ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೆಡೆ ವೀರಪ್ಪನ್‌ ಕಾಟ, ಇನ್ನೊಂದೆಡೆ ಜಯಾ ಉಪಟಳ, ಪಾಪ ಕೃಷ್ಣ !

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ಬೆಂಗಳೂರು: ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರಿಗೀಗ ಗ್ರಹಕೂಟಗಳು ಸರಿಯಾಗಿದ್ದ ಹಾಗೆ ಕಾಣುವುದಿಲ್ಲ. ಅತ್ತ ಎಸ್‌ಟಿಎಫ್‌ ಪಡೆಯವರು ಕಾಡಿನಲ್ಲಿ ದಿಕ್ಕೆಟ್ಟು ಅಲೆಯುತ್ತಿದ್ದಾರೆ. ಇತ್ತ ಜಯಲಲಿತಾ ಕಾಡುವ ಭೂತದ ಹಾಗೆ ನೀರಿಗಾಗಿ ರಾಜ್ಯದ ಬೆನ್ನಟ್ಟುತ್ತಿದ್ದಾರೆ.

ಕೃಷ್ಣ ಜಾತಕದ ಪ್ರಕಾರ ಯಾವ ಭುಕ್ತಿ, ದೆಸೆಗಳು ನಡೆಯುತ್ತಿವೆಯೋ... ಯಶಸ್ಸಿನ ಬೆನ್ನೇರಿ ಹೊರಟಿದ್ದ ಕೃಷ್ಣ ನಡೆದು ನಡೆದು ಚಕ್ರವ್ಯೂಹದೊಳಗೆ ಬಂದು ನಿಂತಿದ್ದಾರೆ. ಪರಿಸ್ಥಿತಿ ನಿರ್ಮಿಸಿದ ಈ ವ್ಯೂಹವನ್ನು ಗೆದ್ದು ಅವರು ಆಚೆಗೆ ಬರುತ್ತಾರಾ ?

ವೀರಪ್ಪನ್‌ ಇನ್ನೇನು ಕೈಗೆ ಸಿಕ್ಕೇ ಬಿಟ್ಟ ಅನ್ನುವಷ್ಟರಲ್ಲಿ ದಿನ್ನಹಳ್ಳಿಯಲ್ಲಿ ಅಡುಗೆ ಮಾಡಿ ಉಳಿದ ಉರುವಲು, ಟೆಂಟು ಕಿತ್ತ ಗುಳಿಗಳು ಮಾತ್ರ ಕಾಣಸಿಕ್ಕವು. ವೀರಪ್ಪನ್‌ ಕೈಗೆ ಸಿಗದೇ ಇದ್ದರೆ ಹೋಗಲಿ, ಮಾಜಿ ಸಚಿವ ನಾಗಪ್ಪ ಅವರನ್ನಾದರೂ ಬಿಡುಗಡೆ ಮಾಡುವಲ್ಲಿ ಎಸ್‌ಟಿಎಫ್‌ ಸಫಲವಾಗಿದ್ದರೆ ಕೃಷ್ಣ ಸದ್ಯಕ್ಕೆ ನಿಟ್ಟುಸಿರು ಬಿಡಬಹುದಿತ್ತು.

ಒಂದುವೇಳೆ ವೀರಪ್ಪನ್‌ ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಅದು ಕೃಷ್ಣ ಅವರ ಸಿಲಿಕಾನ್‌ ಖ್ಯಾತಿಗೆ ಸೇರಿದ ಇನ್ನೊಂದು ಗಟ್ಟಿ ಹರಳು ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಕರ್ನಾಟಕದ ಜನತೆ ಕೃಷ್ಣರನ್ನು ನೆನಪಿಟ್ಟುಕೊಳ್ಳಲು ಇದಕ್ಕಿಂತ ದೊಡ್ಡ ಸಾಧನೆ ಕಾಣಿಸುವುದಿಲ್ಲ.

