ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿನ ಅನಧಿಕೃತ ಕಟ್ಟಡಗಳ ಮುಲಾಜಿಲ್ಲದೆ ಕೆಡವಿ-ಕೃಷ್ಣ

By Staff
|
Google Oneindia Kannada News

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಮರ ಸಿದ್ಧತೆಯ ಮೂಡಿನಲ್ಲಿದ್ದರು. ಬೆಂಗಳೂರು ನಗರ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತೆ ಕಾನೂನನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ಕುರಿತು ಕೃಷ್ಣ ಕಿಡಿ ಕಾರಿದರು. ಅದ್ಯಾರದ್ದೇ ಆಗಿರಲಿ, ಅದೆಷ್ಟೇ ಪ್ರಭಾವಿ ವ್ಯಕ್ತಿಯ ಒಡೆತನಕ್ಕೇ ಸೇರಿರಲಿ- ಅನಧಿಕೃತ ಕಟ್ಟಡಗಳನ್ನು ಕೆಡವಿಹಾಕಿ ಎಂದು ಕೃಷ್ಣ ಬೆಂಗಳೂರು ನಗರ ಪ್ರಾಧಿಕಾರ (ಬಿಡಿಎ)ಕ್ಕೆ ಸೂಚಿಸಿದರು. ಬಿಡಿಎ ಹೊರ ತಂದಿರುವ ಬಾಂಡುಗಳನ್ನು ಬ್ಯಾಂಕ್‌ ಅಧಿಕಾರಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಕೃಷ್ಣ ಮಾತನಾಡುತ್ತಿದ್ದರು. ಕಾರ್ಯಕ್ರಮ ನಡೆದದ್ದು ಸ್ವಾತಂತ್ರ್ಯ ದಿನಾಚರಣೆ(ಆ.14)ಯ ಮುನ್ನಾದಿನ.

ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯ ವೈಖರಿಯ ಬಗೆಗೂ ಕೃಷ್ಣ ಸೂಕ್ಷ್ಮವಾಗಿ ಅಸಂತೃಪ್ತಿ ವ್ಯಕ್ತಪಡಿಸಿದರು. ರಸ್ತೆಯ ಇಕ್ಕೆಲದ ಕಾಲುದಾರಿಗಳನ್ನು ವ್ಯವಸ್ಥಿತಗೊಳಿಸಬೇಕಿದೆ. ಫುಟ್‌ಪಾತ್‌ಗಳ ಗಣನೀಯ ಸುಧಾರಣೆ ಜರೂರಿನ ಕಾರ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಒತ್ತಿ ಹೇಳಿದರು. ಮಹಾನಗರ ಪಾಲಿಕೆಯ ಆಯುಕ್ತ ಎಂ.ಆರ್‌. ಶ್ರೀನಿವಾಸಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ.

ಬಿಡಿಎ ಹಾಗೂ ನಗರಪಾಲಿಕೆ ಸರ್ಕಾರದ ಪ್ರತಿನಿಧಿಗಳಾಗಿದ್ದು ಬೆಂಗಳೂರಿನ ಅಭಿವೃದ್ಧಿಗೆ ಜವಾಬ್ದಾರಿಯಾಗಿವೆ. ವಿಶ್ವದ ಪ್ರಮುಖ ನಗರಗಳಲ್ಲೊಂದಾಗಿ ಬೆಂಗಳೂರು ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ನಗರ ಸೌಂದರ್ಯ ಹಾಗೂ ಸ್ವಚ್ಛತೆಯ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಕೃಷ್ಣ ಹೇಳಿದರು.

ಬಿಡಿಎ ಸಾಧನೆಗಳನ್ನು ಬಿಂಬಿಸುವ ಕಿರುಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದ ಇನ್ಫೋಸಿಸ್‌ನ ನಂದನ್‌ ನೀಲೇಕಣಿ ಬಿಡಿಎ ಜೊತೆ ಕಾರ್ಯ ನಿರ್ವಹಿಸುವುದು ತಮಗೆ ಸಂತಸ ತಂದಿದೆ ಎಂದರು. ನೀಲೇಕಣಿ ಬೆಂಗಳೂರು ಕಾರ್ಯಾಚರಣೆ ಪಡೆಯ ಸದಸ್ಯರಲ್ಲೊಬ್ಬರು. ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X