತಿಳಿಸಿರುವ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಬಂದ್‌ ಸಮಯದಲ್ಲಿ ಅಹಿತಕರ ಘಟನೆಗಳಿಗೆ ಎಡೆ ಕೊಡದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X