• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮವೇ ಹೂವುಗಳಿಗೆ ಒಂದಿಷ್ಟಾದರೂ ಜಾಗ ಕೊಡಬಾರದೇ... ?

By Staff
|

*ಕೆ.ರಾಜಲಕ್ಷ್ಮಿ ರಾವ್‌

Heavenly flower Paijathaದಿನವೂ ದಾರಿಯಲ್ಲಿ ನಡೆದುಹೋಗುವಾಗ ಹೂವುಗಳು ನಿಮ್ಮನ್ನು ನೋಡಿ ನಗುತ್ತವೆ.ನೀವೆಂದಾದರೂ ಪ್ರತಿನಕ್ಕಿದ್ದೀರಾ...?

ಏನೋ ಯೋಚನೆಯಲ್ಲಿ ನಡೆಯುವಾಗ, ಕಾಣಿಸುವ ಯಾರದೋ ಮನೆಯ ನಂದಿ ಬಟ್ಟಲು, ಜೀನಿಯಾ, ಡೇಲಿಯಾ ಇನ್ನೂ ಏನೇನೊ ನಾಲಗೆ ತಿರುಗದ ಇಂಗ್ಲೀಷು ಹೆಸರಿನ ಚಿತ್ರ ವಿಚಿತ್ರ, ಸುಂದರ ಹೂಗಳು. ಗುಲ್‌ಮೊಹರ್‌, ಮೇ ಫ್ಲವರ್‌... ಹೆಬ್ಬೆಟ್ಟಿನ ಗಾತ್ರದಿಂದ ತಲೆ ದಪ್ಪದ ಗಾತ್ರದ ಹೂಗಳು. ಹಳ್ಳಿಯಲ್ಲಾದರೆ, ಕಿಷ್ಕಾರ, ಕರವೀರ, ಬುಗುಡಿ, ಮಂದಾರ, ಬಣ್ಣ ಬಣ್ಣದ ಕನಕಾಂಬರ, ಆಚಾರಿ ಹೂ, ಸುಗಂಧಿ, ಬಾಳೆ ಹೂ, ನೆಲ ಗುಲಾಬಿ, ಶಂಖಪುಷ್ಪ , ಚಿಟ್ಟೆ ಹೂ... ಓಹ್‌ ಹೆಸರಿಲ್ಲದ ಹೂಗಳ ಸಾಲು ಸಾಲು.. ಅವುಗಳ ಲೆಕ್ಕವಿಟ್ಟವರಾರು? ಲೆಕ್ಕದ ಮಾತು ಬಿಡಿ, ಅವುಗಳನ್ನು ನೋಡಿದ್ದೀರಾ, ಸೌಂದರ್ಯ ಸವಿದಿದ್ದೀರಾ, ಅವುಗಳೊಡನೆ ಮುಗುಳು ನಕ್ಕಿದ್ದೀರಾ...?

ಕೆಲವೊಂದು ಚೆಂದದ ಕ್ಷಣಗಳನ್ನು ಹಾಗೇ ಕಟ್ಟಿ ಇಟ್ಟುಕೊಳ್ಳಬೇಕು ಅಂತ ಆಗಾಗ ಅನ್ನಿಸುವುದುಂಟು. ಸಿಕ್ಕಾಪಟ್ಟೆ ತರಲೆ ಮಾಡುವ ಕೂಸನ್ನು ಹೊಡೆಯಲು ಇನ್ನೇನು ಕೈಯೆತ್ತಿದ್ದೀರಿ. ಆ ಪಾಪು ತತ್ತತ್ತಾ ...ಅಂತ ನಗುತ್ತಾ ನಿಮ್ಮ ಕಾಲನ್ನೇ ಹಿಡಿದುಕೊಂಡು ಇನ್ನೊಂದು ಆಟ ಶುರುಮಾಡಿದಾಗ... ಸೇತುವೆ ಮೇಲೆ ತಿಳಿಯಾಗಿ ಹರಿಯುತ್ತಿರುವ ನದಿಯ ಮೇಲೆ ಬಸ್ಸು ಕಾರಂಜಿ ಹುಟ್ಟಿಸುತ್ತಾ ಹಾದು ಹೋಗುವಾಗ... ಕೊನೇ ಪಕ್ಷ ಅಪರೂಪಕ್ಕೊಮ್ಮೆ ಅರಳುವ ಬ್ರಹ್ಮಕಮಲ ಅಪರಾತ್ರಿಯಲ್ಲಿ ಮನೆಯಂಗಳದಲ್ಲಿ ಬಿರಿಯಲಾರಂಭಿಸಿದಾಗ !!

ಹಾಗೇ ಲಾಲ್‌ಬಾಗ್‌ನ ಪುಷ್ಪಪ್ರದರ್ಶನ ಕೂಡ.

