ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದಿ ಬೇಟೆಗಾರನ ಕೈಗೆ ವೀರಪ್ಪನ್‌ ಶಿಕಾರಿ: ಯುವ ಪೊಲೀಸರ್ಯಾರೂ ಇಲ್ವೇನ್ರೀ?

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

DGP Srinivasulu (60) to catch Veerappan!ಅತ್ತ ದೇಶವನ್ನು ಕಾಶ್ಮೀರ ಸಮಸ್ಯೆ , ಭಯೋತ್ಪಾದನೆ ಮತ್ತು ಕೋಮುವಾದವೆಂಬ ಬ್ರಹ್ಮ ಕಪಾಲಗಳು ಕಚ್ಚಿಕೊಂಡಿದ್ದರೆ, ರಾಜ್ಯದಲ್ಲಿ - ಪ್ರತ್ಯೇಕತೆಯ ಹೋರಾಟ, ವಿದ್ಯುತ್‌ ಸಮಸ್ಯೆ ಲಿಸ್ಟ್‌ನ ಜೊತೆಗೆ ನರಹಂತಕ, ಕಾಡುಗಳ್ಳ ವೀರಪ್ಪನ್‌ ಎಂಬ ಜಿರಳೆಯಂತೆ ಸಾಯಲೊಲ್ಲದ ಸಮಸ್ಯೆ ಕಚ್ಚಿಕೊಂಡಿದೆ. ಬಣ್ಣಿಸುವುದಾದರೆ ವೀರಪ್ಪನ್‌ ಶಿಕಾರಿ ಒಂದು ಮೆಗಾ ಸೀರಿಯಲ್‌ ಇದ್ದ ಹಾಗೆ. ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಹಾಗೂ ಸ್ವಾರ್ಥವೊಂದೇ ವೀರಪ್ಪನ್‌ಗೆ ಸದ್ಯಕ್ಕೆ ಪ್ರಾಣದಾನ ಮಾಡಿವೆ ಎನ್ನುವುದನ್ನು ವಿರೋಧಿಸಲಾಗದು.

ವೀರಪ್ಪನ್‌ನನ್ನು ಹಿಡಿಯುವ ಕಾರ್ಯ ಸರ್ಕಾರದ ಪಾಲಿಗೆ ಒಂದು ಬೃಹತ್‌ ಯೋಜನೆಯಾಗಿ, ಜನತೆಯ ಪಾಲಿಗೆ ದಂತ ಕತೆಯಾಗಿ ಹರಡಿಕೊಂಡಿದೆ. ಯೋಜನೆಯ ಉಸ್ತುವಾರಿಯನ್ನು ಹಲವು ಹಿರಿಯ-ಕಿರಿಯ ಉತ್ಸಾಹಿ ತಲೆಗಳು ವಹಿಸಿಕೊಂಡದ್ದು ಆಯಿತು. ನರಹಂತಕನ ಶಿಕಾರಿಯ ಸುದ್ದಿಗಳನ್ನು ಕುತೂಹಲದಿಂದ ಓದಬೇಕಿದ್ದ ಜನರು, ಎಷ್ಟೊಂದು ಸಿನಿಕರಾಗಿದ್ದಾರೆಂದರೆ ಆತನಿಗಾಗಿ ಪೊಲೀಸ್‌ ಪಡೆ ನಡೆಸುತ್ತಿರುವ ಬೇಟೆ ಯಾವುದೇ ಪ್ರತಿಕ್ರಿಯೆ ಮೂಡಿಸುತ್ತಿಲ್ಲ.

ವೀರಪ್ಪನ್‌ ಇದ್ದಕ್ಕಿದ್ದ ಹಾಗೆ ರಾಜ್‌ಕುಮಾರ್‌ ಅವರನ್ನು ಅಪಹರಿಸಿದಾಗ ಈತನೊಬ್ಬ ದುಷ್ಟ ನಮ್ಮ ರಾಜ್ಯಕ್ಕೆ ಮುಳುವಾಗಿದ್ದಾನೆ ಎಂಬುದು ಮತ್ತೊಮ್ಮೆ ಸಾರ್ವಜನಿಕರಿಗೆ ನೆನಪಾಯಿತಷ್ಟೇ. ಜನರ ಈ ಭಾವನೆಯಲ್ಲಿ ರಾಜ್‌ಕುಮಾರ್‌ ಮೇಲಿನ ಪ್ರೀತಿಯೂ ಕೆಲಸ ಮಾಡಿದೆ ಎನ್ನುವುದೂ ಸತ್ಯ. ರಾಜ್‌ಕುಮಾರ್‌ ಬಿಡುಗಡೆಯಾದಾಗ ವೀರಪ್ಪನ್‌ ಶಿಕಾರಿ/ ಬೊಬ್ಬೆ ತುಸು ಗಟ್ಟಿಯಾಗಿದ್ದರೂ, ಬಿಡುಗಡೆಯ ನಂತರ ಪರಿಸ್ಥಿತಿ ಯಥಾಸ್ಥಿತಿಗೆ ಮರಳಿತು.

