ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಟು ಬೇಕಾ ಸೈಟು- 3

By Staff
|
Google Oneindia Kannada News

*ಬಿ. ಎಸ್‌. ಮಹದೇವಪ್ಪ

Bangalore Site Seeing! A visionಈ ನಾಲ್ಕರ ಪೈಕಿ ಬಿಡಿಎ ಹಾಗೂ ಕಾರ್ಪೋರೇಷನ್‌ಗಳ ಬಗ್ಗೆ ಚಿಂತೆ ಬೇಡ. ಗ್ರಾಮ ಠಾಣಾ ಅಂದರೆ ಒಂದು ಗ್ರಾಮದ ಸುತ್ತ ಇರುವ ಜಮೀನು. ಗ್ರಾಮ ಠಾಣಾ ನಿವೇಶನಕ್ಕೆ ಯಾವುದೇ ಅನುಮತಿ ಬೇಕಿಲ್ಲ. ಅದು ಎಲ್ಲದ್ದರಿಂದ ಪ್ರತ್ಯೇಕಿತವಾದ ಜಮೀನು ಎಂದು ಹೇಳಿ ಕಂದಾಯ ಇಲಾಖೆಯ ಯಾವುದೋ ಹಳೆಯ ಆದೇಶ ತೋರಿಸಿ ಯಾಮಾರಿಸುವವರುಂಟು. ನಂಬಬೇಡಿ. ಈ ನಿವೇಶನಕ್ಕೂ ಕೆಲವು ಮೂಲಭೂತ ಅನುಮತಿಗಳು ಅಗತ್ಯ. ಇದರ ಜೊತೆಗೆ ಈ ನಿವೇಶನಕ್ಕೆ ಸ್ಥಳೀಯ ಸಂಸ್ಥೆ ಅಂದರೆ, ಗ್ರಾಮ ಪಂಚಾಯ್ತಿ ಅಥವಾ ಸಿಎಂಸಿ ಕಂದಾಯ ಕಟ್ಟಿಸಿಕೊಳ್ಳುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ಕೆಲವು ವ್ಯವಸ್ಥೆ ನೀಡಲು ಈ ಸಂಸ್ಥೆಗಳಿಗೆ ನಿವೇಶನ ಮಾಡುವ ವ್ಯಕ್ತಿ ಒಂದಿಷ್ಟು ಹಣ ತುಂಬೇಕು. ಆ ಹಣ ಪಾವತಿ ಆಗಿದೆಯೇ ನೋಡಿಕೊಳ್ಳಿ. ಇದಕ್ಕೆ ನೀವು ನೇರವಾಗಿ ಆ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡುವುದು ಸೂಕ್ತ.

ಅಗ್ಗದ ಬೆಲೆಯಲ್ಲಿ ನಿವೇಶನ ಖರೀದಿಸಲು ಹೊರಡುವವರಿಗೆ ರೆವಿನ್ಯೂ ನಿವೇಶನದ ಸಮಸ್ಯೆಗಳು ಕಾಡುತ್ತವೆ. ಸೈಟು ಅಗ್ಗವಾದರೂ ಆಮೇಲೆ ಎರಗುವ ಸಮಸ್ಯೆಗಳು ಅಷ್ಟೇ ದುಬಾರಿ !

ರೆವಿನ್ಯೂ ಸೈಟು ಖರೀದಿಸುವ ಮುನ್ನ....

