ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಜಯಂತಿ ಬೆಳಕಲ್ಲಿ ಕರ್ನಾಟಕದ ವರ್ತಮಾನ ಹಾಗೂ ನಾಳಿನ ಕನಸುಗಳು

By Staff
|
Google Oneindia Kannada News

*ಪಾಟೀಲ್‌

An analysys of No.1 CMs work on the eve of his birthdayಮೇ 1 ರಂದು ಕೃಷ್ಣ ಜಯಂತಿ!

ಇದು ಎಣ್ಣೆ ಬೆಣ್ಣೆ ಪೂಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುವ ದಶಾವತಾರದ ಕೃಷ್ಣನ ಜಯಂತಿಯಲ್ಲ . ಬೆಳೆ ಹಾಗೂ ವಿದ್ಯುತ್‌ ಕ್ಷಾಮದ ಕೆನ್ನಾಲಗೆಗೆ ತುತ್ತಾಗಿರುವ ಕರ್ನಾಟಕದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಹುಟ್ಟುಹಬ್ಬ. ಮೇ 1, 2002 ಕ್ಕೆ ಕೃಷ್ಣ ಅವರಿಗೆ 71. ಸೆಂಚುರಿಗಿನ್ನೂ 29 ಬಾಕಿ!

ಹುಟ್ಟುಹಬ್ಬದ ಬೆಳಗ್ಗೆ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸುವ ಮೂಲಕ ಕೃಷ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ತಿರುಪತಿ ತಿಮ್ಮಪ್ಪ ಕೃಷ್ಣ ಅವರಿಗೆ ಅಚ್ಚುಮೆಚ್ಚು . ಕಳೆದ ವರ್ಷ ಕೂಡ ತಿಮ್ಮಪ್ಪನ ಸನ್ನಿಧಿಯಲ್ಲೇ ಕೃಷ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಮೊನ್ನೆಯಷ್ಟೇ ವರನಟ ರಾಜ್‌ಕುಮಾರ್‌ (ಏ.24) ಅದ್ದೂರಿ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಸಾರ್ವಜನಿಕರ ಟೀಕೆಗೊಳಗಾಗಿದ್ದ ಕೃಷ್ಣ , ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುವ ಉತ್ಸಾಹದಲ್ಲಿಲ್ಲ . ‘ಬರ’ ಹಲವು ಬಗೆಗಳಲ್ಲಿ ರಾಜ್ಯವನ್ನು ಕಿತ್ತು ತಿನ್ನುತ್ತಿರುವಾಗ ಸಂಭ್ರಮಿಸಲಿಕ್ಕೆ ಕೃಷ್ಣ ಅವರಿಗೆ ಕಾರಣವೂ ಇಲ್ಲ , ಪುರುಸೊತ್ತೂ ಇಲ್ಲ . ಸತತ ಮೂರನೇ ವರ್ಷ ಬಜೆಟ್‌ ಮಂಡಿಸಿರುವ ಕೃಷ್ಣ - ರಾಜ್ಯದ ಪ್ರಗತಿಗೆ ಚಾಲನೆ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ಅದು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ .

ಕೃಷ್ಣ ಎಷ್ಟು ಗಟ್ಟಿ ?
ಮಾಧ್ಯಮಗಳಲ್ಲಿ ಭಾರತದ ನಂಬರ್‌ 1 ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡರೂ, ರಾಜ್ಯದ ರಾಜಕೀಯ ಕೃಷ್ಣ ಅವರ ಪಾಲಿಗೆ ಬೆಣ್ಣೆಯ ಮುದ್ದೆಯಂತೇನೂ ಇಲ್ಲ . ಒಂದೆಡೆ ಅತೃಪ್ತ ಸಚಿವರ ಗುಪ್ತ ಅಸಮಾಧಾನ, ಇನ್ನೊಂದೆಡೆ ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಮತ್ತೊಂದೆಡೆ ಆಗಾಗ ಕಾಡುವ ಆರೋಗ್ಯ- ಇವುಗಳ ನಡುವೆ ಕೃಷ್ಣ ಏಗಬೇಕಿದೆ.

