ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾದಲ್ಲಿ ರಾಜಮಾರ್ಗವಿಲ್ಲದೆ ಕೊರಗುವ ರಾಜಹಂಸ ಬಸ್ಸುಗಳು

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

ಗುಲ್ಬರ್ಗದ ರಸ್ತೆಗಳ ಗೋಳನ್ನು ಪ್ರಯಾಣಿಕರು ಹೇಳಿಕೊಳ್ಳುವುದನ್ನು ನಿಲ್ಲಿಸಿದ್ದಾರೆ!ಹಾಗಂತ ಅಲ್ಲಿನ ರಸ್ತೆ ಹೇಮಾ ಮಾಲಿನಿ ಕೆನ್ನೆಯಂತಿವೆ ಎಂದರ್ಥವಲ್ಲ. ಹಾಗೆ ಗೋಳು ಹೇಳುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದುಕೊಂಡು ಜನ ಸುಮ್ಮನಾಗಿದ್ದಾರೆ. ಇದೆಲ್ಲಾ ಸುಂಕದವನ ಮುಂದೆ ಸಂಕಟ ಹೇಳಿಕೊಂಡಂತೆ...

ಗುಲ್ಬರ್ಗದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳಿಗೆ ರಸ್ತೆಗಳೇ ಇಲ್ಲ ಎನ್ನುವುದು ಬೇರೆ ಮಾತು. ಈಗ ನಗರದಲ್ಲಿರುವ ರಸ್ತೆಗಳ ಮೇಲೆ ಬಸ್‌ ನಡೆಸಲು ಬಸ್ಸು ಡ್ರೆೃವರ್‌ಗಳೇ ಕೇಳುತ್ತಿಲ್ಲ. ಅದೂ ಕೆಸ್ಸಾರ್ಟಿಸಿ ಬಸ್‌ ಡ್ರೆೃವರ್‌ಗಳು !

ಗುಲ್ಬರ್ಗ ಬೆಂಗಳೂರು ನಡುವೆ ಇರುವ ಪರಮಾತ್ಮ ಪ್ರೀತಿಯ ರಸ್ತೆ ಎಂಬ ಹೊಂಡಗಳ ಮೇಲೆ ಹೊಸ ಬಸ್‌ಗಳನ್ನು ಓಡಿಸುವುದಿಲ್ಲ ಎಂದು ಕೆಸ್ಸಾರ್ಟಿಸಿ ಅಧಿಕಾರಿಗಳೂ ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ. ಆದ್ದರಿಂದ ಈ ರಸ್ತೆಯಲ್ಲಿ ಏನಿದ್ದರೂ ಸೆಕೆಂಡ್‌ ಹ್ಯಾಂಡ್‌ ಹಳೇ ಮಾಡಲ್‌ ಡಕೋಟಾ ಎಕ್ಸ್‌ಪ್ರೆಸ್‌ಗಳು ಮಾತ್ರ ಓಡುತ್ತವೆ.

ಬೆಂಗಳೂರಿನಿಂದ ನೀವು ಗುಲ್ಬರ್ಗಕ್ಕೆ ಹೋಗಿ ಇಳಿಯುವಷ್ಟರಲ್ಲಿ ಸುಸ್ತಾಗಿ ಸೊಂಟದ ಮೇಲೆ ಕೈ ಇಟ್ಟುಕೊಂಡು ನಿಂತಿರುತ್ತೀರಿ. ನಂತರ ಇನ್ನೊಂದು ಬಸ್‌ ಹಿಡಿದು ನಿಮ್ಮ ಹಳ್ಳಿಗೆ ಹೋಗಬೇಕು ಅಂದ್ರೆ ಗೋವಿಂದ ! ಹಳ್ಳಿಗಳ ಕಡೆಗೆ ರಸ್ತೆಯೇ ಇಲ್ಲ. ಇರೋ ರಸ್ತೆಗಳ ಮೇಲೆ ಬಸ್‌ ಓಡಲು ಕೇಳುವುದಿಲ್ಲ. ನಿಮ್ಮ ನಟರಾಜ ಎಕ್ಸ್‌ಪ್ರೆಸ್‌ನ ಸಾಮಥ್ಯ ಪ್ರದರ್ಶನಕ್ಕೆ ತಕ್ಕ ಅವಕಾಶ.

