ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಆತ್ಮ ಬೇರೆ ಭಾಷೆಗಳಲ್ಲಿ ಲೀನವಾಗದಿರಲಿ- ನಿಡುಮಾಮಿಡಿ

By Staff
|
Google Oneindia Kannada News

Channamalla Deshikendra Swamijiಕೋಲಾರ : ಕನ್ನಡ ಭಾಷೆ ಇಲ್ಲದಿದ್ದರೆ ಕರ್ನಾಟಕವೂ ಇಲ್ಲ , ಕನ್ನಡಿಗರೂ ಇಲ್ಲ ಎಂದು ಎಚ್ಚರಿಕೆ ನೀಡಿರುವ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ - ಸಮಸ್ತ ಕನ್ನಡಿಗರ ಉಳಿವಿಗಾಗಿ ಕನ್ನಡ ಹೋರಾಟ ಹಾಗೂ ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಹೋರಾಟ ಎನ್ನುವ ವಿಶಾಲ ಧೋರಣೆಯನ್ನು ಕನ್ನಡಿಗರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.

ಕೋಲಾರದ ಚನ್ನಯ್ಯ ರಂಗ ಮಂದಿರದಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಏರ್ಪಡಿಸಿದ್ದ ಸ್ವಾಭಿಮಾನಿ ಕನ್ನಡಿಗರ ರಾಜ್ಯಮಟ್ಟದ ಎರಡನೇ ಸಮ್ಮೇಳನವನ್ನು ಉದ್ಘಾಟಿಸಿ ಸ್ವಾಮೀಜಿ ಮಾತನಾಡುತ್ತಿದ್ದರು.

ಕನ್ನಡಿಗರು ಕರ್ನಾಟಕದಲ್ಲಿಯೇ ಎಲ್ಲ ವಿಭಾಗಗಳಲ್ಲಿಯೂ ಮೂಲೆಗುಂಪಾಗಿದ್ದು , ಕನ್ನಡೇತರರ ಪ್ರಾಬಲ್ಯವೇ ಹೆಚ್ಚಾಗಿದೆ. ಕನ್ನಡಿಗರು ಕನ್ನಡದ ಬಗೆಗಿನ ತಾತ್ಸಾರ ಮನೋಭಾವವನ್ನು ತೊರೆದು ಅಭಿಮಾನಧನರಾಗಬೇಕು ಎಂದ ನಿಡುಮಾಮಿಡಿ ಸ್ವಾಮೀಜಿ, ಕನ್ನಡಿಗರ ಆತ್ಮ ಇತರ ಭಾಷೆಗಳಲ್ಲಿ ಲೀನವಾಗದಿರಲಿ ಎಂದರು.

ಪರಭಾಷಿಕರಿಗೆ ಪಾಠ ಕಲಿಸುವಷ್ಟು ಸ್ವಾಭಿಮಾನ ಕನ್ನಡಿಗರಿಗಿದೆ ಎಂದು ಕನ್ನಡ ಚಳವಳಿ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಗುಡುಗಿದರು. ರಾಜ್ಯದಲ್ಲಿನ 5 ಕೋಟಿ ಜನಸಂಖ್ಯೆಯಲ್ಲಿ ಪರಭಾಷಿಕರ ಸಂಖ್ಯೆಯೇ 1.5 ಕೋಟಿಯಷ್ಟಿದೆ. ಈ ಮಂದಿ 3.5 ಕೋಟಿ ಕನ್ನಡಿಗರ ಉದ್ಯೋಗ, ಆಸ್ತಿ , ಅನ್ನ ಕಿತ್ತುಕೊಂಡಿದ್ದಾರೆ. ಭಾಷೆಯ ಮೇಲೆ ಆಕ್ರಮಣ ಮಾಡಿದ್ದಾರೆ. ಇದೆಲ್ಲವನ್ನು ಸಹಿಸಿಕೊಂಡು ಕನ್ನಡಿಗರು ಸುಮ್ಮನಿರಬೇಕೆ ಎಂದು ಜಾಣಗೆರೆ ಭಾವಾವೇಶದಿಂದ ನುಡಿದರು.

ರೈಲು ಬಿಡುತ್ತಿರುವ ಸರ್ಕಾರ
ಕನ್ನಡದ ವಿಚಾರದಲ್ಲಿ ರಾಜ್ಯ ಸರ್ಕಾರ ರೈಲು ಬಿಡುತ್ತಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಲೇವಡಿಯಾಡಿದರು.

ರಾಜಕಾರಣಿಗಳಿಗೆ ಕನ್ನಡಿಗರ ಓಟು ಬೇಕಾಗಿದೆ, ಹಿತ ಬೇಕಾಗಿಲ್ಲ . ಕನ್ನಡಿಗರು ಮತ ನೀಡದಿದ್ದರೆ ಯಾವುದಾದರೂ ಸರ್ಕಾರ ಅಸ್ತಿತ್ವಕ್ಕೆ ಬರುವುದು ಸಾಧ್ಯವೇ ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಜಕಾರಣಿಗಳು ವರ್ತಿಸಬೇಕಾಗಿದೆ. ನಾಡಿನ ಗೌರವ ಉಳಿಸುವಂತಹ ರಾಜಕಾರಣಿಗಳನ್ನು ಕನ್ನಡಿಗರು ಚುನಾಯಿಸಬೇಕಾಗಿದೆ ಎಂದು ಚನ್ನಬಸಪ್ಪ ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎ.ಜೆ.ಸದಾಶಿವ ಆಡಳಿತದಲ್ಲಿ ಕನ್ನಡ ಭಾಷೆಯ ಅನಿವಾರ್ಯತೆಯನ್ನು ಪ್ರಸ್ತಾಪಿಸಿದರು. ಸ್ಥಳೀಯ ಭಾಷೆ ಪ್ರಬಲವಾಗಿರಬೇಕು, ಅಧಿಕಾರಯುತವಾಗಿರಬೇಕು. ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಕನ್ನಡದ ಉಪಯೋಗ ಅನಿವಾರ್ಯವೆನ್ನಿಸುವ ಪರಿಸ್ಥಿತಿಯನ್ನು ಕನ್ನಡಿಗರು ಸೃಷ್ಟಿಸಬೇಕು ಎಂದರು.

ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಸ್ವಾಭಿಮಾನಿ ಸಮ್ಮೇಳನಕ್ಕೆ ಆಗಮಿಸಿದ್ದರು. ಕೋಲಾರದ ಪ್ರಮುಖ ಬೀದಿಗಳಲ್ಲಿ ಕನ್ನಡ ಮೆರವಣಿಗೆಯೂ ನಡೆಯಿತು. ಇದೇ ಸಂದರ್ಭದಲ್ಲಿ ಕೋಲಾರದ ಇಟಿಸಿಎಂ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣ ಎಂದು ಮರು ನಾಮಕರಣ ಮಾಡಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X