ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರದೋ ಮನೆ ಛಾವಣಿಯಡಿ ಅವಿತುಕೊಳ್ಳುತ್ತಲೇ ಒದ್ದೆಯಾಗೋದು...

By Staff
|
Google Oneindia Kannada News

ಕಳೆದ ವರ್ಷ ಈ ಹೊತ್ತಿಗೆ ಬೆಂಗಳೂರು ಹೀಗಿರಲಿಲ್ಲ. ಹನಿಮಳೆಯ ವಿನಃ ಸೋನೆ ಸುರಿವ ಮೋಡಗಳು ಇತ್ತ ಕಾಲು ಹಾಕಿರಲಿಲ್ಲ. ಸದ್ಯಈ ವರ್ಷ ಹಾಗಿಲ್ಲಪ್ಪಾ. ಮಳೆಯ ಕುಡಿ ಕುಡಿದು ನೆಲ ತಣಿದಿದೆ. ಬೆಂಗಳೂರಿಗರೂ ಸಂಜೆ ಮಳೆಗೆ ತಮ್ಮನ್ನೇ ಒಡ್ಡಿಕೊಂಡಿದ್ದಾರೆ.

ಹೌದು. ಈಗ ಎಲ್ಲರ ಕಡೆಯೂ ಮಳೆಗಾಲದ ಮೂಡ್‌. ಗಾಂಧಿ ಬಜಾರಿನ ರಸ್ತೆಗಳಲ್ಲಿ ಪುಟ್ಟ ಪುಟ್ಟ ಬೆಟ್ಟದಂತೆ ಗಾಡಿ ಮೇಲೆ ಪೇರಿಸಿಟ್ಟ ಹಣ್ಣಿನ ರಾಶಿಯೀಗ ಸಂಜೆ ಹೊತ್ತು ಬಣ್ಣಬಣ್ಣವಾಗಿ ಹೊಳೆಯುವುದಿಲ್ಲ. ಅವುಗಳನ್ನೆಲ್ಲ ಹೊಸ ಪ್ಲಾಸ್ಟಿಕ್‌ಗಳು ಮುಚ್ಚಿ ಬಿಟ್ಟಿವೆ. ಸಂಜೆಯಾದರೆ ಸಾಕು. ಕಪ್ಪು ಮೋಡಗಳಡಿಯಲ್ಲಿ ಪ್ರಯಾಣಿಕರು ಮನೆ ಸೇರಲು ತವಕಿಸುತ್ತಿರುವಂತೆಯೇ ಮಳೆ ಧಾಂಗುಡಿಯಿಟ್ಟು ಬಿಡುತ್ತದೆ.

ಮತ್ತೇನು ಮಾಡುವುದು ಹೇಳಿ. ಮರದಡಿಯಲ್ಲಿ ಬೈಕು ನಿಲ್ಲಿಸಿ, ಯಾರದೋ ಮನೆಯ ಛಾವಣಿಯೆಡೆಯಲ್ಲಿ ಅವಿತುಕೊಳ್ಳುತ್ತಲೇ ಒದ್ದೆಯಾಗುವುದು. ಬಿಟಿಎಸ್‌ ಬಸ್‌ನಿಂದ ಇಳಿದು, ಬಸ್‌ಸ್ಟ್ಯಾಂಡ್‌ ಇಲ್ಲದ ಬೆಂಗಳೂರಿಗಿಷ್ಟು ಶಾಪ ಹಾಕಿ ಅಂಗಡಿಯಾಂದರೊಳಗೆ ನುಸುಳಿಕೊಳ್ಳುವುದು. ಮನೆಗೆ ವಾಪಾಸಾಗುವ ಹೊತ್ತಿಗೆ ಕಪ್ಪು ಕೆಸರಿನಲ್ಲಿ ಮುಳುಗೆದ್ದವರಂತೆ... ಗೀಸರು ಹಾಕಿಕೊಳ್ಳೋಣವೆಂದರೆ ಹಾಳು ಕರೆಂಟು ನೆಟ್ಟಗಿರಬೇಕಲ್ಲಾ.

ಹನಿ ಹನಿ ಮಳೆ ಹನಿ, ಚಿಟಪಟ ಮಳೆ ಹನಿ...