ಹೈ ಕಮಾಂಡ್‌ ಕೃಪಾ ಕಟಾಕ್ಷ ಕೂಡ ಕೃಷ್ಣ ಅವರಿಗೆ ಮೊದಲಿನಂತಿಲ್ಲ . ಇತ್ತೀಚೆಗೆ ಸಂಸದ ಜಾಫರ್‌ ಷರೀಫ್‌, ಕೃಷ್ಣ ವಿರುದ್ಧ ಬಹಿರಂಗವಾಗಿ ಗುಡುಗಿದ್ದನ್ನು ಗಮನಿಸಿ : ದೇವರ ಜೀವನಹಳ್ಳಿಯ ಸ್ಲಂ ಪರಿಸ್ಥಿತಿ ಕೃಷ್ಣ ಅವರ ನಂ. 1 ಖ್ಯಾತಿಯನ್ನು ಸಾರುತ್ತಿದೆ ಎಂದು ಷರೀಫ್‌ ಕಟಕಿಯಾಡಿದ್ದರು. ಮುಖ್ಯಮಂತ್ರಿಯನ್ನು ಬಹಿರಂಗವಾಗಿ ಟೀಕಿಸಿದರೂ, ಷರೀಫ್‌ ವಿರುದ್ಧ ಕೃಷ್ಣ ಸಂಪುಟದ ಒಬ್ಬ ಸಚಿವನೂ ಸೊಲ್ಲೆತ್ತಲಿಲ್ಲ . ಹೈ ಕಮಾಂಡ್‌ ಕೂಡ ಏನೂ ನಡೆದೇ ಇಲ್ಲವೇನೊ ಎನ್ನುವಂತೆ ಮೌನ ವಹಿಸಿತ್ತು . ಕೃಷ್ಣ ಅವರ ವಿರುದ್ಧ ಮೊಳಗಿದ ಮೊದಲ ಬಂಡಾಯವಿದು. ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಚ್ಕೆ.ಪಾಟೀಲ್‌, ಧರ್ಮಸಿಂಗ್‌ ಮುಂತಾದವರು ಕೃಷ್ಣ ವಿರುದ್ಧ ಅಸಮಾಧಾನ ಹೊಂದಿರುವುದು ಗುಟ್ಟೇನೂ ಅಲ್ಲ . ವಿರೋಧಿ ಪಾಳಯ ಅವಕಾಶಕ್ಕಾಗಿ ಕಾಯುತ್ತಿದೆ.

ಕೃಷ್ಣ ಬದಲಾದರೆ?
No.1 CM is 29 years behind for a century! ಕೃಷ್ಣ ಅವರ ಐಟಿ ಪರ ಒಲವನ್ನೇ, ರೈತ ವಿರೋಧಿಯೆಂದು ಅವರನ್ನು ಬಿಂಬಿಸಲು ಅಸ್ತ್ರವನ್ನಾಗಿ ವಿರೋಧಿಗಳು ಬಳಸಿಕೊಳ್ಳಲು ಪ್ರಾರಂಭಿಸಿದಾಗ, ಬದಲಾಗದಿರಲು ಕೃಷ್ಣ ಅವರಿಗೆ ಸಾಧ್ಯವೇ ಇರಲಿಲ್ಲ . ಆ ಕಾರಣದಿಂದಲೇ ಮೊನ್ನೆಯ ಬಜೆಟ್‌ನಲ್ಲಿ ಅವರು ರೈತ ಪರವಾಗಿ ತಮ್ಮ ಸರ್ಕಾರವನ್ನು ಚಿತ್ರಿಸಿಕೊಂಡರು. ಈ ಬಗ್ಗೆ ಕೃಷ್ಣ ಹೇಳುತ್ತಾರೆ : ‘ಆಡಳಿತದ ಮೊದಲ ಎರಡು ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತೇ ಮಾತನಾಡಿ ವಿಶ್ವದ ಗಮನವನ್ನು ಬೆಂಗಳೂರಿನತ್ತ ಸೆಳೆದೆ. ಈಗ ವಿಶ್ವ ನಮ್ಮ ಸಾಧನೆಗಳ ಕುರಿತು ಮಾತನಾಡುತ್ತಿದೆ. ನಾವು ಬೇರೆ ಕ್ಷೇತ್ರಗಳತ್ತ ಗಮನ ಹರಿಸಲು ಸಾಧ್ಯವಾಗಿದೆ. ಐಟಿಗೆ ಒತ್ತು ನೀಡದೆ ಇದ್ದಿದ್ದಲ್ಲಿ ಜಾಗತಿಕ ಭೂಪಟದಿಂದ ಬೆಂಗಳೂರು ಕಳೆದುಹೋಗುತ್ತಿತ್ತು .’ - ಇಲ್ಲವೆಂದು ಯಾರು ಹೇಳಿಯಾರು?

