ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಜಾತ್ರೆ ಮುಗಿಯಿತಾ? ಟೂರಿಸಂ ಮಾತಂತೂ ಕೇಳುತ್ತಿದೆ..

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಜಾತ್ರೆ ವಾತಾವರಣ ಮುಗಿಯುತ್ತಿದೆ. ಈಗ ಏನಿದ್ದರೂ ಪ್ರವಾಸೋದ್ಯಮದ್ದೇ ಮಾತು. ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವುದು ಹಾಗೂ ವಿದೇಶೀ ಪ್ರವಾಸಿಗರನ್ನು ಆಕರ್ಷಿಸುವತ್ತ ಸರಕಾರದ ಗಮನ.

ಈ ವರ್ಷದ ಅಂತ್ಯದ ವೇಳೆಗೆ ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿರುವವರ ಮೇಳವೊಂದನ್ನು ಆಯೋಜಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ರಾಜ್ಯದ ಪ್ರವಾಸೋದ್ಯಮ ವಿಭಾಗವು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಮುಳುಗಿದೆ. ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ವಸತಿ, ಶೌಚಾಲಯ ಮತ್ತು ಆಹಾರದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ.

ಬಂಡವಾಳ ಹೂಡಿಕೆದಾರರ ಸಮ್ಮೇಳನ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಯ ಆರಂಭ ಅಷ್ಟೆ. ಈ ಮೂಲಕ ಪ್ರವಾಸೀ ತಾಣಗಳಿಗೆ ಹೆಚ್ಚು ಹೆಚ್ಚು ಮಂದಿ ಪ್ರವಾಸಿಗರು ಬರುವ ಹಾಗೆ ಮಾಡಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಆಯುಕ್ತ ಐ. ಎಂ. ವಿಠ್ಠಲ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಹೋಟೆಲ್‌ಗಳ ನಿರ್ಮಾಣ, ಉಪಹಾರ ಗೃಹಗಳು, ಉನ್ನತ ದರ್ಜೆಯ ವಸತಿ ವ್ಯವಸ್ಥೆಗಳ ಅವಕಾಶ, ಇಕೋ- ಟೂರಿಸಂ, ಬೀಚ್‌ ಟೂರಿಸಂ, ಹೆರಿಟೇಜ್‌ ಟೂರಿಸಂ, ಮನರಂಜನಾ ಪಾರ್ಕ್‌ಗಳು... ಹೀಗೆ ವಿವಿಧ ವಲಯಗಳಲ್ಲಿ ಪ್ರವಾಸೋದ್ಯಮದ ಕಡೆಗೆ ಗಮನ ಹರಿಸಲಾಗುವುದು. ಈ ಹಿಂದೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವಹಿಸಿದ ಕಂಪೆನಿಗಳ ಜೊತೆಗೆ ಗುಣಾತ್ಮಕ ಒಪ್ಪಂದಗಳೇನೂ ನಡೆದಿಲ್ಲ. ಸುಮಾರು ಒಂದು ಸಾವಿರಿ ಕೋಟಿ ರೂಪಾಯಿಯ ಯೋಜನೆಗಳಿಗೆ ಸರಕಾರ ಅಂಕಿತ ಹಾಕಿದ್ದರೂ ಕೇವಲ ಒಂದೇಒಂದು ಕಂಪೆನಿಯ ಹೊರತಾಗಿ ಉಳಿದೆಲ್ಲವೂ ಆರಂಭ ಶೂರತನ ತೋರಿಸಿ ನಂತರ ಮೌನವಾದವು. ಸಮ್ಮೇಳನದ ಫಲವಾಗಿ ಮುರ್ಡೇಶ್ವರದಲ್ಲಿ ಒಂದು ಹೋಟೆಲ್‌ ನಿರ್ಮಾಣಗೊಳ್ಳುತ್ತಿದೆ. ಕೈಬಿಟ್ಟು ಹೋದ ಯೋಜನೆಗಳ ಬಗ್ಗೆ ಮತ್ತೊಮ್ಮೆ ಗಮನ ಹರಿಸಲಾಗುವುದು ಎಂದು ಸಚಿವ ಡಿ. ಬಿ. ಇನಾಂದಾರ್‌ ಹೇಳುತ್ತಾರೆ.

ರಾಜ್ಯ ಸರ್ಕಾರ ಐಟಿಯನ್ನೇನೂ ಕೈಬಿಟ್ಟಿಲ್ಲ. ಐಟಿ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಬಗ್ಗೆ ಎಂದಿನಂತೆ ಬೆಂಗಳೂರು ಐಟಿ.ಕಾಮ್‌ ಮೇಳ ಅಕ್ಟೋಬರ್‌ 28ರಿಂದ ನವೆಂಬರ್‌ 1ರ ತನಕ ನಡೆಯಲಿದೆ. ಐಟಿ ಮತ್ತು ಪ್ರವಾಸೋದ್ಯಮದ ನಡುವಿನ ಅಂತರವೆಂದರೆ ಪರಿಸರ ಮಾಲಿನ್ಯದ ವಿಷಯ. ಪ್ರವಾಸೀ ತಾಣವೊಂದರಲ್ಲಿ ವಿದೇಶೀ ಬಂಡವಾಳ ಹೂಡಿಕೆದಾರರು ಪಂಚತಾರಾ ಹೋಟೆಲ್‌ ನಿರ್ಮಿಸುವುದನ್ನು ಪರಿಸರವಾದಿಗಳು ವಿರೋಧಿಸುತ್ತಾರೆ. ಆದರೆ ಐಟಿ ಕ್ಷೇತ್ರಕ್ಕೆ ಪರಿಸರವಾದಿಗಳ ಹಂಗಿಲ್ಲ.

ಆದಾಗ್ಯೂ ರಾಜ್ಯದ ಬೊಕ್ಕಸದ ದೃಷ್ಠಿಯಿಂದ ಪ್ರವಾಸೀ ಕ್ಷೇತ್ರದಲ್ಲಿ ಶೌಚಾಲಯದಂತಹ ಮೂಲಭೂತ ಸೌಕರ್ಯಕ್ಕಾಗಿ ಬಂಡವಾಳ ಆಕರ್ಷಣೆ ಅಗತ್ಯವಾಗಿದೆ ಎಂದು ವಿಠಲ ಮೂರ್ತಿ ಅಭಿಪ್ರಾಯಪಡುತ್ತಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X