ಈ ಬಾರಿ ವೀರಪ್ಪನ್‌ ಕಾರ್ಯಾಚರಣೆ ಆರಂಭವಾಗಿರುವ ಜೋಶ್‌ ಗಮನಿಸಿದಲ್ಲಿ ವೀರಪ್ಪನ್‌ಗೆ ಒಂದು ಗತಿ ಕಾಣಿಸಲು ಸರಕಾರ ನಿರ್ಧರಿಸಿದಂತೆ ತೋರುತ್ತದೆ. ಸಂಧಾನಕಾರರನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವ ಸರಕಾರ ಕಾರ್ಯಾಚರಣೆಗೇ ಒತ್ತು ಕೊಡುತ್ತಿದೆ. ಅಲ್ಲದೆ ವೀರಪ್ಪನ್‌ ವಿಷಯವಾಗಿ ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಕರುಣಾನಿಧಿಯಷ್ಟು ಜಯಲಲಿತಾ ಮೃದುವಾಗಿ ವರ್ತಿಸುತ್ತಿಲ್ಲ.

ಸಂಧಾನಕಾರರು ಯಾರಾದರೂ ಇದ್ದಾರೆಯೇ ಎಂಬ ಇಂಗಿತದಲ್ಲಿ ಸರಕಾರವಿತ್ತು. ಆದರೆ ಆ ಸಂದರ್ಭದಲ್ಲಿ ಗುಲ್ಬರ್ಗ ದೂರದರ್ಶನ ಕೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿದ ಅಡ್ವಾಣಿ ಪೋಟಾ ಕಾಯ್ದೆಯಡಿ ಬಂಧಿತರಾದವರನ್ನು ಸಂಧಾನಕ್ಕೆ ಕಳುಹಿಸುವುದು ಆಗದ ಮಾತು ಎಂಬ ಬಾಣ ಬಿಟ್ಟು ಸಂಧಾನ ದಾರಿಯನ್ನು ಕಿಷ್ಕಿಂಧೆಯಾಗಿಸಿ ಬಿಟ್ಟರು. ಸರಿ, ಜೈಲಿನಲ್ಲಿರುವವರನ್ನು ಸಂಧಾನಕ್ಕೆ ಕಳಿಸುವ ಪ್ರಶ್ನೆಯೇ ಇಲ್ಲ ಎಂದು ಕೃಷ್ಣ ಘೋಷಿಸಿ ಬಿಟ್ಟರು. ಆದರೆ ಏಕಮುಖವಾಗಿ ಕಾರ್ಯಾಚರಣೆಯತ್ತ ಗಮನ ವಹಿಸೋಣವೆಂದರೆ ಗುಸು ಗುಸು ಎನ್ನುತ್ತಿರುವ ಪೊಲೀಸ್‌ ವರಿಷ್ಠರ ಕಿತ್ತಾಟ ಬೇರೆ.

ಕಾವೇರಿಯ ಬಿಸಿ ಸುಳಿಯಲ್ಲಿ ...

ವೀರಪ್ಪನ್‌ ಕಾರ್ಯಾಚರಣೆ, ನಾಗಪ್ಪ ಅಪಹರಣದ ನಡುವೆ ಕಾವೇರಿ ನದಿ ನೀರಿಗಾಗಿ ಹುಟ್ಟಿಕೊಂಡ ಗಲಾಟೆ, 1.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರಿಂ ಕೋರ್ಟ್‌ ಆದೇಶ ನೀಡಿದ್ದು, ಕೆರೆದುಕೊಳ್ಳಲು ಪುರುಸೊತ್ತಿಲ್ಲದವನಿಗೆ ಅಜ್ಜಿ ಕತೆ ಹೇಳಿದ ಪ್ರಸಂಗದಂತಾಯ್ತು.

ಕಾವೇರಿ ನದಿ ನೀರು ಹಾಗೂ ಸೋನಿಯಾ ಗಾಂಧಿಯ ವಿದೇಶೀ ಮೂಲದ ಬಗ್ಗೆ ರಾಜ್ಯದ ಕಾಂಗ್ರೆಸ್‌ ನಾಯಕರು ಜಯಲಲಿತಾರನ್ನು ತರಾಟೆಗೆ ತೆಗೆದುಕೊಂಡರೆ ವೀರಪ್ಪನ್‌ ಬೇಟೆಗೆ ತಮ್ಮ ಪೂರ್ಣ ಬೆಂಬಲ ಬೇಕು ಎಂದು ಕೋರಿಕೊಳ್ಳಬೇಕಾಗಿದೆ. ರಾಜಯಕೀಯದಲ್ಲಿ ಇದೆಲ್ಲ ವಿಶೇಷ ಅಲ್ಲದೇ ಇದ್ದರೂ ಎರಡೂ ವಿಷಯಗಳು ಏಕಕಾಲಕ್ಕೇ ಉದ್ಭವಿಸಿರುವುದು ಆಕ್ಸ್‌ಫರ್ಡ್‌ ರಿಟರ್ನ್ಡ್‌ ಸೊಫೆಸ್ಟಿಕೇಟೆಡ್‌ ಕೃಷ್ಣರಿಗೆ ಸ್ವಲ್ಪ ಇರಿಸು ಮುರಿಸು ಹುಟ್ಟಿಸಿದೆ.