ಆಡಳಿತದ ಮೊದಲಿನ ಎರಡು ವರ್ಷಗಳ ಅಳುಕನ್ನು ಕೃಷ್ಣ ಈಗ ದಾಟಿದ್ದಾರೆ. ಹೈ ಕಮಾಂಡ್‌ ಕುರಿತು ವಿನೀತ ಭಾವನೆ ಇರಿಸಿಕೊಂಡಿರುವಂತೆಯೇ ಅಂತರವನ್ನೂ ಉಳಿಸಿಕೊಂಡಿದ್ದಾರೆ. ಕೃಷ್ಣ ಅವರಿಗೆ ದೊರೆತ ನಂ.1 ಮುಖ್ಯಮಂತ್ರಿಯ ಪಟ್ಟ ಹೈ ಕಮಾಂಡ್‌ಗೆ ಖುಷಿ ಕೊಟ್ಟಿಲ್ಲ ಎನ್ನುವುದು ಕೃಷ್ಣ ಅವರಿಗೂ ಗೊತ್ತು . ಹೊಗಳಿಸಿಕೊಂಡರೆ ಸಾಲದು, ಕೃಷ್ಣ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದು ಸೋನಿಯಾ ಹೇಳಿದ್ದಾರಂತೆ. ಆ ಕಾರಣದಿಂದಲೇ- ಗುವಾಹತಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಕೃಷ್ಣ ತಮ್ಮನ್ನು, ತಮ್ಮ ಸಾಧನೆಯನ್ನು ಆಕರ್ಷಕವಾಗಿ ಪ್ರತಿಪಾದಿಸಿದರು. ಕಾಂಗ್ರೆಸ್‌ನಲ್ಲಿ ಮತ್ತಷ್ಟು ಬಲಿಷ್ಠರಾದರು. ಹೈ ಕಮಾಂಡ್‌ ಪಾಲಿಗೆ ಕೃಷ್ಣ ಅವರೀಗ ಬಿಸಿ ತುಪ್ಪ ! ಉಗುಳುವಂತಿಲ್ಲ , ಅನುಭವಿಸುವಂತಿಲ್ಲ .