ರಸ್ತೆ ಮೇಲೆ ಹೊಂಡವೋ, ಹೊಂಡವೇ ರಸ್ತೆಯೋ ?
ಅಲ್ಲಿ ಇಲ್ಲಿ ಡಾಂಬರಿನ ತೇಪೆ ಕಂಡಿರುವ ರಸ್ತೆಗಳಂತಿರುವ ಹಾದಿಯಲ್ಲಿ ಹೋಗುವ ಬಸ್ಸುಗಳೂ ನಿಮಗೆ ನೆಮ್ಮದಿ ತರುವುದು ದೂರದ ಮಾತು. ಈಗ ಮಳೆಗಾಲ ಬೇರೆ ಬಂದಿದೆ. ಗುಂಡಿ-ಹೊಂಡಗಳ ಆಳ ಮತ್ತಷ್ಟು ಇಳಿದಿರುವುದರಿಂದ ಬಸ್ಸುಗಳಿಗೂ ಪ್ರಯಾಣಿಕರಿಗೂ, ಬಸ್‌ ಚಾಲಕನಿಗೂ ದೇವರೊಬ್ಬರೇ ಗತಿ.

ಇತರ ಕೆಎಸ್ಸಾರ್ಟಿಸಿ ಡಿಪೋದವರಂತೂ ಗುಲ್ಬರ್ಗಕ್ಕೆ ಬಸ್ಸು ಬಿಡುವುದೇ ಇಲ್ಲವೆನ್ನುತ್ತಾರೆ. ಬೆಂಗಳೂರಿನಿಂದ ಕನಿಷ್ಠ ಸೆಕೆಂಡ್‌ ಹ್ಯಾಂಡ್‌ ಲಕ್ಸುರಿ ಬಸ್‌ ಆದರೂ ಓಡುತ್ತದೆ. ಗುಲ್ಬರ್ಗ ಕೆಎಸ್ಸಾರ್ಟಿಸಿಯವರು ಧಾರವಾಡಕ್ಕೆ ಬಸ್ಸು ಕಳಿಸುತ್ತಾರೆ. ಆದರೆ ಧಾರಾವಡ ಡಿಪೋದವರು ಗುಲ್ಬರ್ಗಾ ಬಸ್‌ ನಿಲ್ದಾಣಕ್ಕೆ ಬಸ್‌ಗಳನ್ನು ಕಳಿಸಲು ಸುತಾರಾಂ ಒಪ್ಪುದಿಲ್ಲ. ಯಾಕೆಂದರೆ ಬಸ್ಸು ಮತ್ತೆ ಧಾರವಾಡಕ್ಕೆ ಬರುವಾಗ ನಟ್ಟು ಬೋಲ್ಟ್‌ ನೆಟ್ಟಗಿರುವುದಿಲ್ಲವಲ್ಲ !

ಈಚೀಚೆಗೆ ಬಸ್ಸುಗಳ ಸಮಸ್ಯೆ ತೃಣದಷ್ಟಾದರೂ ಕಡಿಮೆಯಾಗಿದೆ. ಯಾಕೆಂದರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಬ ನಿಗಮವೊಂದು ಹುಟ್ಟಿಕೊಂಡಿರುವುದರಿಂದ ಡಕೋಟಾ ಎಕ್ಸ್‌ಪ್ರೆಸ್‌ಗಳಾದರೂ ಪ್ರಯಾಣಿಕರನ್ನು ಒಂದೂರಿನಿಂದ ಇನ್ನೊಂದು ಊರಿಗೆ ಹೊತ್ತೊಯ್ಯುತ್ತವೆ. ಬೀದರ್‌, ರಾಯಚೂರು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಈ ನಿಗಮದ ಕೆಲಸ. ಆದರೆ ರಸ್ತೆಗಳ ಹೊಣೆ ಯಾರದ್ದು ?

