ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟೀಲ್‌ ಪಾಳಯದಿ ಸಮರ ಸಿದ್ಧ ಭಿನ್ನರು ; ಏನನ್ನೂ ಕಾಣದ ಕೃಷ್ಣ !

By Staff
|
Google Oneindia Kannada News

ಬೆಂಗಳೂರು : ಸಂಪುಟ ವಿಸ್ತರಣೆಯಲ್ಲಿ ಆಶಾಭಂಗ ಹಾಗೂ ಮುಖಭಂಗಕ್ಕೆ ಈಡಾದ ಕಾಂಗ್ರೆಸ್‌ ಶಾಸಕರು ತಮ್ಮ ಅತೃಪ್ತಿ-ಅಸಮಾಧಾನವನ್ನು ದಿಲ್ಲಿ ಮೇಡಂಗೆ ಮುಟ್ಟಿಸಲು ಸಿದ್ಧತೆ ನಡೆಸಿರುವ ನಡುವೆಯೇ- ಸಂಪುಟ ವಿಸ್ತರಣೆ ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ ಎನ್ನುವ ವದಂತಿಗಳನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಳ್ಳಿಹಾಕಿದ್ದಾರೆ.

ಜುಲೈ 2 ರ ಮಂಗಳವಾರ ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬಂದಂತೆ-
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸಂಪುಟ ಪುನರ್ರಚನೆಯ ಬಗ್ಗೆ ಅಸಮಾಧಾನ ಹೊಂದಿದ್ದರೂ ತಮ್ಮ ಯಾವತ್ತಿನ ಶೈಲಿಯಲ್ಲಿ ತೆಪ್ಪಗಿದ್ದು ಕಾಲಕ್ಕೆ ಕಾಯಲು ನಿರ್ಧರಿಸಿದ್ದಾರೆ. ಆದರೆ, ಸಂಪುಟ ಪುನರ್ರಚನೆಯಲ್ಲಿ ಡಿ.ಕೆ.ಶಿವಕುಮಾರ್‌ ಕೈ ಮೇಲಾಗಿ ತೀವ್ರ ಮುಖಭಂಗ ಅನುಭವಿಸಿದ ಸಚಿವ ಎಚ್‌.ಕೆ.ಪಾಟೀಲ್‌ ಅನಧಿಕೃತವಾಗಿ ಭಿನ್ನಮತೀಯರ ನೇತೃತ್ವ ವಹಿಸಿಕೊಂಡಿದ್ದಾರೆ.

ಯಾರು ಬೇಕಾದರೂ ಹೈಕಮಾಂಡ್‌ಗೆ ದೂರು ನೀಡಬಹುದು
ಭಿನ್ನಮತೀಯರು ದಿಲ್ಲಿಗೆ ಪಾದ ಬೆಳಸಲು ಸಿದ್ಧತೆ ನಡೆಸುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೃಷ್ಣ - ಯಾರು ಬೇಕಾದರೂ ಹೈ ಕಮಾಂಡ್‌ಗೆ ದೂರು ಒಯ್ಯಬಹುದು. ಆದರೆ, ತಮಗೆ ಇಂಥ ಯಾವ ಚಟುವಟಿಕೆಗಳೂ ಗೋಚರಿಸುತ್ತಿಲ್ಲ ಎಂದರು.

ಮುಖ್ಯಮಂತ್ರಿಗಳ ಬಲಗೈ ಎಂದು ಹೆಸರಾಗಿರುವ ಸಚಿವ ಡಿ.ಕೆ.ಶಿವಕುಮಾರ್‌ ಅವರದ್ದು ತದ್ವಿರುದ್ಧದ ಪ್ರತಿಕ್ರಿಯೆ. ಅತೃಪ್ತರ ಆಟ ನಡೆಯುವುದಿಲ್ಲ . 150 ಶಾಸಕರಲ್ಲಿ ಎಲ್ಲರಿಗೂ ಸಚಿವ ಸ್ಥಾನ ನೀಡುವುದು ಸಾಧ್ಯವೂ ಇಲ್ಲ . ಈ ಚಟುವಟಿಕೆಗಳೆಲ್ಲ ಶೀಘ್ರದಲ್ಲೇ ಕೊನೆಗೊಳ್ಳಲಿವೆ ಎನ್ನುವ ವಿಶ್ವಾಸ ಡೀಕೇಶಿ ಅವರದು.

