• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೈತ್ರ ಹುಣ್ಣಮೆ ಬೆಳಕಿಗೆ ಅನ್ವರ್ಥವಾದ ಬೆಂಗಳೂರು ಕರಗ ಸಂಭ್ರಮ !

By Staff
|

Bangalore Karagaಚೈತ್ರ ಹುಣ್ಣಿಮೆಯ ಹಾಲು ಬೆಳಕು, ಪ್ರತಿ ಬೀದಿಗಳಲ್ಲಿಯೂ ಜನರ ಸಂಭ್ರಮವನ್ನು ವಿವರಿಸುವ ವಿದ್ಯುತ್‌ ದೀಪಗಳು ! ಅಣ್ಣಮ್ಮ ಗುಡಿಯ ಸುತ್ತ ಮುತ್ತ, ಕತ್ತು ಉದ್ದ ಮಾಡಿ, ಸಾಸುವೆ ಕಾಳು ಹಾಕಿದರೆ ನೆಲ ತಲುಪದಷ್ಟು ಒತ್ತೊತ್ತಾಗಿ ನಿಂತಿರುವ ಜನರು. ಅಪರಾತ್ರಿ 12.30ಕ್ಕೆ ದುಂಡು ಮಲ್ಲಿಗೆ ಅಲಂಕೃತ ಕರಗವನ್ನು ಸ್ತ್ರೀ ವೇಷಧಾರಿ ಅಭಿಮನ್ಯು ಮಂಡಿಯೂರಿ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇಗುಲದ ಗರ್ಭಗುಡಿಯಿಂದ ಹೊರ ತಂದಾಗ, ಸಹಸ್ರ ಸಹಸ್ರ ಮಂದಿ ಭಕ್ತರು ನಮಸ್ಕರಿಸಿದರು. ನೂಕು ನುಗ್ಗಲಿನಲ್ಲಿಯೂ ಮಕ್ಕಳನ್ನು ಆದಷ್ಟು ಮೇಲೆತ್ತಿ ಕರಗ ನೋಡುವಂತೆ ತೋರು ಬೆರಳು ತೂರಿ ತೋರಿಸಿದರು.

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಭಕ್ತಿ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಶನಿವಾರ ರಾತ್ರಿ ನಡೆಯಿತು. ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ , ಸಚಿವರಾದ ಸುಮಾ ವಸಂತ್‌, ಟಿ.ಜಾನ್‌, ಮೇಯರ್‌ ಕೆ. ಚಂದ್ರಶೇಕರ್‌, ಉಪಮೇಯರ್‌ ಶಂಕರ್‌, ಸಾರಿಗೆ ಸಂಸ್ಥೆ ಅಧ್ಯಕ್ಷ ಆರ್‌. ವಿ. ದೇವರಾಜ್‌ ಪ್ರತ್ಯೇಕವಾಗಿ ಕರಗಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ರಾತ್ರಿ 12 ಗಂಟೆ ಹೊತ್ತಿಗೆ ದ್ರೌಪದಿ ದೇವಿಯ ರಥ ಹೊರಟಿತು. ನಂತರ ಹೊರಟ ಕರಗ ಧರ್ಮರಾಯ ಸ್ವಾಮಿ ದೇಗುಲದ ಗರ್ಭಗುಡಿಯ ಅಕ್ಕ ಪಕ್ಕದಲ್ಲಿರುವ ಮುತ್ಯಾಲಮ್ಮ ಹಾಗೂ ಗಣೇಶ ದೇವರಿಗೆ ಪೂಜೆ ಸಲ್ಲಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿ, ಭಕ್ತ ಸಾಗರಕ್ಕೆ ದರ್ಶನವಿತ್ತಿತು. ವೇದ ಘೋಷ, ಕೊಂಬು ಕಹಳೆ, ಗೋವಿಂದ ನಾಮಾವಳಿ ಮತ್ತು ವೀರಕುಮಾರರ ಅಲಗು ಸೇವೆಯ ನಡುವೆ ಕರಗ ಮೆರವಣಿಗೆ ಸಾಗಿತು.

ದಾರಿ ಮಧ್ಯೆ ಭಕ್ತರಿಂದ ಪಾನಕ, ಮಜ್ಜಿಗೆ, ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳ ವಿತರಣೆ ಮಕ್ಕಳನ್ನು ಇನ್ನಷ್ಟು ಮುದಗೊಳಿಸಿತ್ತು. ಅಲಸೂರು, ತಿಗಳರ ಪೇಟೆ, ಗೊಲ್ಲರ ಪೇಟೆ, ಗಾಣಿಗರ ಪೇಟೆ, ಕುಂಬಾರರ ಪೇಟೆ, ದೇವಾಂಗ ಪೇಟೆ ಮತ್ತು ಚಿಕ್ಕ ಪೇಟೆಗಳಲ್ಲಿ ಮೆರವಣಿಗೆ ಹೊರಟ ಕರಗ, ಅಕ್ಕಿ ಪೇಟೆ, ರಾಣಾ ಸಿಂಗ್‌ ಪೇಟೆ, ಬಳೇ ಪೇಟೆ, ಬಿನ್ನಿ ಪೇಟೆಗಳ ಮೂಲಕ ಅರಳೇ ಪೇಟೆಯ ಮಸ್ತಾನ್‌ ಸಾಬನ್‌ ದರ್ಗಾಕ್ಕೆ ಬಂದಾಗ ಬೆಳ್ಳಿ ಮೂಡಿತ್ತು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಧರ್ಮರಾಯನ ಸ್ವಾಮಿ ದೇವಸ್ಥಾನಕ್ಕೆ ಮರಳಿ ಬರುವಷ್ಟರಲ್ಲಿ ಸೂರ್ಯ ಹುಟ್ಟಿದ್ದ.

ಮೊದಲ ಬಾರಿಗೆ ದೇವಾಲಯದ ಆವರಣದಲ್ಲಿ ಪೊಲೀಸ್‌ ಸಹಾಯ ಕೇಂದ್ರ ತೆರೆಯಲಾಗಿತ್ತು. ಜನ ಸಾಗರವನ್ನು ನಿಯಂತ್ರಿಸಲು ನಿದ್ರೆಗೆಟ್ಟ ಪೊಲೀಸರು ತ್ರಾಸಪಡಬೇಕಾಯಿತು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more