ಓಡುತ್ತಿದ್ದ ಬಾಲ್ಡ್ವಿನ್ ಶಾಲೆಯ ಹುಡುಗಿ ಕುಸಿದು ಬಿದ್ದು ಸಾವು !
ಬೆಂಗಳೂರು : ಮುಂಜಾನೆ ನಗುನಗುತ್ತಾ ಬಾಲ್ಡ್ವಿನ್ ಶಾಲೆಗೆ ಹೋದ ಹತ್ತರ ಪುಟ್ಟ ಹುಡುಗಿ ಭಾಗ್ಯ ಗೊಲೇಚ ಬುಧವಾರ ಮಧ್ಯಾಹ್ನದ ಹೊತ್ತಿಗೆ ಹೆಣವಾಗಿದ್ದಳು !
ಈಗಿನ್ನೂ ಶಾಲೆಗಳು ತೆರೆದಿವೆ. ತರಗತಿಗಳಿಗೆ ಇನ್ನೂ ಲಯ ಸಿಕ್ಕಿರುವುದಿಲ್ಲ. ಆಟೋಟ ಸದ್ಯದ ಸ್ಥಿತಿಯಲ್ಲಿ ಮಕ್ಕಳ ಮೊದಲ ಆಯ್ಕೆ. ಆದರೆ ಬಾಲ್ಡ್ವಿನ್ ಶಾಲೆಯ ಪಿಟಿ ಮೇಡಂ ಆಟ ಆಡಿಸುವ ತರಗತಿಯಲ್ಲಿ ಓಟ ಓಡಿಸಿದರು. ಅದೇನು ದೈಹಿಕ ತರಪೇತಿಯೋ ದಂಡನೆಯೋ ಗೊತ್ತಿಲ್ಲ. ಮೈದಾನದ ಐದು ಸುತ್ತು ಸುತ್ತುವಂತೆ ಇಡೀ 6ನೇ ಇಯತ್ತೆಯ ಎಲ್ಲಾ ಮಕ್ಕಳಿಗೂ ಹೇಳಿದ್ದಾರೆ. ಅವರಲ್ಲಿ ಭಾಗ್ಯ ಕೂಡ ಒಬ್ಬಳು. ಎರಡನೇ ಸುತ್ತು ಇನ್ನೂ ಪೂರೈಸಿರಲಿಲ್ಲ ; ಭಾಗ್ಯ ಕುಸಿದು ಬಿದ್ದಳು. ಕಣ್ಣು ತೆರೆಯಲಿಲ್ಲ. ಹತ್ತಿರದ ಲಾಂಗ್ ಫೋರ್ಡ್ ಟೌನ್ನಲ್ಲಿರುವ ರಿಪಬ್ಲಿಕ್ ನರ್ಸಿಂಗ್ ಹೋಂಗೆ ಭಾಗ್ಯಳನ್ನು ಕೊಂಡೊಯ್ಯಲಾಯಿತು. ಆದರೆ ಅಷ್ಟು ಹೊತ್ತಿಗೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಭಾಗ್ಯಾಳ ತಂದೆ ಲಲಿತ್ ಗೊಲೇಚ ಅವರಿಗೆ ಮಧ್ಯಾಹ್ನ 2.45ರ ವೇಳೆಗೆ ಶಾಲೆಯವರು ದೂರವಾಣಿ ಮೂಲಕ ವಿಷಯ ತಿಳಿಸುತ್ತಿದ್ದಂತೆ, ಅವರು ರಿಪಬ್ಲಿಕ್ ನರ್ಸಿಂಗ್ ಹೋಂಗೆ ಧಾವಿಸಿದರು. ಅವರೊಡನೆ ಬಂಧುಗಳೂ ಇದ್ದರು. ಹತಾಶೆ ಮುಗಿಲು ಮುಟ್ಟಿತ್ತು. ನಂತರ ಭಾಗ್ಯಾಳ ಕಣ್ಣುಗಳನ್ನು ಮಲ್ಯ ಆಸ್ಪತ್ರೆಯಲ್ಲಿ ದಾನ ಮಾಡಲಾಯಿತು. ಮಲ್ಯ ಆಸ್ಪತ್ರೆಯಲ್ಲೂ ಭಾಗ್ಯಾಳ ಅಸಂಖ್ಯ ಬಂಧುಗಳು ಜಮಾಯಿಸಿದ್ದರು. ಶಾಲಾ ಸಿಬ್ಬಂದಿ ಬಗ್ಗೆ ಅಲ್ಲಿ ವ್ಯಕ್ತವಾದದ್ದು ಹಿಡಿಶಾಪ.
ಈ ಬಗ್ಗೆ ಶಾಲಾ ಆಡಳಿತಾಧಿಕಾರಿ ಕರ್ನಲ್ ಎ.ಕೆ.ಥಾರು ವಿಷಾದ ಸೂಚಿಸಿದ್ದಾರೆ. ಇತರೆ ಮಕ್ಕಳ ಜೊತೆ ಭಾಗ್ಯ ಕೂಡ ಓಡಿದಳು. ಆಕೆಗೆ ಯಾವುದೋ ಆರೋಗ್ಯದ ತೊಂದರೆ ಇದ್ದಿರಬೇಕು. ಸಾವಿಗೆ ಓಡಿಸಿದ್ದೇ ಕಾರಣ ಎಂದು ಖಂಡಾತುಂಡಾಗಿ ಹೇಳಲಾಗದು ಎನ್ನುತ್ತಾರೆ ಥಾರು. ನಮ್ಮ ಮಗಳನ್ನು ಖುದ್ದು ನಾನೇ ಶಾಲೆಗೆ ಬಿಟ್ಟಿದ್ದೆ. ಅವಳು ಆರೋಗ್ಯವಾಗಿದ್ದಳು. ಇದೆಲ್ಲಾ ಶಾಲೆಯವರು ಕೊಟ್ಟಿರುವ ಶಿಕ್ಷೆಯ ಪರಮಾವಧಿ ಎನ್ನುತ್ತಾರೆ ಲಲಿತ್.
ಭಾಗ್ಯಾಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದ ನಂತರವೇ ಈ ಪ್ರಕರಣದ ಬಗ್ಗೆ ಸೂಕ್ತ ಮಾಹಿತಿ ದೊರೆಯುವುದು ಎನ್ನುತ್ತಿದ್ದಾರೆ ವೈದ್ಯರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...