ಅದು ಯಾರ ಜಮೀನು, ಯಾರ ಹೆಸರಿನಲ್ಲಿದೆ, ಆಸ್ತಿ ಪಾಲು ಆಗಿದೆಯೇ, ಪಿತ್ರಾರ್ಜಿತವೇ ಅಥವಾ ಅಲ್ಲವೇ. ಹೆಣ್ಣು ಮಕ್ಕಳಿಗೆ ಭಾಗ ಹೋಗಿದೆಯೋ ಇಲ್ಲವೇ, ಸರ್ಕಾರಿ ಜಮೀನು ಒತ್ತುವರಿ ಆಗಿದೆಯೇ. ಭೂ ಪರಿವರ್ತನೆ ಪ್ರಯತ್ನ ನಡೆದಿದೆಯೇ. ಹಾಗೆ ನಡೆದಿದ್ದರೆ ಅಧಿಕಾರಿಗಳು ಏನು ಹೇಳಿದ್ದಾರೆ. ಭವಿಷ್ಯದಲ್ಲಿ ಮೂಲಭೂತ ಸೌಕರ್ಯಗಳನ್ನು ಪಡೆಯುವುದು ಹೇಗೆ. ಒಂದು ವೇಳೆ ಸರ್ಕಾರ ರೆವಿನ್ಯೂ ನಿವೇಶನ ಸಕ್ರಮಗೊಳಿಸಿದರೆ ಆಗ ಅದರ ಮೇಲೆ ವಿಧಿಸಹುದಾದ ದಂಡ ಎಷ್ಟು... ಎಲ್ಲವನ್ನೂ ಗೊತ್ತು ಮಾಡಿಕೊಳ್ಳಿ.

ಬಿಡಿಎ, ಮಹಾನಗರಪಾಲಿಕೆ ಆದರೆ ಮೂಲಭೂತ ಸೌಕರ್ಯ ಇರುತ್ತದೆ ಅಥವಾ ಅದು ಮುಂದೆ ಒಂದು ದಿನ ಸಿಕ್ಕೇ ಸಿಗುತ್ತದೆ. ಕೋ ಆಪರೇಟಿವ್‌ ಸೊಸೈಟಿ ಆದರೆ ಪದಾಧಿಕಾರಿಗಳನ್ನು ಕಾಡಿ ಬೇಡಿಯಾದರೂ ಮಾಡಿಸಿಕೊಳ್ಳಹುದು. ಆದರೆ, ರೆವಿನ್ಯೂ ನಿವೇಶನದಲ್ಲಿ ಅಂತಹ ಯಾವುದೇ ಕೆಲಸ ಆಗುವುದಿಲ್ಲ. ಬಹಳಷ್ಟು ಕಡೆ ಕೊಂಡವನು ಕೋಡಂಗಿ, ಹಣ ಪಡೆದವ ಈರಭದ್ರ ಆಗಿರುತ್ತಾನೆ.

ಬಿಡಿಎ ಸೈಟು ದಕ್ಕಿಸಿಕೊಳ್ಳುವುದು ಹೇಗೆ?

ಬಿಡಿಎ ಎಂಬ ಸಂಸ್ಥೆಯೇ ಬೇಕಿಲ್ಲ ಎಂಬ ಚಿಂತೆ ಒಂದೊಮ್ಮೆ ಸರ್ಕಾರವನ್ನು ಕಾಡಿತ್ತು. ಯಾಕೆಂದರೆ ಇವರಿಗೆ ಸೈಟು ಕೊಡಲು ಆಗುತ್ತಲೇ ಇರಲಿಲ್ಲ. ಆದರೆ ಈಗ ಪುನಃ ನಿವೇಶನ ಹಂಚಿಕೆ ಶುರುವಾಗಿದೆ. ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ. ಆದರೂ, ನೀವೂ ಒಂದು ಕೈ ನೋಡಬಹುದು. ಇದನ್ನು ದಕ್ಕಿಸಿಕೊಳ್ಳಲು ನೀಮ್ಮ ನೀತಿ- ಮರಳಿ ಯತ್ನವ ಮಾಡು ಎಂಬುದಾಗಿರಬೇಕು!

ಇದು ಬಿಟ್ಟರೆ ಬಿಡಿಎ ತನ್ನ ಮೂಲೆ ನಿವೇಶನಗಳನ್ನು ಹರಾಜು ಹಾಕುತ್ತದೆ. ಈ ಕುರಿತು ಪ್ರಕಟಣೆ ಕೊಡುತ್ತದೆ. ನಿಮ್ಮ ಜೇಬು ಅನುಮತಿ ಕೊಟ್ಟರೆ ಈ ಬಹಿರಂಗ ಹರಾಜಿನಲ್ಲಿ ಕೂಗಿ, ಬಿಡಿಎ ನಿವೇಶನದ ಒಡೆಯ ನೀವಾಗಬಹುದು.

(ಶುಕ್ರವಾರ : ಯಾಮಾರದೆ ಇರುವುದು ಹೇಗೆ?)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X