ಮುಂದಿನ ಹೆಜ್ಜೆಗಳು...
ಸಾಧಿಸಿದ್ದು ಬಹಳಷ್ಟು , ಸಾಧಿಸಬೇಕಾದ್ದು ಇನ್ನೂ ಬಹಳಷ್ಟು ಎನ್ನುವುದು ಕೃಷ್ಣ ಅವರ ಸ್ಲೋಗನ್‌. ವಿದ್ಯುತ್‌ ಹಾಗೂ ಕ್ಷಾಮ ಸದ್ಯಕ್ಕೆ ಅವರ ತಲೆ ತಿನ್ನುತ್ತಿರುವ ಸಮಸ್ಯೆಗಳು. ಸಾವಿರ ಮೆಗಾವ್ಯಾಟ್‌ ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ತಮ್ಮ ಗುರಿ ಎಂದು ಕೃಷ್ಣ ಹೇಳಿಕೊಂಡಿದ್ದಾರೆ. ಅದೇ ರೀತಿ ಜಲಾನಯನ ಪ್ರದೇಶವನ್ನು ಅಭಿವೃದ್ಧಿಪಡಿಸುವ ಮೂಲಕ ರಾಜ್ಯದಲ್ಲಿನ ಬರವನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸುವ ಕನಸು ಅವರದು. ಆಡಳಿತ ಯಂತ್ರದ ಭಾರ ಹಗುರಗೊಳಿಸುವ ಉದ್ದೇಶದಿಂದ ಬೊಕ್ಕಸಕ್ಕೆ ಹೊರೆಯಾಗುವ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಇಲ್ಲ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಈಚಿನ ದಿನಗಳಲ್ಲಿ ಕೃಷ್ಣ ಅವರ ಆಡಳಿತ ವೈಖರಿಯನ್ನು ಗಮನಿಸಿದರೆ- ಆಯಕಟ್ಟಿನ ಪ್ರದೇಶಗಳಲ್ಲಿ ಸಮರ್ಥ ವ್ಯಕ್ತಿಗಳನ್ನು ಕೂರಿಸಿದ್ದಾರೆ. ಈ ನಿಟ್ಟಿನಲ್ಲಿ ಹೆಸರಿಸಲೇಬೇಕಾದ್ದು - ಲೋಕಾಯುಕ್ತದ ವೆಂಕಟಾಚಲ ಅವರನ್ನು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ವೆಂಕಟಾಚಲ ನೇತೃತ್ವದ ಲೋಕಾಯುಕ್ತ ತಂಡ, ಭ್ರಷ್ಟ ಅಧಿಕಾರಿಗಳಿಗೆ ಚಳಿ ಜ್ವರ ತರಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗಳಲ್ಲಂತೂ ಸಂಚಲನೆಯೇ ಶುರುವಾಗಿದೆ. ಕೊಬ್ಬಿದ ಅನೇಕ ಅಧಿಕಾರಿಗಳ ಆಸ್ತಿಪಾಸ್ತಿಯನ್ನು ಲೋಕಾಯುಕ್ತ ಮುಟ್ಟುಗೋಲು ಹಾಕಿಕೊಂಡಿದೆ. ವೆಂಕಟಾಚಲ ಜನ ಸಾಮಾನ್ಯರ ನಡುವೆ ಹೀರೋ ಆಗಿದ್ದಾರೆ. ಒತ್ತಡದ ನಡುವೆಯೂ ಲೋಕಾಯುಕ್ತವನ್ನು ಮತ್ತಷ್ಟು ಬಲ ಪಡಿಸುವುದಾಗಿ ಕೃಷ್ಣ ಹೇಳಿದ್ದಾರೆ. ಅವರಿಗೆ ಶಹಬ್ಭಾಸ್‌ಗಿರಿ ಸಲ್ಲಲೇಬೇಕು.

ವೆಂಕಟಾಚಲ ಅವರಂತೆ ಬೆಂಗಳೂರಿನ ಮೇಯರ್‌ ಆಯ್ಕೆಯಲ್ಲೂ ಕೃಷ್ಣ ಮುತ್ಸದ್ಧಿತನ ಮೆರೆದರು. ಉತ್ಸಾಹಿ ಯುವಕ ಚಂದ್ರಶೇಖರ್‌ಗೆ ಬೆಂಗಳೂರಿನ ಮೇಯರ್‌ ಪಟ್ಟವನ್ನು ಕಟ್ಟುವ ಮೂಲಕ, ತಮ್ಮ ಸಿಂಗಪೂರಿನ ಕನಸನ್ನು ಕೃಷ್ಣ ಪೋಷಿಸುತ್ತಿದ್ದಾರೆ. ಬೆಂಗಳೂರಿಗೆ ಹಸಿರು ತೊಡಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಹೊಸಬೆಳಕು..
ಸಾರ್ವಜನಿಕ ಬದುಕಿನಲ್ಲಿ ಕೊನೆ ಹಂತ ಮುಟ್ಟಿದ್ದೇನೆ ಎಂದು ಬಜೆಟ್‌ ಅಧಿವೇಶನದಲ್ಲಿ ಕೃಷ್ಣ ಹೇಳಿದ್ದರು. ಈ ಹೇಳಿಕೆಯನ್ನು , ಅನಾರೋಗ್ಯ ಹಾಗೂ ಕೊಳಕು ರಾಜಕಾರಣದಿಂದ ಬೇಸತ್ತು ಕೃಷ್ಣ ನಿವೃತ್ತಿಯ ಕುರಿತು ಯೋಚಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಿಸಲಾಗಿತ್ತು . ಆದರೆ, ರಾಜಕೀಯ ನಿವೃತ್ತಿಯ ಯೋಚನೆಯೇ ಇಲ್ಲ ಎಂದು ಅವರು ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅನಾರೋಗ್ಯದ ವದಂತಿಗಳನ್ನೂ ತಳ್ಳಿಹಾಕಿದ್ದಾರೆ.

