ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ತೊಟ್ಟು ನೀರೂ ಬಿಡಕೂಡದು- ಪ್ರತಿಪಕ್ಷಗಳು

By Staff
|
Google Oneindia Kannada News

ಬೆಂಗಳೂರು : ಆ.28 ರಂದು ಪ್ರಧಾನಿ ವಾಜಪೇಯಿ ಅವರ ನೇತೃತ್ವದಲ್ಲಿ ನಡೆಯುವ ಕಾವೇರಿ ಪ್ರಾಧಿಕಾರ ಸಭೆಗೆ, ತೀವ್ರ ಬರದ ಕಾರಣದಿಂದಾಗಿ ನೀರು ಬಿಡಲು ಸಾಧ್ಯವಾಗದ ರಾಜ್ಯದ ಅಸಹಾಯಕತೆಯನ್ನು ಮನದಟ್ಟು ಮಾಡಿಸಲು ಸರ್ವಪಕ್ಷ ಸಭೆ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಭಾನುವಾರ (ಆ.25) ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ತಮಿಳುನಾಡಿಗೆ ಒಂದು ತೊಟ್ಟು ನೀರನ್ನೂ ಬಿಡಬಾರದು. ಮುಖ್ಯಮಂತ್ರಿ ಕೃಷ್ಣ ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಜನತಾದಳದ ಉಭಯ ಬಣಗಳ ಮುಖಂಡರು ಸರ್ವಪಕ್ಷ ಸಭೆಯಲ್ಲಿ ಒತ್ತಾಯಿಸಿದರು. ರಾಜ್ಯ ಕ್ಷಾಮದ ದವಡೆಗೆ ತುತ್ತಾಗಿರುವ ಸಂದರ್ಭದಲ್ಲಿ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ತಮಿಳುನಾಡಿಗೆ ಒಂದು ತೊಟ್ಟು ನೀರನ್ನೂ ಬಿಡಲಾಗದು ಎಂದು ಸಂಯುಕ್ತ ದಳದ ಮುಖಂಡ ಪಿಜಿಆರ್‌ ಸಿಂಧ್ಯಾ ಮಂಡಿಸಿದ ವಾದವನ್ನು ಜಾತ್ಯತೀತ ದಳ ಸದಸ್ಯರು ಬೆಂಬಲಿಸಿದರು.

ತಮಿಳುನಾಡಿಗೆ ಮೂರ್ನಾಲ್ಕು ದಿನದ ಹಿಂದಷ್ಟೇ ಭೇಟಿ ನೀಡಿದ್ದೆ . ಅಲ್ಲಿ ನೀರಿನ ಬೇಡಿಕೆಯ ತುರ್ತೇನೂ ಇಲ್ಲ . ಕರ್ನಾಟಕದಲ್ಲೇ ನೀರಿಗೆ ಬರವಿರುವಾಗ ತಮಿಳುನಾಡಿಗೆ ನೀರು ಬಿಡಲಿಕ್ಕಾಗದು ಎಂದು ಜಾತ್ಯತೀತ ದಳದ ಮುಖಂಡ ಹಾಗೂ ಮಾಜಿ ನೀರಾವರಿ ಸಚಿವ ಎಚ್‌.ಎನ್‌.ನಂಜೇಗೌಡ ಹೇಳಿದರು. ಭಾರತೀಯ ಜನತಾಪಕ್ಷದ ಮುಖಂಡರು ಕೂಡ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ವಿಷಯವನ್ನು ವಿರೋಧಿಸಿದರು.

ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ, ಜಾತ್ಯತೀತ ಜನತಾದಳದ ಕೆ.ಎಚ್‌.ಶ್ರೀನಿವಾಸ್‌, ಬಿಜೆಪಿಯ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಹಾಗೂ ಕಮ್ಯುನಿಸ್ಟ್‌ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X