ಮತ್ತೊಮ್ಮೆ ವೀರಪ್ಪನ್‌ ಬೇಟೆಯ ನೇತೃತ್ವ ಬದಲಾಗಿದೆ. ಕರ್ನಾಟಕ ಸರಕಾರವು ವೀರಪ್ಪನ್‌ ಕಾರ್ಯಪಡೆಯ ಮೇಲುಸ್ತುವಾರಿಯನ್ನು ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಟಿ. ಶ್ರೀನಿವಾಸುಲು ಅವರಿಗೆ ವಹಿಸಿ ಆದೇಶ ಹೊರಡಿಸಿದೆ. ಯಾಕೆ ಈ ಹೊಸ ಹುದ್ದೆಯ ಸೃಷ್ಟಿ ಮತ್ತು ಇದರಿಂದ ವೀರಪ್ಪನ್‌ ಕಾರ್ಯಾಚರಣೆ ಹೇಗೆ ಚುರುಕಾಗಲಿದೆ ಎಂಬ ಬಗ್ಗೆ ಯಾವುದೇ ವಿವರಣೆಯನ್ನು ಸರಕಾರ ನೀಡಿಲ್ಲ.

ಈ ನೇಮಕಾತಿಯ ಹಿಂದೆ ಸಾರ್ವಜನಿಕರಲ್ಲಿ ಮೂಡಿರುವ ನೂರಾರು ಪ್ರಶ್ನೆಗಳಲ್ಲಿ ಒಂದಷ್ಟು :

