For Daily Alerts
ಸಂಸ್ಕಾರ, ಸಂಯಮಗಳ ಕಾಪಾಡಲು ಕೇಂದ್ರ ಸಚಿವ ಅನಂತ ಕುಮಾರ್ ಕರೆ
ಗೋಕರ್ಣ: ಟಿವಿ ಎಂಬ ಮೂರ್ಖರ ಪೆಟ್ಟಿಗೆ ಮನೆಯ ಚಾವಡಿಯನ್ನು ಯಾವತ್ತು ಅಲಂಕರಿಸಿತೋ, ಅಂದಿನಿಂದ ಮನುಷ್ಯ ಹಿಂಸೆಗೆ ಪ್ರಚೋದನೆ ನೀಡುವ ಅಂಶಗಳನ್ನೇ ನೋಡಿ ಸಂತೋಷಪಡಲಾರಂಭಿಸಿದ. ಆದ್ದರಿಂದ ಇವತ್ತಿನ ಪರಿಸ್ಥಿತಿಯಲ್ಲಿ ಸಂಸ್ಕಾರ ಮತ್ತು ಸಂಯಮಗಳ ಬಗ್ಗೆ ಮನುಷ್ಯ ಕಲಿತುಕೊಳ್ಳಬೇಕಾದ ಜರೂರತ್ತು ಇದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತ ಕುಮಾರ್ ಹೇಳಿದ್ದಾರೆ.
ಅವರು ಗೋಕರ್ಣದ ಕವಿ ಪರಮ ದೇವ ವೇದಿಕೆಯಲ್ಲಿ ಅಗ್ನಿಸೇವಾ ಟ್ರಸ್ಟ್ ಆಯೋಜಿಸಿದ್ದ ಹವ್ಯಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮ್ಮೇಳನದ ಹೈಲೈಟ್ಸ್ :
- ಧಾರ್ಮಿಕ ಸಮ್ಮೇಳನಗಳು ಹಾಗೂ ಸಂಘಟನೆಗಳಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಾಪಾಡುವುದು ಸಾಧ್ಯ. ಹವ್ಯಕ ಸಂಸ್ಕೃತಿ ಒಂದು ಜೀವನ ಪರಂಪರೆಯೇ ಹೊರತು ಒಂದು ಜಾತಿಯಲ್ಲ. ಈ ಪರಂಪರೆಯ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ.
- ಅಡಿಕೆ ಮಾರುಕಟ್ಟೆ ಕುಸಿತಕ್ಕೆ ಕಾರಣ ಉತ್ಪಾದನೆ ಹೆಚ್ಚಳ. ಕೇಂದ್ರ ಸರಕಾರ ಅಡಿಕೆಯ ಮೇಲೆ 118ರಷ್ಟು ತೆರಿಗೆ ಆಕರಿಸಿದರೂ ಅಡಿಕೆ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿಲ್ಲ. ಅಡಿಕೆ ಉತ್ಪನ್ನಗಳ ನಿರ್ಯಾತ ಹಾಗೂ ಸಂಸ್ಕರಣೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ -ಕೇಂದ್ರ ಸಚಿವ ಅನಂತ ಕುಮಾರ್ ಅವರ ಮುಖ್ಯ ಭಾಷಣ
- ಅಂಕೋಲಾ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ‘ಸಹೋಜ’ ಪತ್ರಿಕೆ ಬಿಡುಗಡೆ
- ಗಣೇಶ ಹೆಗಡೆ ಹಾಗೂ ಲಕ್ಷ್ಮೀ ಹೆಗಡೆ ದಂಪತಿ ಸೇರಿದಂತೆ ಹವ್ಯಕ ಸಮಾಜದ ಗಣ್ಯರಿಗೆ ಸನ್ಮಾನ
- ವೇದ ಘೋಷಗಳೊಂದಿಗೆ ಕಾರ್ಯಕ್ರಮದ ಉದ್ಘಾಟನೆ
- ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹಾಗೂ ಸೋಂದಾ ಸ್ವರ್ಣ ವಲ್ಲಿ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳಿಂದ ಹವ್ಯಕ ಸಮಾಜಕ್ಕೆ ಉತ್ತರೋತ್ತರ ಅಭಿವೃದ್ಧಿಯಾಗಲೆಂಬ ಆಶೀರ್ವಚನ
- ಸಮ್ಮೇಳನದಲ್ಲಿ ವಿಪರೀತ ಸೆಕೆಯಿದ್ದುದರಿಂದ ಪೇಪರ್, ಪುಸ್ತಕಗಳು ಬೀಸಣಿಕೆಗಳಾಗಿದ್ದವು. 10 ಸಾವಿರ ಮಂದಿ ಪ್ರತಿನಿಧಿಗಳು ಭಾಗವಹಿಸುವರೆಂಬ ಆಯೋಜಕರ ನಿರೀಕ್ಷೆ ಸುಳ್ಳಾಗಿದ್ದರಿಂದ ಸಭೆಯಲ್ಲಿ ಖಾಲಿ ಕುರ್ಚಿಗಳು ಸಾಕಷ್ಟಿದ್ದವು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...