ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಹೊಳೇಲಿ ಹುಲಿ ನಾಪತ್ತೆ,ಬುಡಮೇಲಾದ ನೂರಾರು ಮರ ಪತ್ತೆ !

By Staff
|
Google Oneindia Kannada News

ಮೈಸೂರು : ದುಷ್ಕರ್ಮಿಗಳು ಹೆಣೆದ ಬಲೆಗೆ ಸಿಲುಕಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಲಿಯಾಂದು ಗಾಯಗೊಂಡಿರುವುದು ಹಾಗೂ ಅದು ತಪ್ಪಿಸಿಕೊಂಡು ಹೋಗಿರುವುದು ದಿಟ. ಹಾಗಂತ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಎಸ್‌.ಕೆ.ಚಕ್ರವರ್ತಿ ಈಗ ಒಪ್ಪಿಕೊಂಡಿದ್ದಾರೆ. ಪ್ರವಾಸಿಗರು ಈ ಮಾಹಿತಿ ಬಗ್ಗೆ ತಿಳಿಸಿದಾಗ, ಅದಕ್ಕೆ ಯಾರೂ ಓಗೊಟ್ಟಿರಲಿಲ್ಲ.

ಈಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸಿಬ್ಬಂದಿಯ ಮೂರನೇ ಒಂದು ಭಾಗ ಗಾಯಗೊಂಡು, ಕಾಣೆಯಾಗಿರುವ ಹುಲಿಯ ತಲಾಷಿನಲ್ಲಿದ್ದಾರೆ. ಹುಲಿಯ ದವಡೆಯಲ್ಲಿ ದೊಡ್ಡ ಗಾಯವಾಗಿದೆ ಎಂಬುದೂ ಗೊತ್ತಾಗಿದೆ. ಪ್ರವಾಸಿಗರು ಹೇಳುವಂತೆ ಈ ಘಟನೆಗೆ ಕಾರಣ ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ.

ಹುಲಿಗೆ ಗಾಯವಾಗಿರುವ ವಿಷಯವನ್ನು ಕೆಲವು ಪ್ರವಾಸಿಗರು ಅರಣ್ಯಾಧಿಕಾರಿಗಳಿಗೆ ಮುಟ್ಟಿಸಿದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಅರಣ್ಯಾಧಿಕಾರಿಗಳು, ಆಧಾರ ರಹಿತ ಎಂದು ಸುಮ್ಮನಾದರು. ಹುಲಿ ತಲೆ ಮರೆಸಿಕೊಂಡ ಮೂವತ್ತಾರು ಗಂಟೆಗಳವರೆಗೆ ಅದರ ಪರಿವೆಯೇ ಇಲ್ಲದಂತೆ ಇದ್ದುಬಿಟ್ಟರು. ಆಮೇಲೆ ಬಿಸಿ ತಟ್ಟಿದ ಮೇಲೆ ಎಚ್ಚೆತ್ತುಕೊಂಡಿದ್ದಾರೆ.

ಇಂಥಾ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಹತ್ತು ವರ್ಷಗಳ ಹಿಂದೆ ಕೂಡ ಹೀಗೇ ಆಗಿತ್ತು. ಆಗ ಉನ್ನತ ಮಟ್ಟದ ವಿಚಾರಣೆಗೂ ಆದೇಶ ಹೊರಡಿಸಲಾಗಿತ್ತು. ಆದರೆ ಆಗ ವೀರನ ಹೊಸಹಳ್ಳಿಯಲ್ಲಿ ಹುಲಿ ಸತ್ತೇ ಹೋಗಿತ್ತು.

ಈಗ ಕಾಣೆಯಾಗಿರುವ ಹುಲಿಯನ್ನು ಬೇಗ ಪತ್ತೆ ಮಾಡದೆ ಹೋದಲ್ಲಿ ಅದಕ್ಕೂ ಇದೇ ಗತಿ ಬಂದೊದಗುವ ಅಪಾಯವಿದೆ. ಅಕ್ರಮವಾಗಿ ಹುಲಿ ಬೇಟೆಯಾಡುವವರಿಗೆ ಕಾಸಿನಾಸೆಗೆ ನೆರವಾಗುವ ಸಿಬ್ಬಂದಿ ಕೂಡ ಇದ್ದಾರೆ ಎಂಬ ಬಲವಾದ ಗುಮಾನಿ ಇದೆ. ಆದರೆ, ಅರಣ್ಯಾಧಿಕಾರಿಗಳು ಇದನ್ನು ಒಪ್ಪುತ್ತಿಲ್ಲ.

ನೂರಾರಿ ಮರಗಳು ಬುಡಮೇಲು

ಹುಲಿ ಕಾಣೆಯಾಗಿರುವ ಇದೇ ಅರಣ್ಯ ವ್ಯಾಪ್ತಿಯ ಲಕ್ಷ್ಮಣ ತೀರ್ಥ ನದಿಯ ತಡದಲ್ಲಿರುವ ಕೋಣನ ಹೊಸಹಳ್ಳಿ ಮತ್ತು ಕೊಳದಮೂಲೆಯ ನಡುವೆ ನೂರಾರು ಮರಗಳು ಬುಡ ಸಮೇತ ಕಿತ್ತು ಬಿದ್ದಿವೆ. ಕೆಲವು ಮರಗಳು ಮಳೆಗೆ ಉರುಳಿ ಬಿದ್ದಿದ್ದರೂ, ಮಣ್ಣು ಕುಸಿದು ಹೋಗಿರುವ ಇನ್ನು ಕೆಲವು ಮರಗಳನ್ನು ದುಷ್ಕರ್ಮಿಗಳೇ ಬುಡಮೇಲು ಮಾಡಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರೇತರ ಸಂಸ್ಥೆಯಾಂದರ ಪ್ರಕಾರ ಬಿದಿರುಗಳ್ಳರು ಸಮಯ ನೋಡಿ ಈ ಮರಗಳನ್ನು ಒಂದೊಂದಾಗಿ ಸಾಗಿಸುತ್ತಿದ್ದಾರೆ. ಈ ವಿಷಯವಾಗಿ ಅರಣ್ಯಾಧಿಕಾರಿಗಳು ಏನು ಮಾಡುತ್ತಿದ್ದಾರೋ?

ಅಂದಹಾಗೆ, ಇಂದು ವಿಶ್ವ ಪರಿಸರ ದಿನ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿರುವ ಇಂಥಾ ಕೃತ್ಯಗಳನ್ನು ಮಟ್ಟ ಹಾಕದಿದ್ದಲ್ಲಿ ಇಂಥಾ ದಿನಾಚರಣೆಗೆ ಅರ್ಥವಿರುವುದಿಲ್ಲ . ಏನಂತೀರಿ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X