ಹೂಗಳೇ ಹೀಗೆ ! ಎಲ್ಲವೂ ಚೆಂದವೇ.. ಹೇಗಿದ್ದರೂ ಚೆಂದವೇ.. ಹದಿನೈದು ವರ್ಷದ ಪುಟಿಯುವ ಹುಡುಗಿಯ ಹಾಗೆ. ಆಗಸ್ಟ್‌ 9ರಿಂದ, (ಶುಕ್ರವಾರ) ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ. ಸ್ವಾತಂತ್ರ್ಯೋತ್ಸವದ ಅಂಗವಾಗಿ.

ಉದ್ಯಾನದ ಗಾಜಿನ ಮನೆಯ ತುಂಬ ಒತ್ತೊತ್ತಾಗಿ ಜೋಡಿಸಿಟ್ಟ ಹೂವಿನ ಕುಂಡಗಳು. ಮತ್ತೆ ಮುಂದೆ ಬಂದರೆ ವಿವಿಧ ತರಕಾರಿ, ಹಣ್ಣುಗಳ ಪ್ರದರ್ಶನ, ಬೀಜಗಳ ಮಾರಾಟ ವ್ಯವಸ್ಥೆ. ಅಲ್ಲೊಂದು ಹೂವಿನ ಗಡಿಯಾರ. ಫಾರಿನ್‌ ಹೂಗಳ ರಾಶಿ, ಚಿತ್ತಾರ, ವಿಶೇಷ ಡೇಲಿಯಾ.. ಕಲರ್‌ ಕಲರ್‌ ಗುಲಾಬಿ.. ಬಣ್ಣ ಬಣ್ಣಗಳು, ಸುವಾಸನೆಯ ಅಮಲು, ಕೊಂಚ ರಸಿಕತೆ ಇದ್ದಲ್ಲಿ ಕಳೆದು ಹೋಗಲು ಇನ್ನೇನು ಬೇಕು ?

ಹೂಗಳಷ್ಟೇ ಅಲ್ಲ , ಹೂ ಚೆಲುವಿಗೆ ಸವಾಲೆಸೆಯುವ ಸೊಗಸುಗಾತಿಯರೂ ಚೆನ್ನಿಗರೂ ಪುಷ್ಪ ಪ್ರದರ್ಶನದಲ್ಲಿ ಎದುರಾಗುತ್ತಾರೆ. ಚೆಂದ ಚೆಂದದ ಹೂಗಳ ಪಕ್ಕ ಮುಖವಿಟ್ಟು ಫೋಟೋ ತೆಗೆಸಿಕೊಳ್ಳುವ ಹುಡುಗ ಹುಡುಗಿಯರು. ನಡೆದಷ್ಟೂ ರಾಶಿ ರಾಶಿ ಹೂಗಳು, ಹೆಸರು ಹೇಳಬೇಕಿದ್ದರೆ ಹೂವಿನ ಕುಂಡದ ಕೆಳಗಡೆ ಸಿಕ್ಕಿಸಿರುವ ಚಿಕ್ಕ ಬೋರ್ಡು ನೋಡಬೇಕು.

ಸ್ಸಾರಿ !

ಪುಷ್ಪಪ್ರದರ್ಶನವನ್ನು ವೀಕ್ಷಿಸುತ್ತಾ ಹೋದ ಹಾಗೆಲ್ಲಾ ನಿಮಗೆ ನೆನಪಾಗುತ್ತದೋ ಇಲ್ಲವೋ- ನಮ್ಮ ಪುರಾಣದ ಪಾರಿಜಾತ, ಪನ್ನೀರು ಮಂದಾರ, ಮಣಿಮಂದಾರ, ಜಾಜಿ ಚಪ್ಪರ, ಶಂಖ ಪುಷ್ಪ , ಮಿಠಾಯಿ ಹೂ, ಪೂಜೆಗೆಂದು ಕೊಯ್ಯುತ್ತಿದ್ದ ಮೆಣಸಿನ ದಾಸವಾಳ, ಕತ್ತರಿ ದಾಸವಾಳ... ಕನಕಾಂಬರದ ಪೊದೆ, ಕಣಗಿಲೆ.. ಊಹ್ಞೂ , ಇದ್ಯಾವುದೂ ಲಾಲ್‌ಬಾಗ್‌ನ ಪುಷ್ಪ ಪ್ರದರ್ಶನಲ್ಲಿ ಇಲ್ಲ. ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ, ಸೂಜಿ ಮಲ್ಲಿಗೆಗಳೂ ಮರಳಲ್ಲಿ ಸೇರಿದ ಸೂಜಿ ಹಾಗೆ ಕಾಣ ಸಿಗುವುದು ಕಷ್ಟ.

