ದಾಂಡೇಲಿಯಿಂದ ಕಾಲುಕಿತ್ತ ಮಹಾರಾಷ್ಟ್ರ ಅಪೆಕ್ಸ್ , ದಿಕ್ಕುಗಾಣದ ಠೇವಣಿದಾರರು
ದಾಂಡೇಲಿ : ಇಲ್ಲಿನ ಬ್ಯಾಂಕೇತರ ಆರ್ಥಿಕ ಸಂಸ್ಥೆ ಮಹಾರಾಷ್ಟ್ರಾ ಅಪೆಕ್ಸ್ ಅನಿರೀಕ್ಷಿತವಾಗಿ ಮುಚ್ಚಿದ್ದು, ಠೇವಣಿದಾರರು ತೀರಾ ಗಲಿಬಿಲಿಗೊಳಗಾಗಿದ್ದಾರೆ.
ಮಹಾರಾಷ್ಟ್ರ ಅಪೆಕ್ಸ್ ದಾಂಡೇಲಿ ಶಾಖೆಯಲ್ಲಿ ಸುಮಾರು 1,500 ಮಂದಿ ಠೇವಣಿ ಹಣ ಇಟ್ಟಿದ್ದರು. ತಮ್ಮ ದುಡಿಮೆಯನ್ನು ಜೋಪಾನವಾಗಿರಿಸಿ, ಕೂಡಿಟ್ಟ ಹಣ ಮಹಾರಾಷ್ಟ್ರ ಅಪೆಕ್ಸ್ನಲ್ಲಿ ಸುರಕ್ಷಿತವಾಗಿರುತ್ತದೆಂಬ ಭಾವನೆಯಾಂದಿಗೆ ಠೇವಣಿ ಇಟ್ಟಿರುವ ಮಂದಿ ಯಾವುದೇ ಪೂರ್ವ ಸೂಚನೆಯಿಲ್ಲದೆ ಅಪೆಕ್ಸ್ ಸಂಸ್ಥೆ ಮುಚ್ಚಿರುವುದರಿಂದ ದಾರಿಕಾಣದಂತಾಗಿದ್ದಾರೆ.
ನಿವೃತ್ತ ನೌಕರರು ತಮ್ಮ ನಿವೃತ್ತಿ ಸೌಲಭ್ಯಗಳ ರೂಪದಲ್ಲಿ ಬರುವ ಹಣವನ್ನು ವೃದ್ಧಾಪ್ಯದ ಆಸರೆಯಾಗಿ ಅಪೆಕ್ಸ್ ಸಂಸ್ಥೆಯಲ್ಲಿ ಕೂಡಿಟ್ಟಿದ್ದರು. ಸ್ಥಳೀಯ ಉದ್ಯಮಿಗಳು, ವ್ಯವಹಾರಸ್ಥರು ಕೂಡ ಈ ಸಂಸ್ಥೆಯಲ್ಲಿ ಹಣ ಠೇವಣಿ ಇರಿಸಿದ್ದು, ಬೀಗ ಹಾಕಿರುವ ಅಪೆಕ್ಸ್ ಶಾಖೆಯನ್ನು ಕಂಡು ದಿಕ್ಕುತೋಚದಂತಾಗಿದ್ದಾರೆ. ಗ್ರಾಮಸ್ಥರು ಪ್ರತಿದಿನ ಬ್ಯಾಂಕ್ ಬಾಗಿಲು ತೆರದೀತೆಂದು ಆಸೆಕಣ್ಣಿನಿಂದ ನೋಡುತ್ತಿದ್ದರೆ, ಉದ್ಯಮಿಗಳು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ನೆಮ್ಮದಿಗೋಸ್ಕರ ಹಣ ಕೂಡಿಟ್ಟ ಗ್ರಾಮಸ್ಥರ ನೆಮ್ಮದಿಯನ್ನು ಸಂಸ್ಥೆ ಈ ಮೂಲಕ ಕಿತ್ತುಕೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...