ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರಲ್ಲಿ 30 ವರ್ಷದ ನಂತರ 11ದಿನದ‘ಅಷ್ಟಬಂಧ ಬ್ರಹ್ಮ ಕಲಶೋತ್ಸವ’

By Staff
|
Google Oneindia Kannada News

ಕೊಲ್ಲೂರು : ಹನ್ನೊಂದು ದಿನಗಳ ಪೂಜಾ ಉತ್ಸವ ‘ಅಷ್ಟಬಂಧ ಬ್ರಹ್ಮ ಕಲಶೋತ್ಸವ’ದ ಸಂಭ್ರಮ, ಉತ್ಸವದ್ದೇ ಈಗ ಎಲ್ಲೆಡೆ ಮಾತು. ಏಪ್ರಿಲ್‌ 23 ರಿಂದ ಮೇ 3 ರವರೆಗೆ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅಷ್ಟಬಂಧ ಕಲಶೋತ್ಸವ. ನಾಡಿಗರು ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಸಹಸ್ರಾರು ಭಕ್ತರ ಆಗಮನದ ನಿರೀಕ್ಷೆ.

ಪಶ್ಚಿಮ ಘಟ್ಟಗಳ ದಟ್ಟ ಕಾನನದ ಮಡಿಲಿನಲ್ಲಿರುವ ಕೊಡಚಾದ್ರಿಯ ತಪ್ಪಲೇ ಮೂಕಾಂಬಿಕೆ ಸಿರಿಯ ಕೊಲ್ಲೂರು. ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಂದ ಸಹಸ್ರಾರು ಭಕ್ತರನ್ನು ಕೊಲ್ಲೂರು ಆಕರ್ಷಿಸುತ್ತಿದೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ನಡೆಯುವುದು ರೂಢಿಯಾದರೂ, ವಿವಿಧ ಕಾರಣಗಳಿಂದಾಗಿ 30 ವರ್ಷಗಳ ನಂತರ ಉತ್ಸವ ನಡೆಯುತ್ತಿದೆ.

ಮುನ್ನೂರು ಮಂದಿ ವೈದಿಕರು ದೇವಿಗೆ ಕೋಟಿ ನಾಮಾರ್ಚನೆ ಅರ್ಪಿಸುವುದರೊಂದಿಗೆ 11 ದಿನಗಳ ಉತ್ಸವ ಪ್ರಾರಂಭವಾಗುತ್ತದೆ ಎನ್ನುತ್ತಾರೆ ದೇವಾಲಯದ ಕಾರ್ಯ ನಿರ್ವಾಹಕ ಟ್ರಸ್ಟಿ ಬಿ.ಸುಕುಮಾರ್‌ ಶೆಟ್ಟಿ .

ಒಂದು ಸಾವಿರ ಬೆಳ್ಳಿ ಕಲಶ ಹಾಗೂ 8 ಬಂಗಾರದ ಕಲಶಗಳಲ್ಲಿ ಪವಿತ್ರ ಜಲ ಸಂಗ್ರಹಿಸಲಾಗಿದ್ದು , ಶೃಂಗೇರಿ ಶಾರದಾ ಪೀಠದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಬ್ರಹ್ಮ ಕಲಶೋತ್ಸವ ಜರುಗಲಿದೆ. ದೇವಾಲಯದ ಟ್ರಸ್ಟಿಗಳಲ್ಲೊಬ್ಬರಾದ ಅಣ್ಣಪ್ಪ ಶೆಟ್ಟಿ ಅವರ ನೇತೃತ್ವದಲ್ಲಿ ಹೃಷಿಕೇಷದಲ್ಲಿ ಪವಿತ್ರ ಗಂಗಾಜಲವನ್ನು ಕಲಶಗಳಲ್ಲಿ ಸಂಗ್ರಹಿಸಲಾಗಿದೆ. ಏಪ್ರಿಲ್‌ 25 ರಂದು ಈ ಕಲಶಗಳು ಕೊಲ್ಲೂರು ತಲುಪಲಿವೆ. ಏಪ್ರಿಲ್‌ 27 ರಂದು ಕಲಶಗಳನ್ನು ಬ್ರಹ್ಮ ಕಲಶೋತ್ಸವದಲ್ಲಿ ಪೂಜಿಸಲಿದ್ದು, ಆನಂತರ ಅವುಗಳನ್ನು ಭಕ್ತರಿಗೆ ಸಂರಕ್ಷಣೆಗೆ ನೀಡಲಾಗುವುದು ಎಂದು ಸುಕುಮಾರ್‌ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೃಷ್ಣ ಅವರಿಂದ ಸ್ವಾಗತ ಗೋಪುರ ಉದ್ಘಾಟನೆ
ಏಪ್ರಿಲ್‌ 23 ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸ್ವಾಗತ ಗೋಪುರವನ್ನು ಉದ್ಘಾಟಿಸಲಿದ್ದಾರೆ. ಕೆತ್ತನೆಯ ಶಿಲಾ ಸ್ಥಂಭಗಳನ್ನು ಸ್ವಾಗತ ಗೋಪುರದ ನೆಲ ಅಂತಸ್ತಿನಲ್ಲಿ ಬಳಸಲಾಗಿದ್ದು , ಮೊದಲ ಮಹಡಿಯಲ್ಲಿ ಕೆತ್ತನೆಯ 26 ಟೀಕ್‌ ಕಂಬಗಳನ್ನು ಬಳಸಲಾಗಿದೆ. ಈ ಕಂಬಗಳಿಗೆ 2 ಕೋಟಿ ರುಪಾಯಿ ಖರ್ಚಾಗಿದೆ. ಕಾನೂನು ಅಡಚಣೆಗಳಿಂದಾಗಿ ಗೋಪುರ ನಿರ್ಮಾಣಕ್ಕೆ 7 ವರ್ಷ ತಗುಲಿದೆ. ಇದೇ ಸಂದರ್ಭದಲ್ಲಿ ಮುರ್ಡೇಶ್ವರ ಸೆರಾಮಿಕ್ಸ್‌ನ ಆರ್‌.ಎನ್‌.ಶೆಟ್ಟಿ ಅವರು 40 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿಐಪಿ ಗೆಸ್ಟ್‌ಹೌಸ್‌ನ್ನು ಕೂಡ ಕೃಷ್ಣ ಉದ್ಘಾಟಿಸಲಿದ್ದಾರೆ.

ಸ್ವಾಗತ ಗೋಪುರದ ಮೇಲ್ಛಾವಣಿ ತಾಮ್ರದ ಹೊದಿಕೆಯನ್ನು ಹೊಂದಿದೆ. ಗೋಪುರಕ್ಕೆ ಮೂರು ಚಿನ್ನದ ಕಲಶಗಳನ್ನು ಪಾಂಡಿಚೆರಿಯ ಭಕ್ತರೊಬ್ಬರು ನೀಡುತ್ತಿದ್ದು , ಅವುಗಳನ್ನು ಅಳವಡಿಸಲಾಗುವುದು ಎಂದು ಸುಕುಮಾರ್‌ ಶೆಟ್ಟಿ ಹೇಳಿದ್ದಾರೆ.

ಅಂದಹಾಗೆ, 11 ದಿನಗಳ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಸಹಸ್ರ ಚಂಡಿಕಾ ಯಾಗ, ಶ್ರೀಸೂಕ್ತ ಹೋಮ, ಅತಿರುದ್ರ ಸೂಕ್ತ, ಗಾಯತ್ರಿ ಹೋಮ ಹಾಗೂ ಸುದರ್ಶನ ಹೋಮ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X