ಆಗಸ್ಟ್‌ನಲ್ಲಿ ಅಮೆರಿಕ ಭೇಟಿ
ಚಂದ್ರಬಾಬು ಮೂರು ಸಾರಿ ಅಮೆರಿಕಾಕ್ಕೆ ಹೋಗಿ ಬಂದಿದ್ದಾರೆ. ಆದರೆ, ಭಾರತದ ಸಿಲಿಕಾನ್‌ ವ್ಯಾಲಿಯಾದ ಬೆಂಗಳೂರಿನ ಕೃಷ್ಣ ಅಮೆರಿಕಾಗೆ ಬಂದಿಲ್ಲ ಎಂದು ಅಲ್ಲಿನ ಜನ ಮಾತಾಡಿಕೊಳ್ಳುತ್ತಿದ್ದಾರೆ. ಆಗಸ್ಟ್‌ನಲ್ಲಿ ಅಮೆರಿಕಾಗೆ ಹೋಗಲು ಪ್ಲಾನ್‌ ಮಾಡ್ತಿದ್ದೇನೆ ಎಂದು ಕೃಷ್ಣ ಹೇಳಿದ್ದಾರೆ. ತಮ್ಮ ಭೇಟಿಯಿಂದ ಅಮೆರಿಕಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಕನ್ನಡದ ಸಾವಿರಾರು ಸಾಫ್ಟ್‌ವೇರ್‌ ಇಂಜಿನಿಯರ್‌ಗಳಿಗೆ ಉತ್ಸಾಹ ಮೂಡುತ್ತದೆಂದೂ ಅವರು ನಂಬಿದ್ದಾರೆ. ಅದೇ ಹೊತ್ತಿಗೆ ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನವೂ ಪ್ರಾರಂಭವಾಗುತ್ತದೆ.

ತುಂಬಾ ವರ್ಷಗಳ ನಂತರ ರಾಜ್ಯದ ಆಡಳಿತದಲ್ಲಿ ಬಿಗಿ ಮೂಡಿಸಿದ್ದು , ಕರ್ನಾಟಕದತ್ತ ವಿಶ್ವದ ಗಮನ ಸೆಳೆದದ್ದು ಕೃಷ್ಣ ಅವರ ಪ್ರಮುಖ ಸಾಧನೆಗಳು. ಈ ಸಾಧನೆಗಳು ಫಲ ಕೊಡುವವರೆಗೂ, ಕನಿಷ್ಠ ಇನ್ನೆರಡು ವರ್ಷ ಕೃಷ್ಣ ಕುರ್ಚಿಯಲ್ಲಿರುವುದು ರಾಜ್ಯದ ಹಿತದೃಷ್ಟಿಯಿಂದ ಮುಖ್ಯ. ಒಂದಷ್ಟು ಕನಸುಗಳು ನನಸಾದರೂ ಆದೀತು. ಇಲ್ಲದಿದ್ದರೆ ಚಿಂತೆಯಿಲ್ಲ - ಕೃಷ್ಣ ಕರ್ನಾಟಕವನ್ನಂತೂ ಮಾರುವುದಿಲ್ಲ ; ಈವರೆಗೂ ಅವರ ಕೈ ಕೊಳಕಾದ ಒಂದೇ ಒಂದು ಸುದ್ದಿಯಿಲ್ಲ !

Post your opinion about Krishna

ವಾರ್ತಾಸಂಚಯ

ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರ ಬದುಕಿನ ಕೆಲವು ವಿವರಗಳು
ಹತ್ತು ತಿಂಗಳ ಬೆಳಕ ನುಂಗಿದ ಎರಡು ತಿಂಗಳ ಮಸಿ
ಚೋಮನೆ ದುಡಿ ! ದುಡಿ ! ದುಡಿ ! ; ಮೇ ಒಂದರ ಮೋಕ್ಷ ಚಿಂತನೆ

ಮುಖಪುಟ / ಕೃಷ್ಣಗಾರುಡಿ


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X