ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಬರುವ ಕಾಲಕ್ಕ ಒಳಗ್ಯಾಕ ಕುಂತ್ಯವ್ವಾ ? ಬಂತು ಬಂತು ಮುಂಗಾರು!

By Staff
|
Google Oneindia Kannada News

ಬೆಂಗಳೂರು : ಮಳೆ ಬಂತು. ಬೆಂಗಳೂರ ಕಪ್ಪು ಧೂಳು ಮಣ್ಣು ಹಸಿ ಹಸಿಯಾಗಿ ಕೊಚ್ಚಿ ಹೋಗುವಂತೆ, ಚರಂಡಿಗಳು ಉಕ್ಕುವಂತೆ, ಸೋಲಾರ್‌ ವ್ಯವಸ್ಥೆಗಳು ಕೂಲ್‌ ಕೂಲ್‌ ಎಂದು ಹಾಡುವಂತೆ.. ಮಳೆ ಸುರಿಯಲಾರಂಭಿಸಿದ ಅರ್ಧ ಗಂಟೆಯಾಳಗೇ ಬೆಂಗಳೂರಿಗರು ಸಿಡುಕುವಂತೆ ಮಳೆ ಬಂದಿದೆ.

ಇಳೆಯಾಡನೆ ಜಳಕವಾಡುವ, ಮೋಡಗಳ ಆಟ ನೋಡುವ ಸೌಭಾಗ್ಯ ಬೆಂಗಳೂರಿನಲ್ಲಿ ಇಲ್ಲ ಬಿಡಿ. ಆದರೂ ಎದೆಯ ಮೂಲೆಯಲ್ಲಿ ಏನೋ ಖುಷಿ. ಮಳೆ ಬಂದಿದೆ. ಬರಗಾಲದ ಸುದ್ದಿ ಕೇಳಿ, ಓದಿ ರೋಸಿ ಹೋಗಿರುವ ಮನಸ್ಸಿಗೆ ಒಂದಿಷ್ಟು ನೆಮ್ಮದಿ. ಮಳೆಯಾಗಿರುವುದರಿಂದ ಹೆಚ್ಚುವರಿ ಲೋಡ್‌ಶೆಡ್ಡಿಂಗ್‌ ಇಲ್ಲ ಎಂಬ ವಿದ್ಯುತ್‌ ನಿಗಮದ ಭರವಸೆಗಳಿಂದ ಮತ್ತಷ್ಟು ಆರಾಮ. ಆದರೆ ಕಳೆದೆರಡು ದಿನಗಳಲ್ಲಿ ಸುರಿದ ಮಳೆ ತಂದಿಕ್ಕಿದ ಹಾನಿಯೂ ಸಣ್ಣದಲ್ಲ.

ಶುಕ್ರವಾರ ನಗರದಲ್ಲಿ ಮಳೆ ಸುರಿಯುತ್ತಿದ್ದಂತೆಯೇ ವಿದ್ಯುತ್‌ ಕೈ ಕೊಟ್ಟಿತ್ತು. ಆಫೀಸು ಬಿಡುವ ಸಂಜೆ ಹೊತ್ತಿಗೇ ರೆಚ್ಚೆ ಹಿಡಿದ ಮಳೆ ನಾಗರಿಕರನ್ನು ಮರದಡಿ, ತೂತು ಬಿದ್ದ ಸೂರಿನ ಬಸ್‌ ನಿಲ್ದಾಣದಲ್ಲಿ ಗುಂಪುಗಟ್ಟಿ ನಿಲ್ಲುವಂತೆ ಮಾಡಿತ್ತು. ಬೆಚ್ಚಗೆ ಮನೆಯಾಳಗೆ ಇದ್ದವರಿಗೆ ಅಂತ್ಯಾಕ್ಷರಿ ಹಾಡುವುದು, ಸಣ್ಣ ನಿದ್ದೆ ಮಾಡುವುದು ಬಿಟ್ಟರೆ ಬೇರೆ ವಿಧಿಯಿರಲಿಲ್ಲ. ಸೆಕೆ, ಧಗೆಯ ಗೋಳಿನಿಂದ ನಗರದ ನಾಗರಿಕರು ಸದ್ಯಕ್ಕೆ ಮುಕ್ತರಾಗಿದ್ದಾರೆ.

