ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧದ ನಡುವೆಯೂ‘ನಿಖಿತಾ’ಗೆ ಕೃತಕ ಗರ್ಭಧಾರಣೆ ಮರುಯತ್ನ

By Staff
|
Google Oneindia Kannada News

ಮೈಸೂರು : ‘ನಿಖಿತಾ’ಳನ್ನು ತಾಯಾಗಿಸುವ ಕೃತಕ ವಿಧಾನ ವಿಫಲವಾಗಿದ್ದರೂ, ಮರಳಿ ಯತ್ನ ಸಾಗಿದೆ. ಇದಕ್ಕೆ ಪ್ರಾಣಿ ದಯಾ ಸಂಘ ತಗಾದೆ ತೆಗೆದಿದೆ ಕೂಡ.

ಜಯಚಾಮರಾಜೇಂದ್ರ ಮೃಗಾಲಯದ ನಿಖಿತಾ ಹೆಣ್ಣು ಚಿಂಪಾಂಜಿ. ಈಕೆಯ ಜೊತೆ ಇನ್ನೂ ಎರಡು ಚಿಂಪಾಂಜಿಗಳಿವೆ. ಮೂರು ಗಂಡು ಚಿಂಪಾಂಜಿಗಳೂ ಇವೆ. ಆದರೆ, ಈ ಪೈಕಿ ‘ವಾಲಿ’ ಮಾತ್ರ ಪ್ರೌಢ. ಆದರೆ ನಾಲ್ಕು ಗೋಡೆಯ ಮಧ್ಯೆ ವಾಲಿ ನಿಖಿತಾಳ ಜೊತೆ ಕೂಡಲು ಆಸಕ್ತಿ ತೋರಲೇ ಇಲ್ಲ. ಇಂಥಾ ಸಂದರ್ಭದಲ್ಲಿ ನಗರದ ಮೆಡಿವೇವ್‌ ಕೃತಕ ಗರ್ಭಧಾರಣಾ ಸಂಶೋಧನಾ ಕೇಂದ್ರದ ಡಾ.ಶರತ್‌ ಕುಮಾರ್‌ ನಿಖಿತಾಳಿಗೆ ಕೃತಕ ಗರ್ಭ ಧಾರಣೆ ಮಾಡಿಸುವ ಪ್ರಯೋಗಕ್ಕೆ ಕೈಹಾಕಿದರು. ಮೃಗಾಲಯದ ವೈದ್ಯರಾದ ಡಾ.ಖಾದ್ರಿ ಮತ್ತು ಡಾ.ವಲಾಂಡಿಕರ್‌ ಇದಕ್ಕೆ ನೆರವಾದರು.

ಕಳೆದ ಏಪ್ರಿಲ್‌ನಲ್ಲಿ ಕೃತಕ ವಿಧಾನದ ಮೂಲಕ ‘ನಿಖಿತಾ’ಳಿಗೆ ಕೃತಕ ಗರ್ಭಧಾರಣೆ ಪ್ರಯೋಗ ನಡೆಯಿತು. ನಿಖಿತಾ ಗರ್ಭಿಣಿಯಾಗಿದ್ದರೆ, ಅದು 40 ದಿನಗಳಲ್ಲಿ ಸ್ಪಷ್ಟವಾಗುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಪ್ರಯೋಗ ವಿಫಲವಾಯಿತು. ಡಾ.ಶರತ್‌ ಕುಮಾರ್‌ ಪ್ರಕಾರ ಇಂಥಾ ಪ್ರಯೋಗಗಳು ಮೊದಲ ಯತ್ನದಲ್ಲೇ ಫಲಿಸುವ ಸಾಧ್ಯತೆ ಕಡಿಮೆ. ಐದಾರು ಯತ್ನಗಳು ನಡೆಯಬೇಕು. ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಕೂಡ ಇದನ್ನು ಸಮರ್ಥಿಸುತ್ತಾರೆ.

ಆದರೆ, ಪ್ರಾಣಿ ದಯಾ ಸಂಘದವರು ನಿಖಿತಾಳನ್ನು ಪ್ರಯೋಗ ಪಶು ಮಾಡಲಾಗುತ್ತಿದೆ ಎಂದು ದೂರುತ್ತಿದ್ದಾರೆ. ಏಪ್ರಿಲ್‌ನಲ್ಲಿ ಒಮ್ಮೆ ಕೃತಕ ಗರ್ಭಧಾರಣೆ ಮಾಡಿದ ನಾಲ್ಕು ದಿನಗಳ ನಂತರ ಮಾಧ್ಯಮದವರಿಗೆ ತೋರಿಸಲು ಮತ್ತೆ ಅದೇ ಪ್ರಯೋಗವನ್ನು ವೈದ್ಯರು ಮಾಡಿದ್ದಾರೆ. ಇದು ಖಂಡನೀಯ ಎನ್ನುತ್ತಿದೆ ಪ್ರಾಣಿ ದಯಾ ಸಂಘ.

ಒಂದು ವೇಳೆ ಕೃತಕ ಗರ್ಭಧಾರಣೆಯಿಂದ ಚಿಂಪಾಂಜಿ ಸಂತತಿ ಉಳಿಸಿ, ಬೆಳೆಸಿಕೊಂಡು ಹೋಗುವುದು ಸಾಧ್ಯವಾಗುವುದಾದರೆ, ಅದರ ಹೆಚ್ಚುಗಾರಿಕೆ ನಮ್ಮ ಮೃಗಾಲಯಕ್ಕೆ ಸಲ್ಲಲಿದೆ. ಇಂಥಾ ಪ್ರಯತ್ನಗಳು ಸ್ವಾಗತಾರ್ಹ ಎನ್ನುತ್ತಿದ್ದಾರೆ ಅರಣ್ಯ ಸಂರಕ್ಷಣಾಧಿಕಾರಿ ಚಕ್ರವರ್ತಿ.

ಅಂದಹಾಗೆ, ನಿಖಿತಾಳ ಮೇಲೆ ಎರಡನೇ ಸುತ್ತಿನ ಕೃತಕ ಗರ್ಭಧಾರಣಾ ಪ್ರಯೋಗ ಇದೀಗ ಮುಂದುವರೆದಿದೆ !

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X