ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತಾ ದರ್ಶನದಲ್ಲಿ ಪಂಡರೀಬಾಯಿ- ದ್ವಾರಕೀಶ್‌ಗೆ ಬಿಡಿಎ ನಿವೇಶನ

By Staff
|
Google Oneindia Kannada News

ಬೆಂಗಳೂರು : ಜನತಾ ದರ್ಶನದಲ್ಲಿ ಜನಾರ್ಧನ ಕೃಪೆ- ಕಲಾವಿದರಾದ ಪಂಡರಿಬಾಯಿ ಹಾಗೂ ದ್ವಾರಕೀಶ್‌ ಅವರಿಗೆ ತಲಾ ಒಂದೊಂದು ನಿವೇಶನ ಕೊಡುವಂತೆ ಬಿಡಿಎ ಆಯುಕ್ತರಿಗೆ ಸೂಚನೆ.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಅಹವಾಲು ಹೊತ್ತ ಜನರೋ ಜನ. ಬೆಳಗ್ಗೆಯಿಂದಲೇ ಶುರುವಾದ ಜನತಾ ದರ್ಶನ ಕಾರ್ಯಕ್ರಮದ ಆಕರ್ಷಣೆ ಪಂಡರೀಬಾಯಿ ಹಾಗೂ ದ್ವಾರಕೀಶ್‌. ಇಬ್ಬರೂ ಪ್ರತ್ಯೇಕವಾಗಿ ಮಾಡಿದ ಮನವಿಗಳು ಒಂದೇ ಆಗಿದ್ದುದು ಕಾಕತಾಳೀಯ. ಇಬ್ಬರೂ ಕೇಳಿಕೊಂಡಿದ್ದು ಬಿಡಿಎ ನಿವೇಶನ. ಕಲಾವಿದರ ಮನವಿಗೆ ಕೃಷ್ಣ ತಕ್ಷಣವೇ ಸ್ಪಂದಿಸಿ, ನಿವೇಶನ ಮಂಜೂರು ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ತಕ್ಷಣವೇ ಷರಾ ಬರೆದಾಗ ಜನ ದಂಗು!

ಗೃಹಮಂಡಳಿ ಈಗಾಗಲೇ ಯಲಹಂಕದಲ್ಲಿ ಪಂಡರಿಬಾಯಿಯವರಿಗೆ ನಿವೇಶನ ಕೊಟ್ಟಿದೆ. ಬಿಡಿಎ ವ್ಯಾಪ್ತಿಯಲ್ಲಿ ಜಾಗೆ ಬೇಕೆಂಬುದು ಅವರ ಮನವಿಯಾಗಿತ್ತು. ಮುಖ್ಯಮಂತ್ರಿ ಯಾವುದೇ ತಗಾದೆ ಎತ್ತದೆ ಕಲಾವಿದೆ ಪಂಡರೀಬಾಯಿ ಅವರ ಬೇಡಿಕೆಗೆ ಅಸ್ತು ಎಂದರು.

ಅಹ್ಮದಾಬಾದ್‌ನ ಕೇಂದ್ರ ವಿದ್ಯುತ್‌ ಜಾಲದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗ ಉದಯ್‌ಶಂಕರ್‌ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಬಹುದಿನಗಳಿಂದ ಗೈರುಹಾಜರಿಯೆಂದು ನೆಪವೊಡ್ಡಿ, ಬರಬೇಕಾದ ಪಗಾರ ಕೊಟ್ಟಿಲ್ಲ ಎಂಬುದು ಅವರ ಅಳಲು. ಉದಯ್‌ ಶಂಕರ್‌ ಕಷ್ಟ ಕೇಳಿದ ತಕ್ಷಣ ಕೃಷ್ಣ, ಕೇಂದ್ರ ವಿದ್ಯುತ್‌ ಜಾಲದ ಮುಖ್ಯಾಧಿಕಾರಿ ಆರ್‌.ಪಿ.ಸಿಂಗ್‌ ಅವರಿಗೆ ಫೋನಾಯಿಸಿ, ಸಮಸ್ಯೆ ಬಗೆಹರಿಸುವಂತೆ ಕೋರಿದರು.

ಒಂದೂವರೆ ತಾಸು ನಡೆದ ಜನತಾ ದರ್ಶನದಲ್ಲಿ ಕೆಲವರ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ. ಇನ್ನು ಕೆಲವರಿಗೆ ಭರವಸೆ, ಸಂಬಂಧಪಟ್ಟವರ ಗಮನಕ್ಕೆ ವಿಷಯ ತಲುಪಿದ ನಿರಾಳ ಭಾವ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X