ಆದರೆ ಶುಕ್ರವಾರ ಮಳೆಯ ಸ್ವಾಗತದ ಸಂಭ್ರಮ ಚೆಂದವಾಗಿಯೇನೂ ಆಗಿಲ್ಲ. ಎನ್‌. ಆರ್‌.ಕಾಲೋನಿಯಲ್ಲಿ ಆರು ವರ್ಷದ ಮಗುವೊಂದು ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಗುಲ್‌ ಮೊಹರು ಮರಗಳು ರಸ್ತೆಗಡ್ಡ ಮಲಗಿವೆ. ಗಂಟೆಗಟ್ಟಲೆ ಟ್ರಾಫಿಕ್‌ ಜ್ಯಾಮ್‌ ಆಗಿದೆ. ಅಂಗಡಿಗಳೆಲ್ಲ ಶುಕ್ರವಾರ ಸಂಜೆ ಹೊತ್ತಿಗೆ ಬಾಗಿಲು ಮುಚ್ಚಿಬಿಟ್ಟಿವೆ.

ಬೆಂಗಳೂರಿನಿಂದಾಚೆಗೆ...

ಇದು ಬೆಂಗಳೂರಿನ ಕತೆಯಾದರೆ ಮಳೆ ಹನಿಯ ಮೋರೆ ಕಾಣದೆ ನೊಂದಿದ್ದ ರಾಯಚೂರಿನಲ್ಲಿಯೂ ಶುಕ್ರವಾರ ಮಳೆ ಧೋಗುಟ್ಟಿದೆ. ಎರಡು ಗಂಟೆಗಳ ಕಾಲ ಬಿಡದೆ ಸುರಿದ ಮಳೆಗೆ ದಾವಣಗರೆಯೂ ತಂಪಾಗಿದೆ. ಭಾಷಾ ನಗರ, ಬೇತೂರು, ಭಾರತ್‌ ಕಾಲೊನಿಗಳೊಳಗೆ ನೀರು ಹರಿದು ನಾಗರಿಕರು ಓಡಾಡುವುದು ದುಸ್ತರವಾಗಿಬಿಟ್ಟಿದೆ.

ಕೋಲಾರದ ಶ್ರೀನಿವಾಸಪುರದಲ್ಲಿ 14 ಸೆ.ಮೀನಷ್ಟು ಮಳೆ ಸುರಿದಿದೆ. ಭಾರಿ ಗುಡುಗು ಮಿಂಚಿನ ಆರ್ಭಟದಿಂದ ಊರಿನಲ್ಲಿ ಆತಂಕ ಕವಿಯುತ್ತಿದ್ದಂತೆಯೇ ಸಿಡಿಲು ಬಡಿದು ಮೂರು ಮಂದಿ ಮೃತಪಟ್ಟಿರುವ ವರದಿಯಾಗಿದೆ.

ಅಖಿಲ ಭಾರತ ಹವಾಮಾನ ಇಲಾಖೆಯ ವರದಿಯ ಪ್ರಕಾರ ಜೂನ್‌ 1ರಂದು ಗಂಗಾವತರಣವಾಗಲಿದೆ. ಕರ್ನಾಟಕದ ಕರಾವಳಿ ಪ್ರದೇಶ ಸೇರಿದಂತೆ ಕೇರಳ, ಲಕ್ಷದ್ವೀಪ, ಅಂಡಮಾನ್‌ ನಿಕೋಬಾರ್‌ ಹಾಗೂ ಒರಿಸ್ಸಾ, ಜಾರ್ಖಂಡ್‌, ಛತ್ತೀಸ್‌ಘಡ್‌ಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X