ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಪ್ರವಾಸೀ ತಾಣಗಳಿಗೆ ಹಾರಲಿವೆ ಸಣ್ಣ ಸಣ್ಣ ವಿಮಾನಗಳು?

By Staff
|
Google Oneindia Kannada News

ಬೆಂಗಳೂರು : ಸ್ಥಾಯಿ ಎಂಬ ಅಪವಾದ ಹೊತ್ತಿರುವ ಪ್ರವಾಸೋದ್ಯಮಕ್ಕೆ ಜಂಗಮ ಸ್ವರೂಪ ಕೊಡುವ ನಿಟ್ಟಿನಲ್ಲಿ ಸರ್ಕಾರ ವಿಮಾನ ಇಂಧನದ ಮೇಲಿನ ತೆರಿಗೆ ಕಡಿತವನ್ನು ಶೇ.3ರಷ್ಟು ವಿಸ್ತರಿಸಿದೆ. ಜೊತೆಗೆ ಖಾಸಗಿಯವರಿಗೆ ಮಂಜೂರು ಮಾಡಿರುವ ಸರ್ಕಾರಿ ಜಾಗೆಗಳ ದರವನ್ನೂ ಪ್ರತಿಶತ 50ರಷ್ಟು ಇಳಿಸಿದೆ.

ಗುರುವಾರ ಸರ್ಕಾರ ಅನಾವರಣಗೊಳಿಸಿದ ಹೊಸ ಪ್ರವಾಸೋದ್ಯಮ ನೀತಿಯಿದು. ಪ್ರವಾಸೋದ್ಯಮಕ್ಕೆ ಮೂಲಭೂತ ಸೌಕರ್ಯ ಹೆಚ್ಚಿಸಲು ಅಗತ್ಯವಿರುವ 124 ಕೋಟಿ ರುಪಾಯಿಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಅಥವಾ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಸಾಲದ ರೂಪದಲ್ಲಿ ಪಡೆಯಬೇಕು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಚಿವ ಸಂಪುಟದ ಉಪ ಸಮಿತಿಯ ನೇತೃತ್ವ ವಹಿಸಿದ್ದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ ಸಭೆಯ ನಂತರ ಸುದ್ದಿಗಾರರೊಡನೆ ಮಾತಾಡುತ್ತಿದ್ದರು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಮಿತಿಯ ಶಿಫಾರಸ್ಸುಗಳನ್ನು ಸಚಿವ ಸಂಪುಟ ಸಭೆ ಒಮ್ಮತದಿಂದ ಒಪ್ಪಿಕೊಂಡಿದೆ ಎಂದರು.