ಕಾವೇರಿ ನದಿ ನೀರಿಗೆ ಸಂಬಂಧಿಸಿ ಕೋರ್ಟ್‌ ಸೂಚನೆ, ಮಂಡ್ಯ ಮೈಸೂರು ವಲಯದ ರೈತರ ಉಗ್ರ ಪ್ರತಿಭಟನೆ, ತಮಿಳುನಾಡಿನ ಬಿಗಿ ಪಟ್ಟು, ತಮಿಳುನಾಡಿನ ಪರ ವಹಿಸುವಂತೆ ಕಾಣಿಸುವ ಕೇಂದ್ರ ಸರಕಾರದ ಧೋರಣೆ ಕೃಷ್ಣರ ಮುಖವನ್ನು ಇನ್ನಷ್ಟು ಹಣ್ಣು ಮಾಡಿವೆ. ಈ ನಡುವೆ ಮೂರನೆಯ ಬಾರಿಗೆ ಅಮೆರಿಕಾ ಪ್ರವಾಸವನ್ನು ಕೃಷ್ಣ ರದ್ದುಗೊಳಿಸಬೇಕಾಗಿ ಬಂತು. ಅದಕ್ಕಾಗಿ ಬೇಜಾರು ಮಾಡಿಕೊಳ್ಳಲೂ ಕೃಷ್ಣರಿಗೆ ಪುರುಸೊತ್ತಿಲ್ಲ.

ಈ ನಡುವೆ ಜಾತಿ ರಾಜಕೀಯದ ಆಪಾದನೆ ಬೇರೆ ಕಾಡುತ್ತಿದೆ. ಲಿಂಗಾಯತ ನಾಗಪ್ಪ ಅವರನ್ನು ಬಿಡುಗಡೆ ಮಾಡಲು ಒಕ್ಕಲಿಗರಾದ ಕೃಷ್ಣ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಲಿಂಗಾಯತರ ಕಡೆಯಿಂದ ಕೇಳಿಬರುತ್ತಿರುವ ಬೈಗುಳ. ಕಾರ್ಯಕ್ಷೇತ್ರಗಳಲ್ಲಿ ಜಾತಿ ಎಂಬ ವಿಷಯ ಕೆಲಸ ಮಾಡುತ್ತಿರಲಿ ಇಲ್ಲದಿರಲಿ ಆ ಬಗೆಗಿನ ಚರ್ಚೆಗಳಂತೂ ಎಂದೂ ತಣ್ಣಗಾಗುವುದಿಲ್ಲ.

ಏನೇ ಆದರೂ ಎಲ್ಲ ಸಿಕ್ಕುಗಳನ್ನು ಬಿಡಿಸಲು ಕೃಷ್ಣರಿಗೆ ಇರುವುದು ಒಂದೇ ದಾರಿ. ವೀರಪ್ಪನ್‌ ಶಿಕಾರಿ. ಕೃಷ್ಣರಿಗೆ ಪುರುಸೊತ್ತು ಇದೆಯೋ ಇಲ್ಲವೋ, ಎಸ್‌ಟಿಎಫ್‌ ಬೆನ್ನಿಗೆ ಚುರುಕು ಮುಟ್ಟಿಸಿ, ವೀರಪ್ಪನ್‌ನ್ನು ಬೋನಿಗೆ ಹಾಕಿದಲ್ಲಿ ಅವರ ಗತ್ತು ಗೈರತ್ತುಗಳಿಗೆ ಇನ್ನಷ್ಟು ಹಿರಿಮೆ ಬರಬಹುದು. ಈ ಕಷ್ಟಕರ ಪರಿಸ್ಥಿತಿಯಲ್ಲಿ ಇಡೀ ರಾಜ್ಯವೇ ‘ಕೃಷ್ಣ ಜಾಣ್ಮೆ’ಯನ್ನು ನಿರೀಕ್ಷಿಸುತ್ತಿದೆ.

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X