ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧದ ಕೌಂಟ್‌ಡೌನ್‌ : ಸೆನ್ಸೆಕ್ಸ್‌, ರುಪಾಯಿ ಎಲ್ಲಾ ಡೌನ್‌!

By Staff
|
Google Oneindia Kannada News

ಜಮ್ಮು-ಕಾಶ್ಮೀರದಲ್ಲಿ ತುಪಾಕಿ ಸಿಡಿದಷ್ಟೂ ಮುಂಬಯಿಯ ಉದ್ದಿಮೆದಾರರ, ಸಿನಿಮಾ ನಿರ್ಮಾಪಕರ ಮುಖ ಕಪ್ಪಿಡುತ್ತದೆ. ರಂಜಕದ ಕಮಟು ದಟ್ಟವಾದಷ್ಟೂ ಮನರಂಜನೆಯೂ ತುಟ್ಟಿಯಾಗುತ್ತದೆ. ಯುದ್ಧ ಈಗಾಗಲೇ ಶುರುವಾಗಿದೆಯಾ?

ನಾವು ನಿರ್ಣಾಯಕ ಹಂತ ತಲುಪಿದ್ದೇವೆ. ಇದು ಮಾಡು ಇಲ್ಲವೇ ಮಡಿ ಪ್ರಶ್ನೆ. ಪಾಕಿಸ್ತಾನಿ ಸೈನಿಕರನ್ನು ನಾವು ಸದೆ ಬಡಿಯೋದು ಗ್ಯಾರಂಟಿ ಅಂತ ಪ್ರಧಾನಿ ವಾಜಪೇಯಿ ಭಾರತೀಯ ಸೈನಿಕರೆದುರು ಘಂಟಾಘೋಷವಾಗಿ ಹೇಳುತ್ತಿದ್ದರೆ, ಮುಂಬಯಿ ಸ್ಟಾಕ್‌ ಎಕ್ಸ್‌ಚೇಂಜ್‌ನ ದಲ್ಲಾಳಿ ಮುಖ ಕಪ್ಪಿಡುತ್ತಿತ್ತು. ಬಾಲಿವುಡ್‌ ನಿರ್ಮಾಪಕರೂ ಗಲ್ಲದ ಮೇಲೆ ಕೈಯಿಟ್ಟಿದ್ದರು.

ಯುದ್ಧದ ಭೀತಿಯ ಪರಿ ಹೀಗೇ ಉದ್ದಗಲ ಅಳೆಯಲಾಗದ ಝರಿ. ಇವತ್ತು (ಮೇ 23) ಮುಂಬಯಿ ಸ್ಟಾಕ್‌ ಎಕ್ಸ್‌ಚೇಂಜ್‌ ಡಲ್ಲಾಗಿ ಶುರುವಾಗಿ ಕಂಗಾಲಾಗಿ ಸಾಗಿದೆ. ತೀರಾ ಕಡಿಮೆ ಎನ್ನುವಂಥಾ 3173 ಸಂವೇದಿ ಸೂಚ್ಯಂಕದೊಂದಿಗೆ ಶುರುವಾದ ವಹಿವಾಟು ಇನ್ನೂ ಬಿದ್ದು ಹೋಯಿತು. ಈ ಹೊತ್ತಿನ ಸಂವೇದಿ ಸೂಚ್ಯಂಕ 3150. ಮಾರುಕಟ್ಟೆಗೆ ಹೊಸ ನಿಧಿಗಳನ್ನು ಪರಿಚಯಿಸಲು ದಲ್ಲಾಳಿಗಳು ಮತ್ತು ಫಂಡ್‌ ಮೇನೇಜರ್‌ಗಳು ಹಿಂದೂಮುಂದೂ ನೋಡುತ್ತಿದ್ದಾರೆ. ಬಂದಷ್ಟು ಬರಲಿ, ಬರುವ ದಿನಗಳು ಇನ್ನೂ ಅಧ್ವಾನದವು ಎಂದು ಕೆಲವರು ಷೇರು ಮಾರಾಟಕ್ಕೆ ಎಗ್ಗುಸಿಗ್ಗಿಲ್ಲದೆ ಮುನ್ನುಗ್ಗುತ್ತಿದ್ದಾರೆ. ಐಟಿಸಿ, ರ್ಯಾನ್‌ಬಾಕ್ಸಿ, ಎಚ್‌ಎಲ್‌ಎಲ್‌ ಹಾಗೂ ಎಚ್‌ಪಿಸಿಎಲ್‌ನಂಥಾ ತಿಮಿಂಗಲಗಳೇ ಅಲ್ಲಾಡಿಹೋಗಿವೆ !

ಅಷ್ಟೇ ಅಲ್ಲ, ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಡಾಲರ್‌ ವಿರುದ್ಧ ತಳಾತಳಕ್ಕೆ ಕುಸಿಯುತ್ತಿದೆ. ಲೇಟೆಸ್ಟ್‌ ವರದಿಯ ಪ್ರಕಾರ ಡಾಲರೊಂದಕ್ಕೆ 49.01/02 ರುಪಾಯಿ. ಕಳೆದ ಕೆಲವು ದಿನಗಳಿಂದ 48 ಚಿಲ್ಲರೆ ರುಪಾಯಿಗಳ ಆಸುಪಾಸಲ್ಲೇ ಗಿರಕಿ ಹೊಡೆಯುತ್ತಿದ್ದ ಮೌಲ್ಯ ಯುದ್ಧ ಶುರುವಾದ ನಂತರ 50 ರುಪಾಯಿಯನ್ನೂ ಮೀರಿಸುವ ಆತಂಕವಿದೆ.