ರಾಜ್ಯದ ವಿವಿಧ ಸ್ಥಳಗಳಿಗೆ ಸಣ್ಣ ಪುಟ್ಟ ವಿಮಾನ ಸಂಚಾರ : ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಆದರೆ ಅವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದಿರಲು ಬೇರೆ ಬೇರೆ ಕಾರಣಗಳಿವೆ. ಇನ್ನು ಮುಂದೆ ಈ ಹಿನ್ನಡೆಗಳನ್ನು ಮೀರಿ ನಾವು ಹೆಜ್ಜೆ ಇಡಲಿದ್ದೇವೆ. ರಾಜ್ಯದ ವಿವಿಧ ಪ್ರವಾಸೀ ಆಕರ್ಷಣೆಯ ಸ್ಥಳಗಳಿಗೆ ಸಣ್ಣ ಪುಟ್ಟ ವಿಮಾನಗಳ ಸಂಚಾರ ಪ್ರಾರಂಭಿಸುವಂತೆ ಹಲವು ವಿಮಾನ ಸಂಚಾರ ಕಂಪನಿಗಳ ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದೆ. ವಿಮಾನ ಪ್ರಯಾಣದ ದರ ಅಗ್ಗವಾಗಲಿ ಎಂಬ ಕಾರಣದಿಂದ ವಿಮಾನ ಇಂಧನದ ಮೇಲಿನ ತೆರಿಗೆಯ ಕಡಿತವನ್ನು ಶೇ.3ರಷ್ಟು ವಿಸ್ತರಿಸಿದ್ದೇವೆ. ಜೊತೆಗೆ ರೆಸಾರ್ಟ್‌, ಹೊಟೇಲ್‌ ಉದ್ದಿಮೆ ಶುರು ಮಾಡುವವರಿಗೆ ಸ್ಟಾಂಪ್‌ ಸುಂಕದಲ್ಲೂ ವಿನಾಯಿತಿ ಇದೆ ಎಂದು ಹೇಳಿದರು.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನೇತೃತ್ವದ ರಾಜ್ಯ ಪ್ರವಾಸೋದ್ಯಮ ಸಮಿತಿಯ ಕಾರ್ಯ ಸ್ವರೂಪವನ್ನು ವಿಸ್ತರಿಸಲಾಗುವುದು. ಇನ್ನಷ್ಟು ಸಚಿವರು ಹಾಗೂ ಅಧಿಕಾರಿಗಳನ್ನು ಇದರಲ್ಲಿ ಸೇರಿಸುವುದರ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು. ಸರ್ಕಾರಿ ಜಾಗೆಗಳನ್ನು ಖರೀದಿಸುವ ಖಾಸಗಿಯವರಿಗೆ 50 ಪ್ರತಿಶತ ದರ ಕಡಿತ ಇದೆ. ಆದರೆ, ಪ್ರಸ್ತಾವಿತ ಗಡುವಿನೊಳಗೆ ಪ್ರವಾಸೋದ್ಯಮದ ಯೋಜನೆಗಳನ್ನು ಅವರು ಪೂರೈಸಬೇಕು. ಹಾಗೆ ಮಾಡದಿದ್ದಲ್ಲಿ ಮಂಜೂರು ಮಾಡಿದ ಜಾಗೆಯನ್ನು ವಾಪಸ್ಸು ಪಡೆಯಲಾಗುತ್ತದೆ ಎಂದು ದೇಶಪಾಂಡೆ ಎಚ್ಚರಿಸಿದರು.

ಪೈಪ್‌ಲೈನ್‌ನಲ್ಲಿರುವ ಯೋಜನೆಗಳು : ಗಾಲಿಗಳ ಮೇಲೆ ಅರಮನೆ (ಪ್ಯಾಲೇಸ್‌ ಆನ್‌ ವ್ಹೀಲ್ಸ್‌), ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಹೊತ್ತು ವನ್ಯ ಪ್ರವಾಸ, ಖಾಸಗಿಯವರನ್ನು ತೊಡಗಿಸಿಕೊಳ್ಳುವ ಮೂಲಕ ಬಾದಾಮಿ- ಐಹೊಳೆ- ಪಟ್ಟದಕಲ್ಲುಗಳ ಅಭಿವೃದ್ಧಿ, ಜೋಗದ ಅಭಿವೃದ್ಧಿ, ಐತಿಹಾಸಿಕ ಸ್ಮಾರಕಗಳ ಸುತ್ತಮುತ್ತಲಿನ ಸ್ಥಳಗಳ ಅಭಿವೃದ್ಧಿ, ನಂದಿ ಬೆಟ್ಟ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಪ್ರವಾಸೋದ್ಯಮವನ್ನು ಚುರುಕುಗೊಳಿಸುವುದು ಮೊದಲಾದ ಯೋಜನೆಗಳನ್ನು ಸರ್ಕಾರ ಸದ್ಯದಲ್ಲೇ ಪ್ರಾರಂಭಿಸಲಿದೆ ಎಂದರು.

ಈಗಾಗಲೇ ರಚಿಸಲಾಗಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರ ಏಪ್ರಿಲ್‌ 23ರಂದು ಸಭೆ ಸೇರಲಿದ್ದು, ಹಂಪಿಯಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಿದೆ ಎಂದು ಸಚಿವರು ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X