ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಮತ್ತು ಮಣ್ಣು

By Staff
|
Google Oneindia Kannada News

*ಎ.ಆರ್‌.ರಾಧಾಕೃಷ್ಣ
ಸಹಾಯಕ ಪ್ರಾಧ್ಯಾಪಕರು, ಬೆಂಗಳೂರು.

ಗಣೇಶ ಹಬ್ಬದ ಸಂದರ್ಭದಲ್ಲಿ ಎಲ್ಲೆಲ್ಲೂ ಗಣಪನ ಪ್ರತಿಮೆಗಳು. ಮಣ್ಣಿನಿಂದ ಮಾಡಿದ ಗಣೇಶನ ವಿಶೇಷತೆಯಾದರೂ ಏನು ?

ಇಷ್ಟು ದಿನ ನಾನು ಮಣ್ಣಿನಿಂದ ಮಾಡಿದ ಗಣೇಶನನ್ನು ಹೆಚ್ಚು ನೋಡಿದ್ದೆ . ಎರಡು ವರ್ಷದಿಂದೀಚೆಗೆ ಯಲಹಂಕ ಸಮೀಪದ ಬ್ಯಾಟರಾಯನಪುರದಲ್ಲಿ ಬಾಂಬೇ ಗಣೇಶಗಳು ಹೆಚ್ಚು ರಂಗುರಂಗಾಗಿ ಕಂಡವು. ಆದರೆ ಅವು ಮಣ್ಣಿನ ಗಣೇಶಗಳಲ್ಲ . ನೆಲ್ಲು ಹುಲ್ಲಿನಲ್ಲಿ ವಿವಿಧಾಕೃತಿಯಲ್ಲಿ ಮಾಡಿ ಮಣ್ಣಿನ ಲೇಪನವನ್ನು ಹಚ್ಚಿದ ಪ್ರತಿಮೆಗಳು. ಕೊನೆಯಲ್ಲಿ ಬಣ್ಣದ ರಂಗನ್ನು ಕೊಡಲಾಗುತ್ತದೆ. ಗಣೇಶಗಳು ನೋಡಲು ಅದ್ಭುತವಾಗಿವೆ. ಮೂಲತಃ ಈ ಮಣ್ಣಿನ ಗಣೇಶ ಯಾರು ?

ಪಾರ್ವತಿಯು ತನ್ನ ಬೆವರಿನಿಂದ ಗೊಂಬೆಯನ್ನು ಮಾಡಿ ಸ್ನಾನಕ್ಕೆ ಹೋದ ಕತೆ ಎಲ್ಲರಿಗೂ ತಿಳಿದ ವಿಷಯವೇ. ಶಿವನ ಆತುರದಿಂದಲೊ ಅಥವಾ ಪ್ರತಿಮಾ ಸಂಜ್ಞಾ ಭಾಷೆ ತಿಳಿಯದ ಶಿವನಿಂದಾಗಿ ಈ ಗಣೇಶ ಜನಿಸಲು ಕಾರಣವಾಗಿರಬಹುದು.

ಗಣೇಶನ ಹಬ್ಬವನ್ನು ಮನೆಮನೆಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಬೀದಿ ಬೀದಿಗಳಲ್ಲಿ ಯುವಕರು ಸಾಮೂಹಿಕವಾಗಿ ಬಲು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಈ ರೀತಿಯಲ್ಲಿ ಪೂಜಿಸಿದ ಗಣೇಶನನ್ನು ವಿಸರ್ಜಿಸುವಾಗ ಮಾಡುವ ಮೆರವಣಿಗೆ ನೋಡಲು ಬಲು ಸಂಭ್ರಮ. ಗಣಪ ನೋಡಲು ಚಂದ. ಆದರೆ, ವಿವಿಧ ಬಣ್ಣಗಳಿಂದ ಕೂಡಿದ ಗಣೇಶನ ವಿಸರ್ಜಿಸಿದಾಗ ಆಗುವ ನೀರಿನ ಮಾಲಿನ್ಯದ ಬಗ್ಗೆ ಎಷ್ಟು ಜನಕ್ಕೆ ಅರಿವಿದೆ?

