ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ’

By Staff
|
Google Oneindia Kannada News

ಕಾನ್‌ಪುರ : ಅಖಂಡ ಭಾರತದ ಕನಸು ಕಾಣುತ್ತಿರುವ ವಿಶ್ವ ಹಿಂದೂ ಪರಿಷತ್‌, ಪಾಕಿಸ್ತಾನದ ಜೊತೆಗೆ ಇನ್ನೂ ಮಾರಾ ಮಾರಿ ಯುದ್ಧಕ್ಕೆ ಇಳಿಯದಿರುವ ಅಟಲ್‌ ಬಿಹಾರಿ ವಾಜಪೇಯಿ ಸರಕಾರದ ವಿರುದ್ಧ ಯದ್ವಾ ತದ್ವಾ ಕಿಡಿ ಕಾರಿದೆ.

ಕೇಂದ್ರ ಸರಕಾರವು ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಅದರಲ್ಲಿಯೂ ಮುಖ್ಯವಾಗಿ ವಿದೇಶೀ ನೀತಿಯನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಹೆಚ್‌ಪಿ ವಾಜಪೇಯಿ ಸರಕಾರವನ್ನು ದೂರಿದೆ. ವಿಹೆಚ್‌ಪಿಯ ಕಾರ್ಯದರ್ಶಿ ಓಂಕಾರ್‌ ಭಾವೆ ಕೇಂದ್ರ ಸರಕಾರದ ಮೇಲೆ ಈ ಆಪಾದನೆ ಹೊರಿಸಿದ್ದಾರೆ.

ವಿಹೆಚ್‌ಪಿಯ ಈ ಆಕ್ರೋಶಕ್ಕೆ ಮುಖ್ಯ ಕಾರಣ ಪಾಕಿಸ್ತಾನೀ ವಿಮಾನಗಳ ಹಾರಾಟಕ್ಕೆ ಭಾರತ ಅವಕಾಶ ಮಾಡಿಕೊಟ್ಟಿರುವುದು. ಯುದ್ಧ ಇನ್ನೇನು ಆಗೇ ಬಿಡುತ್ತದೆ ಎಂಬ ನಿರೀಕ್ಷೆಗೆ ವಿರುದ್ಧವಾಗಿ ಭಾರತವು ತಣ್ಣೀರೆರಚಿ, ಯಾವುದೇ ಕಾರಣ ಕೊಡದೆ ಎಲ್ಲ ಕಾವನ್ನೂ ತಣ್ಣಗಾಗಿಸಿದ್ದು.

ಓಂಕಾರ್‌ ಭಾವೆ ಹೇಳುವ ಪ್ರಕಾರ ಸರಕಾರ ಕೇವಲ ವಿದೇಶೀ ಒತ್ತಡಗಳಡಿಯಲ್ಲಿ ಕೆಲಸ ಮಾಡುತ್ತಿದೆ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆ ಹಾಗೂ ಒತ್ತಡಗಳನ್ನು ನಿಭಾಯಿಸುವಲ್ಲಿ ಪ್ರಧಾನಿ ವಾಜಪೇಯಿಗೆ ಸಾಮರ್ಥ್ಯ ಇಲ್ಲ. ಪಾಕಿಸ್ತಾನ ಯಾವತ್ತೂ ತನ್ನ ಧೋರಣೆಯಿಂದ ಹಿಂದಕ್ಕೆ ಸರಿದಿಲ್ಲ. ನಿರ್ಧಾರಗಳನ್ನು ಬದಲಿಸಿಲ್ಲ. ಗಡಿ ಪ್ರದೇಶದಲ್ಲಿ ಇನ್ನೂ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಿಲ್ಲ. ಹಾಗಿರುವಾಗ ಭಾರತ ಯಾಕಾದರೂ ವಿಮಾನ ಯಾನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ? ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವುದು ವಿಷಾದಕಾರಿ ಸಂಗತಿ ಎಂದು ಭಾವೆ ಹೇಳಿದ್ದಾರೆ.

ಡಿಸೆಂಬರ್‌ 13ರಂದು ಸಂಸತ್ತಿನ ಮೇಲೆ ಭಯೋತ್ಪಾಕರ ದಾಳಿ ನಡೆದ ನಂತರ ಇಡೀ ದೇಶವೇ ಪಾಕಿಸ್ತಾನಕ್ಕೆ ಒಂದು ಪಾಠ ಕಲಿಸಲೇ ಬೇಕು ಎಂದು ಅಭಿಪ್ರಾಯಪಟ್ಟಿದೆ. ಹಾಗಿದ್ದರೂ ಕೇಂದ್ರ ಸರಕಾರ ಏನನ್ನೂ ಮಾಡಲಿಲ್ಲ. ಭಾರತೀಯ ಇತಿಹಾಸ ಕಂಡ ಅತ್ಯಂತ ದುರ್ಬಲ ಪ್ರಧಾನಿ - ಅಟಲ್‌ ಬಿಹಾರಿ ವಾಜಪೇಯಿ ಎಂದು ಭಾವೆ ಅಟಲ್‌ಜೀಯನ್ನು ಬಣ್ಣಿಸಿದ್ದಾರೆ.

ಸಂಘ ಪರಿವಾರವೂ ವಾಜಪೇಯಿ ಅವರಿಂದ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಿತ್ತು. ಆದರೆ ಅವರು ಪರಿವಾರದ ಎಲ್ಲ ನಿರೀಕ್ಷೆಗಳನ್ನೂ ಹುಸಿ ಮಾಡಿದ್ದಾರೆ. ಗೃಹ ಸಚಿವ ಎಲ್‌. ಕೆ. ಅಡ್ವಾಣಿ ಕೂಡ ವಿಹೆಚ್‌ಪಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಭಾವೆ ವಿಷಾದಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X