ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಮೇಲ್‌ ಪಾಸ್‌ವರ್ಡ್‌ ಮರೆತಿರಾ... ಹೋಗಲಿ ಬಿಡಿ !

By Staff
|
Google Oneindia Kannada News

ನೀವು ಮರೆಗುಳಿಗಳ ಸಂಘದವರಾ...? ಈ ಮೇಯ್ಲ್‌ ಅಕೌಂಟ್‌ನ ಪಾಸ್‌ವರ್ಡ್‌ ನೆನಪಿಟ್ಟುಕೊಳ್ಳುವುದಂತೂ ದೊಡ್ಡ ತಲೆ ನೋವು ಅಂತ ಅನಿಸುತ್ತಿರಬಹುದು. ಹೆಂಡತಿಯ ಹೆಸರನ್ನೋ, ಪ್ರೇಯಸಿಗಿಟ್ಟ ಮುದ್ದು ಹೆಸರನ್ನೋ ಅಥವಾ ಬೈಕ್‌ ನಂಬರನ್ನೋ ಪಾಸ್‌ವರ್ಡ್‌ ಅಂತ ನೋಂದಾಯಿಸಿದ್ರೂ... ಮರೆವಿನ ಹಾವಳಿ ತಪ್ಪುವುದಿಲ್ಲ.

ಖಾಸಗಿತನವನ್ನು ಉಳಿಸಿಕೊಳ್ಳಲು ನಿಮ್ಮ ಪಾಸ್‌ವರ್ಡ್‌ನ್ನು ಆಗಾಗ ಬದಲಾಯಿಸುತ್ತಿರಿ ಎಂಬ ಎಚ್ಚರಿಕೆ ಬೇರೆ ಕೊಡುತ್ತಿರುತ್ತಾರೆ. ಹಳೇ ಪಾಸ್‌ವರ್ಡ್‌ ಮತ್ತು ಹೊಸ ಪಾಸ್‌ ವರ್ಡ್‌ನೆನಪಿಟ್ಟುಕೊಳ್ಳುವುದು ಇನ್ನೊಂದು ತಲೆನೋವು. ಶಾಲಿನಿ ಎಂಬ ಹೆಸರಿನಲ್ಲಿ ಎಚ್‌ ಸೇರಿಸಿದ್ದೇನೋ ಇಲ್ಲವೋ.. ಬೈಕ್‌ ನಂಬರ್‌ ಹಿಂದೆ ನನ್ನ ಹೆಸರಿನ ಇನಿಷಿಯಲ್‌ ಹಾಕಿರಬೇಕು... ಪಾಸ್‌ವರ್ಡ್‌ ಗೋಳು ಬಲು ಕಷ್ಟವಪ್ಪಾ.

ಈ ಸಮಸ್ಯೆಗೆ ಮೈಕ್ರೋಸಾಫ್ಟ್‌ ಕಂಪೆನಿ ಹೊಸದೊಂದು ಉಪಾಯ ಕಂಡುಕೊಂಡಿದೆ. ನೀವು ಹೆಸರುಗಳನ್ನೋ.. ನಂಬರ್‌ಗಳನ್ನೋ ಪಾಸ್‌ವರ್ಡ್‌ಗಳನ್ನಾಗಿ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಒಂದಷ್ಟು ಸುಂದರ ಹುಡುಗಿಯರ ಚಿತ್ರಗಳಲ್ಲಿ ಒಂದನ್ನು ನಿಮ್ಮ ಪಾಸ್‌ವರ್ಡ್‌ ಆಗಿ ಆಯ್ಕೆ ಮಾಡಿಕೊಳ್ಳಿ ಎಂದರೆ ಹೇಗಿರುತ್ತದೆ...?ಈ ಮೇಯ್ಲ್‌ ಬಳಕೆದಾರರಿಗೆ ಪಾಸ್‌ವರ್ಡ್‌ ರೂಪದಲ್ಲಿ ಚಿತ್ರಗಳನ್ನು ಒದಗಿಸುವ ಬಗ್ಗೆ ಮೈಕ್ರೋಸಾಫ್ಟ್‌ ಕಂಪೆನಿ ಯೋಚಿಸುತ್ತಿದೆ.

