ಚಾಳಿ ಅಡಿಕೆ ಕೊಳ್ಳಲು ಮಾರುಕಟ್ಟೆಗೆ ಸರ್ಕಾರ,ಕಿಲೋಗೆ 65 ರು. ಬೆಂಬಲ ಬೆಲೆ
ಬೆಂಗಳೂರು : ಸಂಕಷ್ಟದಲ್ಲಿರುವ ಅಡಿಕೆ ರೈತರ ಕಣ್ಣೊರೆಸುವ ಮೊದಲ ಹೆಜ್ಜೆಯಿದು- ಸದ್ಯಕ್ಕೆ ಚಾಳಿ ಅಡಿಕೆಯನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಬಿ.ಇನಾಂದಾರ್ ಸೋಮವಾರ ತಿಳಿಸಿದರು.
ಕರಾವಳಿ ರೈತರು ಹೆಚ್ಚಾಗಿ ಬೆಳೆಯುವ ಚಾಳಿ ಬಗೆಯ ಅಡಿಕೆಯನ್ನು ಪ್ರತಿ ಕಿಲೋಗೆ 65 ರುಪಾಯಿ ಬೆಂಬಲ ಬೆಲೆ ಕೊಟ್ಟು ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಾರುಕಟ್ಟೆ ಪ್ರವೇಶಿಸಿ ಅಡಿಕೆ ರೈತರ ಬವಣೆ ನೀಗಿಸಲು ನೆರವನ್ನು ಕೋರಿ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ ಎಂದು ಇನಾಂದಾರ್ ಸುದ್ದಿಗಾರರಿಗೆ ಹೇಳಿದರು.
ಸದ್ಯಕ್ಕೆ ಚಾಳಿ ಹೊರತುಪಡಿಸಿ ಬೇರೆ ಬಗೆಯ ಅಡಿಕೆ ಖರೀದಿಸುವ ಪರಿಸ್ಥಿತಿಯಲ್ಲಿ ಸರ್ಕಾರವಿಲ್ಲ. ಅಷ್ಟೇ ಅಲ್ಲದೆ ರಾಗಿ ಖರೀದಿ ಕೇಂದ್ರಗಳನ್ನೂ ಮುಚ್ಚಲು ತೀರ್ಮಾನಿಸಲಾಗಿದೆ. ಒಂದು ವಾರದಿಂದ ಹೆಚ್ಚು ರೈತರು ರಾಗಿ ಮಾರಲು ಕೇಂದ್ರಗಳಿಗೆ ಬರದಿರುವುದೇ ಇದಕ್ಕೆ ಕಾರಣ. ಈವರೆಗೆ 6.31 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಕೊಟ್ಟು ಸರ್ಕಾರ ಖರೀದಿಸಿದೆ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...