ಮತ್ತೆ ಭುಸುಗುಟ್ಟುತ್ತಿರುವ ಕಾವೇರಿನೀರು ಹಂಚಿಕೆ ತಕರಾರಿನ ನಾಗರ
ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿವಾದ ಇನ್ನೂ ಬಗೆಹರಿದಿಲ್ಲ. ಕಾವೇರಿ ನದಿ ನ್ಯಾಯಾಧಿಕರಣದ ಮಧ್ಯಂತರ ಆದೇಶವನ್ನು ಕರ್ನಾಟಕ ನಿರ್ಲಕ್ಷಿಸಿದೆ ಎಂಬುದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಾದ. ಇಲ್ಲ, ನ್ಯಾಯಾಧಿಕರಣದ ಆದೇಶಕ್ಕೂ ಮೀರಿ ತಮಿಳುನಾಡಿಗೆ ಕಾವೇರಿ ಹರಿಸಿದ್ದೇವೆ ಎನ್ನುತ್ತಾರೆ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ.
ಏಪ್ರಿಲ್ 29, 2002ರವರೆಗೆ ಕರ್ನಾಟಕದಿಂದ ತಮಿಳುನಾಡಿಗೆ ಹರಿದಿರುವ ಕಾವೇರಿ ನೀರಿನ ಪ್ರಮಾಣ ಕೇವಲ 160.47 ಟಿಎಂಸಿ. ನ್ಯಾಯಾಧಿಕರಣದ ಆದೇಶದಂತೆ ಹರಿದು ಬರಬೇಕಾಗಿದ್ದುದು 202.92 ಟಿಎಂಸಿ. ಇನ್ನು 42.45 ಟಿಎಂಸಿ ನೀರನ್ನು ಯಾಕೆ ಬಿಟ್ಟಿಲ್ಲ ಎಂದು ಜಯಲಲಿತಾ ಕರ್ನಾಟಕಕ್ಕೆ ಪತ್ರ ಬರೆದು ಕೇಳಿದ್ದಾರೆ.
ಅದಕ್ಕೆ ಎಸ್.ಎಂ.ಕೃಷ್ಣ ಕೊಟ್ಟಿರುವ ಉತ್ತರ ಹೀಗಿದೆ...
ಬಿಳಿಗುಂಡ್ಲು ಜಲಾನಯನ ಪ್ರದೇಶದಲ್ಲಿ ಕಾವೇರಿ ನೀರಿನ ಒಳಹರಿವು ಮೇ 2ನೇ ತಾರೀಖಿಗೆ ಸರಿಯಾಗಿ 186.2 ಟಿಎಂಸಿ ಇದೆ. ಕೇಂದ್ರ ಜಲ ಸಮಿತಿ ಇದನ್ನು ಮಾಪನ ಮಾಡಿ, ಸ್ಪಷ್ಟಪಡಿಸಿದೆ. ಬಿಳಿಗುಂಡ್ಲು ಹಾಗೂ ಮೆಟ್ಟೂರು ಜಲಾನಯನ ಪ್ರದೇಶಗಳಲ್ಲಿ ಜೂನ್ 1, 2001 ರಿಂದ ಮೇ 2, 2002ರವರೆಗೆ ನೀರಿನ ಅಂದಾಜು ಮಟ್ಟ 23 ಟಿಎಂಸಿ ಅಡಿಗಳಷ್ಟಿದೆ. ಅಂದರೆ 186.2+23=209.2 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದಿದೆ. ಇದು 205 ಟಿಎಂಸಿಗಿಂತಲೂ ಹೆಚ್ಚಲ್ಲವೇ?
ಕಾವೇರಿ ನದಿ ಪ್ರಾಧಿಕಾರದ ಪರಿಶೀಲನಾ ಸಮಿತಿಯ 11ನೇ ಸಭೆ ಇದೇ ವರ್ಷ ಫೆಬ್ರವರಿ 12ರಂದು ನಡೆಯಿತು. ಆ ಸಭೆಯಲ್ಲಿ ತಮಿಳುನಾಡಿಗೆ ಕರ್ನಾಟಕ ಬಿಟ್ಟಿರುವ ನೀರಿನ ಪ್ರಮಾಣದ ದಾಖಲೆಗಳನ್ನು ಪ್ರಧಾನ ಕಾರ್ಯದರ್ಶಿ ಮಂಡಿಸಿದ್ದರು. ಜೊತೆಗೆ ಡಿಸೆಂಬರ್ 19, 1995ರಿಂದ ಜನವರಿ 2002ರವರೆಗೆ ಯಾವ ಮಾನದಂಡದ ಆಧಾರದ ಮೇಲೆ ನೀರು ಬಿಡಲಾಗಿದೆ ಎಂಬುದನ್ನೂ ಮನವರಿಕೆ ಮಾಡಿಕೊಡಲಾಗಿದೆ. ಈ ಒಟ್ಟು ಅವಧಿಯಲ್ಲಿ ಕರ್ನಾಟಕ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಹೆಚ್ಚೆಂದರೆ 3 ಟಿಎಂಸಿ ಮಾತ್ರ. ಈ ಕೊರೆಯನ್ನೂ ಈಗಾಗಲೇ ಭರಿಸಲಾಗಿದೆ. ನ್ಯಾಯಾಧಿಕರಣದ ಆದೇಶಕ್ಕೆ ಕರ್ನಾಟಕ ಯಾವತ್ತೂ ಬದ್ಧವಾಗೇ ಇದೆ.
ಜೂನ್ 1, 2001ರಿಂದ ಫೆಬ್ರವರಿ 28, 2002ರ ಅವಧಿಯಲ್ಲಿ ಮೆಟ್ಟೂರು ಜಲಾನಯನ ಪ್ರದೇಶದಲ್ಲಿ 198.26 ಟಿಎಂಸಿ ಕಾವೇರಿ ನೀರು ಹರಿದಿದೆ. ನ್ಯಾಯಾಧಿಕರಣ ನಿಗದಿ ಪಡಿಸಿದ್ದುದು 198.2 ಟಿಎಂಸಿ. ಈ ವಿಷಯವನ್ನು ರಾಜ್ಯ ಮುಖ್ಯ ಕಾರ್ಯದರ್ಶಿ, ಕೇಂದ್ರ ಜಲ ಸಂಪನ್ಮೂಲ ಸಚಿವಾಲಯಕ್ಕೆ ತಿಳಿಸಿದ್ದರು. ಕಾವೇರಿ ನೀರು ಬಿಡುವುದರಲ್ಲಿ ಕರ್ನಾಟಕ ಚಾಚೂ ತಪ್ಪದೆ ನ್ಯಾಯಾಧಿಕರಣದ ಆದೇಶ ಪಾಲಿಸುತ್ತಾ ಬಂದಿದೆ. ಗೊಂದಲ ಸೃಷ್ಟಿಸದೆ, ಹರಿದಿರುವ ನೀರಿನ ಪ್ರಮಾಣವನ್ನೂ ಕಾಲಕಾಲಕ್ಕೆ ಸ್ಪಷ್ಟವಾಗಿ ತಿಳಿಸುತ್ತಾ ಬಂದಿದೆ.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