ಅಮೆರಿಕಾದ ಮೈಕ್ರೋಸಾಫ್ಟ್‌ ಪ್ರಯೋಗಾಲಯದಲ್ಲಿ ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇಂತಹ ವ್ಯವಸ್ಥೆಯನ್ನು ಒದಗಿಸುವುದರಿಂದ ಪಾಸ್‌ವರ್ಡ್‌ ಮರೆಯುವವರಿಗೆ ತುಂಬಾ ಉಪಯೋಗವಾಗಲಿದೆ ಎಂದು ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸುತ್ತಿರುವ ಮೈಕಲ್‌ ರೋ ಕೂಡ ಒಪ್ಪುತ್ತಾರೆ.

ಕ್ರಿಪ್ಟಿಕ್‌ ಸಾಫ್ಟ್‌ವೇರ್‌ ಆ್ಯಂಟಿ ವೈರಸ್‌ ಸಂಸ್ಥೆಯ ಮುಖ್ಯತಂತ್ರಜ್ಞ ಡೇವ್‌ ಡ್ಯೂಕ್‌ ಈ ವ್ಯವಸ್ಥೆಯ ಅಪಾಯದ ಬಗ್ಗೆಯೂ ಹೇಳುತ್ತಾರೆ. ಈ ವ್ಯವಸ್ಥೆಯ ಅಂತಹ ಕಷ್ಟದ್ದೇನಲ್ಲ. ಆದರೆ ಬ್ರಿಟ್ನಿ ಸ್ಪಿಯರ್ಸ್‌ನ ಚಿತ್ರವೊಂದನ್ನು ಸಂಪಾದಿಸುವುದೂ ಕೂಡ ಕಷ್ಟವಲ್ಲ ತಾನೇ..ಇದು ಹ್ಯಾಕರ್ಸ್‌ಗೆ ತುಂಬ ಅನುಕೂಲ ಮಾಡಿಕೊಡುತ್ತದಲ್ಲವೇ ?

ಆದರೆ ಈ ಮೇಯ್ಲ್‌ ಸರ್ವರ್‌ಲ್ಲಿ ಪಾಸ್‌ವರ್ಡ್‌ ಬದಲಿಗೆ ಚಿತ್ರಗಳನ್ನು ಶೇಖರಿಸುವ ಸಾಮರ್ಥ್ಯ ಇರಬೇಕು. ಅಲ್ಲದೆ ಈ ಚಿತ್ರಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಗೆ ಸಹಜವಾಗಿಯೇ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಈಮೇಯ್ಲ್‌ ಬಳಕೆದಾರನಿಗೆ ಕಿರಿಕಿರಿಯಾಗುತ್ತೆ ಎನ್ನುವುದು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ಪೀಟರ್‌ ಸೋಮರ್‌ ವಾದ.

ಏನೇ ಇರಲಿ. ಈ ಮೇಯ್ಲ್‌ ಬಳಕೆದಾರರಿಗೆ ಹೀಗೊಂದು ಅವಕಾಶ ಮಾಡಿಕೊಡುವುದರಲ್ಲಿ ತಪ್ಪೇನಿದೆ... ಪಾಸ್‌ವರ್ಡ್‌ ಮರೆತು ಹೋಗುವ ಚಟ ಇರುವವರು ಮಾತ್ರ ಇದನ್ನು ಬಳಸಿದರಾಯಿತು. ಉಳಿದವರು ಯಥಾ ಪ್ರಕಾರ ಮೇಯ್ಲ್‌ ಬಳಸುವುದಕ್ಕೆ ಅಡ್ಡಿಯಿಲ್ಲವಲ್ಲ ಎಂಬುದು ಮೈಕ್ರೋಸಾಫ್ಟ್‌ ಕಂಪೆನಿಯ ಲೆಕ್ಕಾಚಾರ !

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X