ಬಣ್ಣ ಬಳಿಯದ ಗಣೇಶನನ್ನು ಭಕ್ತಿಯಿಂದ ಮಾಡಿ ಪೂಜಿಸಿ ವಿಸರ್ಜಿಸುವವರೂ ಇದ್ದಾರೆ. ಕೆಲವು ಪುಟಾಣಿಗಳು ಅಥವಾ ಕೆಲವು ಹಳ್ಳಿಗಳಲ್ಲಿ ಗಣೇಶನ ವಿಸರ್ಜನೆ ಮಾಡುವಾಗ ಜೈಕಾರ ಹಾಕುವುದನ್ನು ನೋಡಿದ್ದೇವೆ. ಅದರ ಜೊತೆಯಲ್ಲಿ

ಗಣೇಶ ಬಂದ
ಕಾಯಿ ಕಡುಬು ತಿಂದ
ಚಿಕ್ಕ ಕೆರೇಲಿ ಬಿದ್ದ
ದೊಡ್ಡ ಕೆರೇಲಿ ಎದ್ದ

ಎಂಬ ಸಣ್ಣ ಜಾನಪದ ಸಾಲುಗಳನ್ನು ಎಲ್ಲರೂ ಖಂಡಿತ ಕೇಳಿದ್ದೀರಿ. ಏನಿದರ ಅರ್ಥ? ಚಿಕ್ಕ ಕೆರೆಯಲ್ಲಿ ಎದ್ದುದೇಕೆ? ದೊಡ್ಡ ಕೆರೆಯಲ್ಲಿ ಬಿದ್ದುದೇಕೆ? ಈ ಸಾಲುಗಳಿಗೆ ವೈಜ್ಞಾನಿಕ ಹಿನ್ನೆಲೆ ಇರಬಹುದೇ? ಚಿಕ್ಕ ಕೆರೆಯೆಂದರೆ, ಕೆರೆಯಲ್ಲಿನ ಹೂಳೆತ್ತಲು ಗಣೇಶನನ್ನು ಮಣ್ಣಿನಲ್ಲಿ ಸೃಷ್ಟಿಸಿರಬಹುದೇ? ನಂತರ ಹೊಲಗದ್ದೆಗಳ ಫಲವತ್ತತೆಯನ್ನು ಕಾಪಾಡಲು ಅದೇ ಫಲವತ್ತಾದ ಮಣ್ಣಿನಿಂದ ತಯಾರಿಸಿದ ಗಣೇಶನನ್ನು ತುಂಬಿದ ಕೆರೆಯಲ್ಲಿ ಕರಗಿಸಿ ಮುಂದಿನ ಹೊಲಗದ್ದೆಗಳಿಗೆ ನೀರಿನ ರೂಪದಲ್ಲಿ ಫಲವತ್ತತೆಯನ್ನು ನೀಡುವ ಉದ್ದೇಶದಿಂದ ಈ ಹಾಡು ಸೃಷ್ಟಿಯಾಗಿರಬಹುದೇ?

ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಎನ್ನುವ ನಾಣ್ಣುಡಿ ಅಷ್ಟು ಸುಲಭವಾಗಿ ಸುಳ್ಳಾಗಲಾರದು. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಪರಿ ಇದಾಗಿರಬಹುದು. ಒಂದು ಕಡೆ ಹೆಚ್ಚು ನೀರನ್ನು ಕೆರೆಯಲ್ಲಿ ಹಿಡಿದಿಡಲು ಮಣ್ಣನ್ನು ತೆಗೆಯುವುದು. ಮತ್ತೊಂದೆಡೆ ಅದೇ ಮಣ್ಣು ರಕ್ಷಣೆ ಆಗದೆ ಕೊಚ್ಚಿಹೋಗುವುದನ್ನು ತಡೆಗಟ್ಟಲು ಗಣೇಶನನ್ನು ನೀರಿಗೆ ಬಿಡುವುದು.

ಇತ್ತೀಚಿನ ದಿನಗಳಲ್ಲಿ ನೀರಿನ ಕೊರತೆಯಿಂದಾಗಿ ಗಣೇಶನನ್ನು ಹೂಳುವ ಪದ್ಧತಿಯನ್ನೂ ಕೆಲವೆಡೆ ಕಾಣುತ್ತಿದ್ದೇವೆ. ಮಣ್ಣಿನಿಂದ ಮಣ್ಣಿಗೆ ಎನ್ನುವ ನೀತಿಯನ್ನು ಇಲ್ಲಿ ಕಾಣಬಹುದು.

ಅದೇನೇ ಇರಲಿ, ಜನಪದ ಸಾಲುಗಳಿಗೆ ಅರ್ಥ ಕೊಟ್ಟು , ನಮ್ಮ ನೆಲದ ಮಣ್ಣು ಮತ್ತು ನೀರನ್ನು ಸಂರಕ್ಷಿಸೋಣವೇ? ಇಂಥ ಸುಬುದ್ಧಿಯನ್ನು ಗಣೇಶ ಕರುಣಿಸಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X