ನಿಗಮದ ಉಸ್ತುವಾರಿಯನ್ನು ಕೆ.ರಾಧಾಕೃಷ್ಣನ್‌ ವಹಿಸಿಕೊಂಡ ನಂತರ ನಗರದಲ್ಲಿ ಈಶಾನ್ಯವಾಹಿನಿ ಎಂಬ ಎರಡು ಬಾಗಿಲಿನ ಬಸ್ಸುಗಳು ಓಡಾಡುತ್ತಿವೆ. ಹೈದರಾಬಾದ್‌ ಕರ್ನಾಟಕ ವಲಯದಲ್ಲಿಯೂ ಈ ಬಸ್ಸುಗಳು ಓಡಾಡುತ್ತಿವೆ. ಅಲ್ಟ್ರಾ ಡಿಲಕ್ಸ್‌ ಬಸ್‌ಗಳನ್ನು ಓಡಿಸುವ ಪ್ರಯತ್ನವನ್ನೂ ನಿಗಮ ಮಾಡುತ್ತಿದೆ. ರಸ್ತೆ ಸ್ವಲ್ಪ ಸರಿಯಾಗಿರುವ ಕಡೆ ಕೆಎಸ್ಸಾರ್ಟಿಸಿಗೆ ಖಾಸಗಿಯವರ ಕಾಟ.

ಆದರೆ ಖಾಸಗಿಯವರ ತಲೆಗೆ ಹೊಡೆದಂತೆ ಈಗ ಗುಲ್ಬರ್ಗ- ಹೈದರಾಬಾದ್‌ ನಡುವೆ ರಸ್ತೆ ಮೇಲೆ ರಾಜಹಂಸ ಬಸ್ಸುಗಳು ಓಡುತ್ತಿವೆ. ಇವು ಲಾಭ ಮಾಡುತ್ತಿವೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಪ್ರಯಾಣಿಕರಿಗೆ ಇದರಿಂದ ಇನ್ನಷ್ಟು ನೆಮ್ಮದಿಯ ಪ್ರಯಾಣ ದೊರಕಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಟಿಕೆಟ್‌ ಹಣ ಮಾತ್ರ ಇತರ ಬಸ್‌ಗಳಿಗಿಂತ ಶೇ 10ರಷ್ಟು ಹೆಚ್ಚು. ಆದ್ದರಿಂದ ಇದು ಶ್ರೀಮಂತರ ಪಾಲಿನ ಅಮೃತದ ಹಾಗೆ ಕಾಣಿಸುತ್ತದೆ.

ಬಸ್ಸುಗಳು ಎಷ್ಟು ಚೆನ್ನಾಗಿದ್ದರೇನಂತೆ. ರಸ್ತೆಗಳು ನೆಟ್ಟಗಿಲ್ಲದೇ ಇದ್ದರೆ ಬಸ್ಸುಗಳು ಎಷ್ಟು ದಿನ ಚೆಂದವಿದ್ದಾವು ? ಆದ್ದರಿಂದಲೇ ಬೆಂಗಳೂರು - ಗುಲ್ಬರ್ಗದ ನಡುವೆ ರಾಜ ಹಂಸ ಬಸ್ಸುಗಳನ್ನು ಓಡಿಸುವುದು ಸಾಧ್ಯವಾಗುತ್ತಿಲ್ಲ. ರಾಜಹಂಸಕ್ಕೆ ರಾಜ ಮಾರ್ಗ ಬೇಕು ತಾನೇ ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X