ಬಾಲಿವುಡ್‌ಗೂ ಭೀತಿ

ಈ ವಹಿವಾಟು, ವ್ಯಾಪಾರ, ಉದ್ದಿಮೆಯ ವಿಷಯವನ್ನು ಬಿಟ್ಟು ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟರೆ ಅಲ್ಲೂ ಅಯ್ಯೋ ಅನ್ನುವ ಸ್ವರ. ಬಾಲಿವುಡ್‌ ಓಣಿಗಳಲ್ಲಿ ನಿರ್ಮಾಪಕರು ಕಟ್ಟಬೇಕಾದ ಬಡ್ಡಿ ಎಷ್ಟಂತ ಲೆಕ್ಕ ಹಾಕುತ್ತಿದ್ದಾರೆ. ಯಾಕೆಂದರೆ, ಭಾರೀ ಬಜೆಟ್ಟಿನ ಕನಿಷ್ಠ ಅರ್ಧ ಡಜನ್ನು ಹಿಂದಿ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಬಿಡುಗಡೆಯಾದ ಮರುದಿನವೇ ಯುದ್ಧ ಭೀತಿ ಕಾಡಿದರೆ? ಲತ್ತೆ ಹೊಡೆಯೋದು ಗ್ಯಾರಂಟಿ ಅನ್ನುವುದು ನಿರ್ಮಾಪಕರ ಭೀತಿ. ಶಾರುಕ್‌- ಸಲ್ಮಾನ್‌- ಮಾಧುರಿ ಭಿನಯದ ಹಂ ತುಮ್ಹಾರೆ ಹೈ ಸನಂ(ಮೇ 24ಕ್ಕೆ ತೆರೆಗೆ), ಅಮಿತಾಬ್‌ ಅಭಿನಯದ ಹಂ ಕಿಸೀ ಸೇ ಕಂ ನಹೀ (ಮೇ 31ಕ್ಕೆ ತೆರೆಗೆ), ಬಾಬಿ ಡಿಯೋಲ್‌ ಮತ್ತು ಜಯ್‌ ದೇವಗನ್‌ ಅಭಿನಯದ ಎರಡು ಭಗತ್‌ಸಿಂಗ್‌ ಚಿತ್ರಗಳು ಜೂನ್‌ 7ರಂದು ತೆರೆ ಕಾಣಲು ಸಿದ್ಧವಾಗಿವೆ. ಸಂಜಯ್‌ ಲೀಲಾ ಬನ್ಸಾಲಿಯ ದೇವದಾಸ್‌ (ಜೂನ್‌ 28ಕ್ಕೆ ತೆರೆಗೆ) ಮೇಲಂತೂ ಹತ್ತಿರ ಹತ್ತಿರ 30 ಕೋಟಿ ರುಪಾಯಿ ಬಂಡವಾಳ ಹರಿದಿದೆ.

ಸದ್ಯಕ್ಕೆ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳ ಮೇಲೆ ಕಡಿಮೆಯೆಂದರೂ ಒಟ್ಟಾರೆ 200 ಕೋಟಿ ರುಪಾಯಿ ಹಣ ಹೂಡಲಾಗಿದೆ. ಯುದ್ಧದ ಭೀತಿಯಿಂದ ವಿತರಕರು ಮಾಮೂಲಿನಷ್ಟು ಹಣ ಕೊಟ್ಟು ಚಿತ್ರಗಳನ್ನು ಖರೀದಿಸುವುದಿಲ್ಲ. ಅಲ್ಲದೆ ಬಾಲಿವುಡ್‌ ಬಂಡವಾಳ ಷೇರು ಹಾಗೂ ಸ್ಟಾಕ್‌ ಮಾರುಕಟ್ಟೆ ಜೊತೆ ಸಂಬಂಧ ಇಟ್ಟುಕೊಂಡಿರುವಂಥದ್ದು. ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಸಂವೇದಿ ಸೂಚ್ಯಂಕ ತಳ ಮುಟ್ಟಿದಷ್ಟೂ ಬಾಲಿವುಡ್‌ ನಿರ್ಮಾಪಕ ಸೊರಗಿ ಹೋಗುತ್ತಾನೆ.

ಒಂದೊಂದು ತುಪಾಕಿ ಹಾರಿದಂತೆಯೂ ಜನೋಪಯೋಗಿ ವಸ್ತುಗಳ ದರ ಗಗನದತ್ತ ಮುಖ ಮಾಡುತ್ತದೆ. ಸೈನಿಕರು ಸಾಯುತ್ತಾರೆ. ಸಾಮಾನ್ಯ ಪ್ರಜೆಗಳ ಬವಣೆಯ ಗ್ರಾಫ್‌ ಏರುತ್ತಾ ಹೋಗುತ್ತದೆ!

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X