ಸಗೀರ್‌ ಸಿಟ್ಟು - ಕೊಡುವರೆ ರಾಜೀನಾಮೆ?
ತಮಗೆ ಸಿಕ್ಕಿರುವ ವಸತಿ ಖಾತೆಯ ಬಗ್ಗೆ ಸಗೀರ್‌ ಅಹ್ಮದ್‌ ಕೆಂಡಾಮಂಡಲ ಕುದಿಯುತ್ತಿದ್ದಾರೆ. ಕಮರುಲ್‌ ಇಸ್ಲಾಂ ಅಂಥ ಜೂನಿಯರ್‌ ಮಂತ್ರಿಯ ಖಾತೆಯನ್ನು ಸೀನಿಯರ್‌ ಮೋಸ್ಟ್‌ ಆದ ತಮಗೆ ನೀಡುವ ಮೂಲಕ ಕೃಷ್ಣ ಅವಮಾನ ಮಾಡಿದ್ದಾರೆ ಎನ್ನುವುದು ಸಗೀರ್‌ ಅಳಲು. ಈ ನಡುವೆ ಎಚ್‌.ಕೆ.ಪಾಟೀಲ್‌ ಹಾಗೂ ಸಂಸದ ಜಾಫರ್‌ ಷರೀಫ್‌ ಅವರೊಂದಿಗೆ ಗುಪ್ತ ಆಪ್ತ ಸಮಾಲೋಚನೆ ನಡೆಸಿರುವ ಸಗೀರ್‌ ಸಂಪುಟಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದಾರಂತೆ. ಅಷ್ಟೇ ಅಲ್ಲ , ದಿಲ್ಲಿ ಮೇಡಂಗೆ ದೂರು ನೀಡಲೂ ಅವರು ನಿರ್ಧರಿಸಿದ್ದಾರೆ.

ಸಗೀರ್‌ ಅಹ್ಮದ್‌ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವಂತೆಯೇ, ಸಚಿವ ಸ್ಥಾನ ಸಿಗದವರು ಒಬ್ಬೊಬ್ಬರಾಗಿ ಎಚ್‌.ಕೆ.ಪಾಟೀಲ್‌ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಿನ್ನಮತೀಯರ ಸಹಿ ಸಂಗ್ರಹಣೆ ನಡೆಯುತ್ತಿದ್ದು , ಈ ಸಂಖ್ಯೆ 50 ಕ್ಕೆ ಮುಟ್ಟುತ್ತಿದ್ದಂತೆಯೇ ಭಿನ್ನಮತೀಯರು ದೆಹಲಿ ಯಾತ್ರೆ ಕೈಗೊಳ್ಳುವುದು ಹೆಚ್ಚೂ ಕಡಿಮೆ ಖಚಿತವಾಗಿದೆ. ದಿವಂಗತ ಅಜೀಜ್‌ ಸೇಠ್‌ ಅವರ ಪುತ್ರ ಶಾಸಕ ತನ್ವೀರ್‌ ಸೇಠ್‌ ಅವರು ಕೂಡ ಮಂಗಳವಾರ ಪಾಟೀಲ್‌ ಪಾಳಯದಲ್ಲಿ ಕಾಣಿಸಿಕೊಂಡಿದ್ದು ಮಂಗಳವಾರ ರಾಜಕೀಯ ಕುತೂಹಲಿಗಳ ವಿಶೇಷ ಆಸಕ್ತಿಗೆ ಕೇಂದ್ರವಾಗಿತ್ತು .

ಈ ಎಲ್ಲ ಚಟುವಟಿಕೆಗಳು ನಡೆಯುತ್ತಿದ್ದರೂ, ಕೃಷ್ಣ ಹೇಳುತ್ತಾರೆ- ನನ್ನ ಗಮನಕ್ಕೆ ಯಾವುದೂ ಬಂದಿಲ್ಲ !

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X