ಮಧ್ಯಾಹ್ನವೇ ಜಮಾಯಿಸುವ ಕಪ್ಪು ಕಪ್ಪು ಮೋಡಗಳಿಗೆ ಮಕ್ಕಳು ಶಾಪ ಹಾಕದೆ ಇನ್ನೇನು ಮಾಡ್ತಾರೆ ಹೇಳಿ. ಜೂನ್‌1ರ ಸಂಭ್ರಮದೊಂದಿಗೆ, ಶನಿವಾರ ಹೊಸ ಬ್ಯಾಗು, ಹೊಸ ಪುಸ್ತಕ, ಹೊಸ ಶೂ ಹಾಕಿಕೊಂಡು ಶಾಲೆಗೆ ಹೋದವರು ಮಧ್ಯಾಹ್ನ ಮನೆಗೆ ಬಂದು ಭುಜ ನೋವು ಅಂತ ಮಲಗಿಬಿಟ್ಟರು. ‘ಎರಡು ದಿನ.. ಆಮೇಲೆ ಅಭ್ಯಾಸವಾಗುತ್ತೆ ಬಿಡು’ ಅಂತ ಅಮ್ಮನ ಹತ್ತಿರ ಮುದ್ದು ಮಾಡಿಸಿಕೊಂಡರೂ ಸಮಾಧಾನ ಇಲ್ಲ. ಟ್ಯೂಷನ್‌ ಗೋಳಿಲ್ಲದ ವರ್ಷದ ಕೊನೆಯ ಭಾನುವಾರ, ಬೇಲ್‌ಪುರಿ ತಿನ್ನಬೇಕು ಅಂತ ಕಂಡ ಕನಸಿಗೆ ಮಳೆ ಕಲ್ಲು ಹಾಕುವುದೇ ..?

ಮಳೆನಿಂತ ನಂತರ ರೆಕ್ಕೆ ಒದ್ದೆ ಮಾಡಿಕೊಂಡ ಹಕ್ಕಿಯಂತೆ ಗುನುಗುತ್ತಾ , ರಸ್ತೆ ಮೇಲಿನ ನೀರು ನೋಡುತ್ತಾ ನಡೆಯುತ್ತಿದ್ದರೆ ಏನು ಖುಷಿ ! ಅರರೆ.. ಈ ಗಾಂಧಿ ಬಜಾರಿನಲ್ಲಿ ಹಣ್ಣುಗಳ ಗಾಡಿಯದ್ದೇ ಕಾರುಬಾರು ಎಂದುಕೊಂಡರೆ ಪಕ್ಕದ ಗಾಡಿಯಲ್ಲೇ ನೀಟಾಗಿ ಪೇರಿಸಿಟ್ಟ ಬಣ್ಣ ಬಣ್ಣದ ಫುಟ್‌ ಬಾಲ್‌ಗಳು ! ಕೊಳ್ಳೋಣ ವೆಂದರೆ ಆಡಲು ಜಾಗವಿಲ್ಲ. ಟೀವಿಯಲ್ಲಿ ಜಾಹೀರಾತು ಕೂಡ ಫೂಟ್‌ಬಾಲ್‌ಗೆ ಅಂಟಿಕೊಂಡೇ ಬರುತ್ತದೆ. ವರ್ಲ್ಡ್‌ಕಪ್‌ ಟು ವರ್ಲ್ಡ್‌ ಕಪ್‌ ಗ್ಯಾರಂಟಿ... ಅಂತ ಕಿರುಚಿಕೊಳ್ಳುತ್ತಾರೆ. ಹೋಗಲಿ ಅಂತ ಸುಮ್ಮನೆ ಆಕಾಶ ನೋಡುತ್ತಾ ಹೆಜ್ಜೆ ಹಾಕಿದರೆ ಅಲ್ಲಿ ಮೋಡಗಳು ಏನೋ ಮಸಲತ್ತು ನಡೆಸುತ್ತಿರುತ್ತವೆ ! ಇನ್ನಷ್ಟು ಹೊತ್ತು ಈ ಥಂಡಿಯಲ್ಲಿ ನಡೆಯುತ್ತಿದ್ದರೆ ಸೈನಸಿಟೀಸ್‌ ಕಾಟ ಮತ್ತೆ ತಪ್ಪಿದ್ದಲ್ಲ ಅಂತ ಎಚ್ಚೆತ್ತುಕೊಂಡು ಮನೆಯಾಳಗೆ ತೂರಿಕೊಂಡುಬಿಡುವುದು.

ಅಷ್ಟೊತ್ತಿಗೆ ಸಿಡಿಲು ‘ಢಂಢಂ ಢಾಂ’ ಅಂತ ಸದ್ದು ಮಾಡಲು ಶುರು ಮಾಡುತ್ತದೆ. ಹೆದರಿಕೊಂಡ ಅಜ್ಜಿ ಗಟ್ಟಿಯಾಗಿ ಅರ್ಜುನ ಸ್ಮರಣೆ ಮಾಡಿಕೊಳ್ಳುತ್ತಾಳೆ.. ‘ಅರ್ಜುನಾ ಫಲ್ಗುಣಾ ಪಾರ್ಥಾ ಕಿರೀಟೀ ಶ್ವೇತವಾಹನ... ! ’ ನೀವೇನು ಹೇಳುತ್ತೀರೀ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X