ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವದಾರು ಮರಗಳ ಬುಡಮೇಲು ಮಾಡಿದ ಗಂಗಾವತರಣ!

By Staff
|
Google Oneindia Kannada News

ಹವಾಮಾನ ಇಲಾಖೆಯವರು ಜೂನ್‌ 1ರಂದು ಗಂಗಾವತರಣವಾಗಲಿದೆ ಎಂದು ಘೋಷಿಸಿದ್ದರೂ ಹತ್ತನಾದ್ಯದ ಮರುದಿನವೇ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಭೂಮಿ ತಣಿಯುವಷ್ಟು ಮಳೆ ಸುರಿದಿದೆ.

ಬೆಂಗಳೂರು ನಗರದಲ್ಲಿ ದಾಖಲೆಯ ಹತ್ತು ಸೆಂಟಿಮೀಟರ್‌ ಮಳೆಯಾಗಿದೆ. ಯಥಾ ಪ್ರಕಾರ ಚರಂಡಿ ನೀರು ರಸ್ತೆ ಮೇಲೆ ಹರಿದು ನಾಗರಿಕರ ಬದುಕಿಗೆ ಕಿರಿಕಿರಿಯಾಗಿದೆ. ದೇವದಾರು ಮರಗಳು ಅಲ್ಲಲ್ಲಿ ಬುಡ ಸಮೇತ ನೆಲಕ್ಕುರುಳಿ ಗಂಟೆಗಟ್ಟಲೆ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿದೆ. ಬಡಾವಣೆಗಳು ಜಲಾವೃತಗೊಂಡು ನಿವಾಸಿಗಳನ್ನು ಕೆಲ ಕಾಲ ಆತಂಕಕ್ಕೆ ತಳ್ಳಿದೆ.

ಬೆಳಗಾವಿ, ಗದಗ, ಚಾಮರಾಜ ನಗರ, ದಕ್ಷಿಣ ಕನ್ನಡ, ಬಳ್ಳಾರಿ, ಹಾಸನ ಮತ್ತು ಕೋಲಾರದಲ್ಲಿ ಮಳೆ ತಂಪೆರೆದ ವರದಿಯಾಗಿದೆ. ರೈತರು ತಮ್ಮ ಕೃಷಿ ಸಾಮಾನು ಸರಂಜಾಮುಗಳೊಂದಿಗೆ ಹೊಲದತ್ತ ತೆರಳಿದ್ದಾರೆ. ಉಳುಮೆ ಕಾರ್ಯ ಆರಂಭವಾಗಿದೆ. ಬತ್ತಿ ಹೋಗಿ ಬೋಳಾಗಿದ್ದ ನದಿಗಳಲ್ಲಿ ಕೆಂಪು ನೀರು ಹರಿದು ಬರುತ್ತಿದೆ.

ಜಯನಗರದ ಮೊದಲನೆ ಬ್ಲಾಕ್‌ನಲ್ಲಿ ಪಾದಾಚಾರಿ ಸುಬ್ಬಯ್ಯ (60) ಎಂಬುವರು ರಸ್ತೆ ಬದಿಯ ಗುಂಡಿಗೆ ಬಿದ್ದು ಮೃತರಾದರೆ, ಆಡುಗೋಡಿ ಕೊಳೆಗೇರಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಶೇಷಾದ್ರಿ(75), ಪದ್ಮಾವತಿ(65) ದಂಪತಿ ಮನೆಗೆ ನುಗ್ಗಿದ ನೀರಿಗೆ ಬಲಿಯಾಗಿದ್ದಾರೆ. ಗುಂಡ್ಲು ಪೇಟೆಯ ಭರಗಿ ಗ್ರಾಮದ ಕರಿಬಸವಯ್ಯರ ಮಗಳು ಚೌಡಮ್ಮ ಸಿಡಿಲು ಬಡಿದು ಮೃತಳಾಗಿದ್ದಾಳೆ.

ಬಳ್ಳಾರಿಯಲ್ಲಿ ಕಳೆದ ಒಂದು ವಾರದಿಂದ ಸುಡು ಬಿಸಿಲ ತಡೆದುಕೊಳ್ಳಲು ಹೆಣಗಾಡುತ್ತಿದ್ದ ಜನತೆಗೆ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆ ನೆಮ್ಮದಿ ನೀಡಿತು. ಬಿಜಾಪುರ ತಾಲ್ಲೂಕಿನ ಇಂಡಿ ಹಾಗೂ ಹಾವೇರಿ ತಾಲ್ಲೂಕಿನಲ್ಲಿಯೂ ಕುಂಭದ್ರೋಣ ಮಳೆ ಸುರಿದಿದೆ.

ಕಳೆದ ವರ್ಷ ಬರಗಾಲದಿಂದ ತತ್ತರಿಸಿದ ರಾಜ್ಯಕ್ಕೆ ಹನಿದ ಮಳೆಯ ಸುದ್ದಿ ನಾಗರಿಕರೆದೆಯಲ್ಲಿ ನೆಮ್ಮದಿ ಮೂಡಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X