ಪೆಟ್ರೋಲ್,ಡೀಸೆಲ್ ದರ ಏರಿಕೆ ; ಬಂಕ್‌ಗಳಲ್ಲಿ ದಾಸ್ತಾನು ಮಾಯ!
ಬೆಂಗಳೂರು : ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರಿಗೆ ಕ್ರಮವಾಗಿ 2.50 ರೂಪಾಯಿ ಹಾಗೂ 1.50 ರೂಪಾಯಿ ಏರಿಸಲಾಗಿದ್ದು ಸೋಮವಾರ ಮಧ್ಯರಾತ್ರಿಯಿಂದಲೇ ಈ ದರ ಜಾರಿಗೆ ಬಂದಿದೆ.
ಅಂತರರಾಷ್ಟ್ರೀಯ ಕಚ್ಚಾತೈಲದ ಬೆಲೆ ಮಾರ್ಚ್‌ನಿಂದಲೇ ಬ್ಯಾರೆಲ್‌ವೊಂದಕ್ಕೆ 5 ಡಾಲರ್‌ಗಳಷ್ಟು ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಅನಿವಾರ್ಯ ಎಂದು ಸೋಮವಾರ ಬೆಲೆ ಏರಿಕೆ ಘೋಷಿಸಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ರಾಮ್‌ನಾಯಕ್ ಹೇಳಿದ್ದಾರೆ.
ಬೆಂಗಳೂರಲ್ಲಿ ದರಿ ಏರಿಕೆ-
ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಒಂದರ ಬೆಲೆ 2.61 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 1.54 ರೂಪಾಯಿ ಹೆಚ್ಚಾಗಲಿದೆ. ಈ ದರದಲ್ಲಿ ಕೆಲ ವ್ಯತ್ಯಾಸವಿದ್ದು ಆಯಾ ಪ್ರದೇಶಗಳಲ್ಲಿನ ತೆರಿಗೆ ಹಾಗು ಸಾಗಾಟ ದರಗಳ ಮೇಲೆ ಪರಿಷ್ಕೃತ ದರವನ್ನು ಪ್ರಕಟಿಸಲಾಗುವುದು.
ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರವನ್ನು ಬುಧವಾರದಿಂದ ಏರಿಸಲು ನಿರ್ಧರಿಸಿದೆ. ಬಸ್ ಪ್ರಯಾಣ ದರ ಶೇಕಡಾ 6ರಷ್ಟು ಹೆಚ್ಚಾಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ. ತೈಲ ಬೆಲೆ ಏರಿಕೆ ಕುರಿತ ಸುದ್ದಿ ಹೊರ ಬೀಳುವ ಮುನ್ನವೇ ವಾಹನಗಳ ಮಾಲಿಕರು ಮುಂಗಡವಾಗಿ ಪೆಟ್ರೋಲ್ ಖರೀದಿಸಲು ಆಸಕ್ತಿ ತೋರಿಸಿದರು. ಆದರೆ ಬಂಕ್‌ಗಳಲ್ಲಿ ಅವರನ್ನು ಎದುರುಗೊಂಡದ್ದು ನೋ ಸ್ಟಾಕ್ ಎನ್ನುವ ಬೋರ್ಡ್!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...