ಕೃಷಿ ಸಚಿವ ಜಯಚಂದ್ರರಿಗೆ ಮೇ 15 ರಂದು ವಾಟಾಳ್ರಿಂದ ‘ಕತ್ತೆ ರತ್ನ’
ಬೆಂಗಳೂರು : ಕನ್ನಡದಿಂದ ಕನ್ನಡಿಗರ ಸಮಸ್ಯೆಗಳತ್ತ ವಾಟಾಳ್ ನಾಗರಾಜ್ ಅವರ ಗಮನ ಹರಿದಿದೆ. ಕೃಷಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಪ್ರತಿ ಸ್ಪಂದಿಸದ ಕೃಷಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ‘ಕತ್ತೆ ರತ್ನ’ ಪ್ರಶಸ್ತಿ ಕೊಡುವ ಮೂಲಕ ಗೌರವಿಸಲು ವಾಟಾಳ್ ನಾಗರಾಜ್ ನಿರ್ಧರಿಸಿದ್ದಾರೆ.
ಮೇ 15 ರಂದು ಜಯಚಂದ್ರ ಅವರಿಗೆ ‘ಕತ್ತೆ ರತ್ನ’ ಪ್ರಶಸ್ತಿ ವಿತರಿಸಲಾಗುವುದು. ಕತ್ತೆಗಳಿಂದ ಉಳುಮೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿರುವ ಜಯಚಂದ್ರ ಅವರಿಗೆ ಇದು ಅರ್ಥಪೂರ್ಣ ಗೌರವ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ಕಟಕಿಯಾಡಿದರು.
ಮೇ 15 ರಂದು ‘ಕತ್ತೆ ರತ್ನ’ ಪ್ರಶಸ್ತಿ ಪ್ರದಾನದ ಜೊತೆಗೆ, ಕತ್ತೆಯ ಮೇಲೆ ಜಯಚಂದ್ರ ಅವರ ಪ್ರತಿಕೃತಿ ಮೆರವಣಿಗೆ ಮಾಡಲಾಗುವುದು. ಅತ್ಯಾಧುನಿಕ ಉಪಕರಣಗಳಿರುವಾಗ ಕತ್ತೆಯ ಮೂಲಕ ಉಳುಮೆ ಮಾಡುವಂತೆ ಕೃಷಿ ಸಚಿವರು ಕರೆ ನೀಡುತ್ತಾರೆ. ಇದು ಅವರ ಜಾಣ್ಮೆಯನ್ನು ಸೂಚಿಸುತ್ತದೆ ಎಂದರು. ವಿದೇಶಗಳಲ್ಲಿ ನಿಷೇಧಿಸಲಾಗಿರುವ ಔಷಧಿಗಳನ್ನು ಸಿಂಪರಿಸುವ ಮೂಲಕ ರಾಜ್ಯದ ಲಕ್ಷಾಂತರ ತೆಂಗಿನ ಮರಗಳು ನಾಶಗೊಂಡಿವೆ. ಆಂಧ್ರಪ್ರದೇಶದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರೂ, ರಾಸಾಯನಿಕಗಳನ್ನು ಖರೀದಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಉಂಟಾಗಿದೆ. ಜಯಚಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಾಟಾಳ್ ಅಗ್ರಹಿಸಿದರು.
ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಕ್ಷಾಮ ತಲೆದೋರಿರುವುದರಿಂದ ತಕ್ಷಣವೇ ಅಧಿವೇಶನವನ್ನು ಕರೆಯಬೇಕೆಂದು ವಾಟಾಳ್ ಸರ್ಕಾರವನ್ನು ಆಗ್ರಹಪಡಿಸಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡದಿರುವಂತೆ ಶಿಫಾರಸ್ಸು ಮಾಡಿರುವ ಡಾ। ವೀರೇಶ್ ಸಮಿತಿಯ ವರದಿಯ ಕುರಿತು ಸದನ ಕೂಲಂಕಶವಾಗಿ ಚರ್ಚಿಸಬೇಕೆಂದು ಅವರು ಒತ್ತಾಯಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...