Dr.G.K. Vasanthakumar, Horticulture Directorಮುಂಬೈ, ದುಬೈ ತನಕ ಪರಿಮಳ ಸೂಸುವ ಮಂಗಳೂರು ಮಲ್ಲಿಗೆ ಇಲ್ಲಿ ಯಾಕಿಲ್ಲ ಎಂದು ಲಾಲ್‌ಬಾಗ್‌ನಲ್ಲಿರುವ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ. ಜಿ.ಕೆ. ವಸಂತ ಕುಮಾರ್‌ ಅವರನ್ನ ದಟ್ಸ್‌ಕನ್ನಡ.ಕಾಮ್‌ ಪ್ರಶ್ನಿಸಿದಾಗ - ನಂದಿ ಬಟ್ಟಲು, ಕಣಗಿಲೆಗಳನ್ನು ಪ್ರದರ್ಶನದಲ್ಲಿಟ್ಟರೆ, ಈ ಹೂಗಳನ್ನ ನೋಡಲು ಇಷ್ಟು ದೂರಬರಬೇಕಿತ್ತೇ ಎಂದು ಸಾರ್ವಜನಿಕರು ಬೇಸರಿಸಿಕೊಂಡಾರು. ಬೆಂಗಳೂರಿನ ಜನ ಅಂತಹ ಹೂವುಗಳನ್ನು ನೋಡಲು ಆಸೆ ಪಡುವ ದಿನ ಬಂದಿಲ್ಲ ಅಂತ ಅನಿಸುತ್ತದೆ. ಆದರೆ, ಸಾರ್ವಜನಿಕರೇ ಆಸ್ಥೆಯಿಂದ ಅಂತಹ ಹೂವುಗಳನ್ನು ತಂದಿಟ್ಟರೆ ನಾವು ಬೇಡ ಎನ್ನುವುದಿಲ್ಲ ಎಂದರು.

ಕನಕಾಂಬರವೇ ಇಲ್ಲ ಎಂದಮೇಲೆ, ಪಚ್ಚೆ ಕದಿರು, ತುಂಬೆ ಹೂವುಗಳನ್ನೆಲ್ಲ ಪ್ರದರ್ಶನದಲ್ಲಿ ನೀವು ನಿರೀಕ್ಷಿಸುವ ಹಾಗಿಲ್ಲ. ಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿದೆ, ನೋಡಿ ಬರೋಣ ಅಂತ ಮಕ್ಕಳನ್ನು ಲಾಲ್‌ಬಾಗ್‌ಗೆ ಕರೆದುಕೊಂಡು ಹೋದರೆ, ಕನ್ನಡದಲ್ಲಿ ಬರೆದ ಇಂಗ್ಲಿಷ್‌ ಹೆಸರುಗಳನ್ನು ಓದಿ ಓದಿ ಕನ್ನಡವೇ ಮರೆತುಹೋಗುತ್ತದೆ, ಸುಸ್ತಾಗುತ್ತದೆ!

Cockscomb flowers‘ಮಿಠಾಯಿ ಹೂವು, ಕಣಗಿಲೆ ಪ್ರದರ್ಶನಕ್ಕೆ ಇಟ್ಟರೆ ಯಾರು ಸ್ವಾಮಿ ನೋಡೋದಕ್ಕೆ ಬರ್ತಾರೆ’ ಅನ್ನುವುದು ಲಾಲ್‌ಬಾಗ್‌ ಸಿಬ್ಬಂದಿಯ ಮರುಪ್ರಶ್ನೆ. ಸರಿಯಪ್ಪಾ.. ನಮ್ಮವೇ ಹೂವುಗಳಿಗೊಂದಿಷ್ಟಾದರೂ ಜಾಗ, ಪ್ರೋತ್ಸಾಹ ಕೊಡಬಾರದೇ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಹಾಗೆ ಲಾಲ್‌ಬಾಗ್‌ ಕಾರಂಜಿಗಳನ್ನು ನೋಡುತ್ತಾ ಸಾಗುವಾಗ, ಕಾಣಿಸುತ್ತದೆ... ರಾತ್ರಿ ರಾಣಿ ಎಂಬ ಹೆಸರಿನಲ್ಲಿ ಒಂಟಿ ಪಾರಿಜಾತದ ಗಿಡ. ಇದು ಪುಷ್ಪ ಪ್ರದರ್ಶನದ ಸಾಲಿನಲ್ಲಿ ಸೇರಿಕೊಳ್ಳುವುದಿಲ್ಲ. ಅಚಾನಕ್‌ ಹೇಗೋ.. ಉಳಿದುಕೊಂಡು ಬಿಟ್ಟಿದೆ. ಪಕ್ಕದಲ್ಲೇ ಬೋರ್ಡ್‌ - ಆರ್ಬರ್‌ ಟ್ರಿಸ್ಟಿಸ್‌ ಅಂತ ಬೊಟಾನಿಕಲ್‌ ನೇಮ್‌. ಕೆಳಗೆ ರಾತ್ರಿರಾಣಿಯ ಬಗ್ಗೆ ಪುಟ್ಟದೊಂದು ಜಾನಪದ ಕತೆ...

ಅದೃಷ್ಟವಶಾತ್‌ ಹೂವು ಬಿರಿಯುತ್ತಿದ್ದರೆ, ಮನಸ್ಸು ತುಂಬಿಕೊಳ್ಳುವ ಸುಖ ನಿಮ್ಮದು!

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X