ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್‌ಗೆ ಉಗ್ರಗಾಮಿ ಹಣೆಪಟ್ಟಿ , ವಿಧಾನಸಭೆಯಲ್ಲಿ ಕೋಲಾಹಲ !

By Staff
|
Google Oneindia Kannada News

ಬೆಂಗಳೂರು : ಆರೆಸ್ಸಸ್‌, ಮುಸ್ಲಿಂ ಲೀಗ್‌, ದಲಿತ ಸಂಘರ್ಷ ಸಮಿತಿಗಳಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆಂದು ಪೊಲೀಸ್‌ ಅಧಿಕಾರಿಗಳು ಅಧಿಕೃತವಾಗಿ ಗುಮಾನಿ ವ್ಯಕ್ತಪಡಿಸಬಹುದೇ? ಇಂಥದೊಂದು ಜಿಜ್ಞಾಸೆ ಹಾಗೂ ಕಾವೇರಿದ ವಾತಾವರಣಕ್ಕೆ ಆ.6, ಮಂಗಳವಾರದ ವಿಧಾನಸಭೆ ಸಾಕ್ಷಿಯಾಯಿತು.

ಆರೆಸ್ಸೆಸ್‌, ಮುಸ್ಲಿಂ ಲೀಗ್‌, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಉಗ್ರಗಾಮಿ ಸಂಘಟನೆಗಳು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನೆಸಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರು ಹೊರಡಿಸಿರುವ ಜ್ಞಾಪನಾ ಪತ್ರದ ಔಚಿತ್ಯದ ಕುರಿತು ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆರೆಸ್ಸೆಸ್‌ನಂಥ ದೇಶಪ್ರೇಮಿ ಸಂಘಟನೆಯ ಬಗ್ಗೆ ಅನುಮಾನಿಸಲಾಗಿದೆ. ಅದು ಅಕ್ಷಮ್ಯ ಅಪರಾಧ. ಈ ಕುರಿತು ನಿಲುವಳಿ ಸೂಚನೆಯಡಿ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ನಾಯಕ ಜಗದೀಶ್‌ ಶೆಟ್ಟರು ಸಭಾಪತಿ ಎಂ.ವಿ.ವೆಂಕಟಪ್ಪನವರನ್ನು ಆಗ್ರಹಿಸಿದರು. ಸಂಯುಕ್ತ ದಳದ ಪಿಜಿಆರ್‌ ಸಿಂಧ್ಯಾ ಶೆಟ್ಟರ್‌ ಅವರಿಗೆ ಬೆಂಬಲವಾಗಿ ನಿಂತರು. ಈ ಸಂದರ್ಭದಲ್ಲಿ ಉಂಟಾದ ಕೋಲಾಹಲದ ಕಾರಣ ಸದನವನ್ನು ಸ್ವಲ್ಪ ಸಮಯ ಮುಂದೂಡಲಾಯಿತು.

ಈ ಮುನ್ನ ಇಂಥ ಜ್ಞಾಪನ ಪತ್ರಗಳನ್ನು ಹೊರಡಿಸಲಾಗಿತ್ತೇ, ಅಥವಾ ಇದೇ ಹೊಸದಾಗಿ ಜ್ಞಾಪನ ಪತ್ರಗಳನ್ನು ಹೊರಡಿಸಲಾಗಿದೆಯೇ ಎನ್ನುವುದರ ಪರಿಶೀಲನೆ ನಡೆಸಬೇಕಾಗಿದೆ. ಆ ಕಾರಣ ತಕ್ಷಣಕ್ಕೆ ಚರ್ಚೆ ನಡೆಯಲು ಆಗದು ಎನ್ನುವ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ, ಮುಖ್ಯಮಂತ್ರಿ ಕೃಷ್ಣ ಅವರ ಮನವಿಗೆ ಒಪ್ಪದ ಬಿಜೆಪಿ ಸದಸ್ಯರು- ಶೆಟ್ಟರ್‌ ನೇತೃತ್ವದಲ್ಲಿ ಸಭಾಧ್ಯಕ್ಷರ ಮುಂದಿನ ಬಾವಿಯಲ್ಲಿ ಧರಣಿ ನಡೆಸಿದರು.

ಮಧ್ಯಾಹ್ನಾನಂತರ ಸೇರಿದ ಸದನದಲ್ಲಿ ಈ ಬಗ್ಗೆ ಚರ್ಚೆ ಮುಂದುವರಿಯಿತು. ಯಥಾಪ್ರಕಾರ ಕಾವೇರಿದ ಪರಿಸ್ಥಿತಿಯೂ. ಇದೇ ಪ್ರಕರಣ ವಿಧಾನ ಪರಿಷತ್ತಿನಲ್ಲೂ ಪ್ರತಿಧ್ವನಿಸಿತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X