  • ಮಲೆ ಮಹದೇಶ್ವರ ಅಂಥಹ ದಟ್ಟ ಕಾಡುಗಳಲ್ಲಿ ಅಡಗಿಕೊಂಡಿರುವ ನರಹಂತಕ ವೀರಪ್ಪನ್‌ನನ್ನು ಹಿಡಿಯುವುದಕ್ಕೆ 60 ದಾಟಿದ ನಿವೃತ್ತ ಪೊಲೀಸ್‌ ಮಹಾ ನಿದೇಶಕರೊಬ್ಬರನ್ನು ಮೇಲುಸ್ತುವಾರಿಗೆ ನೇಮಿಸಿಕೊಳ್ಳುವ ಅಗತ್ಯವಿದೆಯೇ ?
  • ಈ ಹೆಚ್ಚುವರಿ ಸಿಬ್ಬಂದಿಗೆ ಒದಗಿಸುವ ಕಾರು, ಫೋನು, ಮನೆ ಮತ್ತಿತರ ಸಾಲು ಸೌಲಭ್ಯಗಳು ಸಾರ್ವಜನಿಕರಿಂದ ಬಂದದ್ದು ತಾನೇ ? ವೀರಪ್ಪನ್‌ ಶಿಕಾರಿ ತಡವಾಗುತ್ತಿರುವುದರಿಂದಲೇ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಅದಕ್ಕೆ ಈ ಸೇರ್ಪಡೆ ಯಾಕೆ ?
  • ಈಗ ಸೇವೆಯಲ್ಲಿರುವ ಈ ಪಾಟಿ ಪೊಲೀಸರ ಪೈಕಿ ಯಾರಿಗೂ ವೀರಪ್ಪನ್‌ ಶಿಕಾರಿಯನ್ನು ಯಶಸ್ವಿಗೊಳಿಸುವ ಸಾಮರ್ಥ್ಯ ಇಲ್ಲವೇ ? ನಿವೃತ್ತ ಪೊಲೀಸ್‌ ಅಧಿಕಾರಿಯಾಬ್ಬರ ನೇಮಕ ಈಗ ಸೇವೆಯಲ್ಲಿರುವವರಿಗೆ ಅಪಮಾನಕಾರಿ ಅಲ್ವೇ ? 1997ರಿಂದ 2000ನೇ ಇಸವಿಯವರೆಗೆ ಡಿಜಿಪಿಯಾಗಿ ಕೆಲಸ ನಿರ್ವಹಿಸುತ್ತಿರುವಾಗಲೇ ಶ್ರೀನಿವಾಸುಲು ಕೈಯ್ಯಲ್ಲಿ ವೀರಪ್ಪನ್‌ನನ್ನು ಅಲುಗಾಡಿಸುವುದು ಸಾಧ್ಯವಾಗಲಿಲ್ಲ. ಆಗಿಲ್ಲದ ಸಾಮರ್ಥ್ಯ ಈಗ ಬಂದಿದೆಯೇ ?
  • ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಆರಕ್ಷಣೆಯ ಸಮಸ್ಯೆಇಲ್ಲ. ಹಾಗಿದ್ದಾಗ, ನಿವೃತ್ತ ಪೊಲೀಸ್‌ ಅಧಿಕಾರಿಗೆ ರಾಜ್ಯದ ಪ್ರಮುಖ ಸವಾಲೊಂದರ ನೇತೃತ್ವ ವಹಿಸಬೇಕೇ ? ಸೇವೆಯಲ್ಲಿರುವ ಪೊಲೀಸ್‌ ಅಧಿಕಾರಿಗಳನ್ನು ಅವಮಾನಗೊಳಿಸುವುದೇ ಇದರ ಉದ್ದೇಶವೇ ?
ಶ್ರೀನಿವಾಸುಲು ಅವರ ಹೆಗಲ ಮೇಲೆ ರಾಜ್ಯದ ಪ್ರಮುಖ ಸ್ಮಾರಕಗಳ ರಕ್ಷಣೆಯ ಹೊಣೆಯಿತ್ತು. ಈಗ ಇದ್ದಕ್ಕಿದ್ದಂತೆ ನರಹಂತಕನ ಬೆನ್ನು ಹಿಡಿಯುವ ಹೊಸ ಜವಾಬ್ದಾರಿ ಹೆಗಲೇರಿದೆ. ಈ ಹೊಸ ಬೆಳವಣಿಗೆಯಿಂದ ನರಹಂತಕ ಜೈಲಿಗೆ ಸಂದಾನು ಎಂಬ ನಿರೀಕ್ಷೆ ಯಾರಿಗೂ ಹುಟ್ಟಿಲ್ಲ.

ವೀರಪ್ಪನ್‌ ಬಂಧನದಲ್ಲಿ ಎರಡೂ ರಾಜ್ಯಗಳ ಜನತೆಯ ಹಿತ ಮತ್ತು ರಾಜಕಾರಣಿಗಳ ಹಿತವೂ ಅಡಗಿರುವುದರಿಂದ ಆತನ ಬಂಧನ ಮತ್ತಷ್ಟು ಕಷ್ಟವಾಗುತ್ತಿದೆ ಎನ್ನುವುದು ಬೇರೆ ವಿಷಯ. ಆದರೆ ಶ್ರೀನಿವಾಸುಲು ನೇಮಕಾತಿಯಿಂದಾಗಿ ಜನರಲ್ಲಿ ವೀರಪ್ಪನ್‌ ಬಂಧನದ ಬಗ್ಗೆ ಭರವಸೆ ಹೆಚ್ಚುವುದರ ಬದಲಾಗಿ ಈ ನರಹಂತಕನ್ನು ಹಿಡಿಯುವ ಆಸಕ್ತಿ ನಿಜವಾಗಿಯೂ ಸರಕಾರಕ್ಕಿದೆಯೇ ಎಂಬ ಸಂಶಯ ಮೂಡಿದೆ.

ಈ ಎಲ್ಲ ಪ್ರಶ್ನೆಗಳಿಗೆ ರಾಜ್ಯ ಸರಕಾರದ ಉತ್ತರಕ್ಕಿಂತ ಹೆಚ್ಚಾಗಿ ವೀರಪ್ಪನ್‌ ಬಂಧನವೊಂದೇ ಉತ್ತರವಾಗಬಲ್ಲುದು. ಆದರೆ, ವೀರಪ್ಪನನ್ನು ಬಂಧಿಸುವ ನಂಬಿಕೆ ಸರ್ಕಾರಕ್ಕೂ ಇದ್ದಂತಿಲ್ಲ . ಇವತ್ತಿನ ದುರಂತವೇ ಅದು!

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X