• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳೂರಲ್ಲಿ ಕೆಇಆರ್‌ಸಿ ಬೈಠಕ್‌; ಜನತೆಯಿಂದ ಅಧಿಕಾರಿಗಳಿಗೆ ಬೆಂಡು

By Staff
|

*ಸದಾಶಿವ ಕೆ.

ಮಂಗಳೂರು: ವಿದ್ಯುತ್‌ ದರ ಕುರಿತು ತೀವ್ರ ವಿರೋಧ, ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹ ಹಾಗೂ ಬೈಠಕ್‌ ಬಗೆಗೆ ಜನ ಪ್ರತಿನಿಧಿಗಳ ತೀವ್ರ ನಿರಾಸಕ್ತಿ - ಇವು ಏ.15 ರಿಂದ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಬೈಠಕ್‌ನ ಮುಖ್ಯಾಂಶಗಳು.

ಕೆಪಿಟಿಸಿಎಲ್‌ನ ಪ್ರಸ್ತಾವಿತ ವಿದ್ಯುತ್‌ ದರ ಏರಿಕೆಯ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಳಕೆದಾರರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗದ ಮುಂದೆ ನಡೆದ ಸಭೆಯಲ್ಲಿ ಕೆಪಿಟಿಸಿಎಲ್‌ ವಿರುದ್ಧದ ಕೂಗುಗಳು ಕೇಳಿ ಬಂದವು.

ಹೊಣೆಗೇಡಿ ವರ್ತನೆ, ಕಾಲ ಕಾಲಕ್ಕೆ ಶುಲ್ಕ ವಸೂಲಿ ಮಾಡದೇ ಇರುವುದಕ್ಕೆ ಹೆಸರಾಗಿರುವ ಕೆಪಿಟಿಸಿಎಲ್‌, ವಿದ್ಯುತ್‌ ಸೋರಿಕೆ ಮತ್ತು ಕಳ್ಳತನವನ್ನು ತಡೆಗಟ್ಟುವಲ್ಲಿ ವಿಫಲಗೊಂಡಿದ್ದು ತನ್ನ ನಷ್ಟವನ್ನು ಬೆಲೆಯೇರಿಸುವ ಮೂಲಕ ಗ್ರಾಹಕರ ಮೇಲೆ ಹೊರಿಸುವುದು ಸರಿಯಲ್ಲ ಎಂಬ ವಾದಗಳು ಏ.15 ಹಾಗೂ 16 ರಂದು ನಡೆದ ಸಭೆಯಲ್ಲಿ ಕೇಳಿಬಂದವು.

ಮೊದಲ ದಿನದ ಬೈಠಕ್‌
ವಿಟ್ಲದ ದೂರವಾಣಿ ಮತ್ತು ವಿದ್ಯುತ್‌ ಬಳಕೆದಾರರ ಸಂಘದ ಪ್ರತಿನಿಧಿ ಬಿ.ಟಿ. ನಾರಾಯಣ ಭಟ್‌ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪಂಪ್‌ಸೆಟ್‌ ಬಳಕೆಗೆ ವಿದ್ಯುತ್‌ ಸಾಕಾಗುವುದಿಲ್ಲ. ಗುಣಮಟ್ಟದ ವಿದ್ಯುತ್‌ ನೀಡಲಾಗದ ಕೆಪಿಟಿಸಿಎಲ್‌ಗೆ ದರ ಏರಿಕೆಯ ಕುರಿತು ಮಾತಾಡುವ ಹಕ್ಕಿಲ್ಲ ಎಂದರು.

ಸುಳ್ಯದ ಕಣ್ಣಿಗೆ ಸುಣ್ಣ
ಸುಳ್ಯ ತಾಲ್ಲೂಕಿಗೆ 15 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಅಗತ್ಯವಿದೆ. ಆದರೆ ಕೆಪಿಟಿಸಿಎಲ್‌ ಮೂರು ಮೆಗಾವ್ಯಾಟ್‌ ವಿದ್ಯುತ್‌ ಮಾತ್ರ ನೀಡುತ್ತಿದೆ. ಇಂತಹ ಕಳಪೆ ಸೇವೆ ನೀಡಿ ದರ ಏರಿಸುವುದು ಎಷ್ಟರ ಮಟ್ಟಿಗೆ ಸರಿ ..? ಅಲ್ಲದೆ ಕೆಪಿಟಿಸಿಎಲ್‌ ಜಾರಿಗೆ ತಂದಿರುವ ಅಕ್ರಮ ಸಕ್ರಮ ಯೋಜನೆಯಿಂದ ವ್ಯಾಪಕ ಭ್ರಷ್ಟಾಚಾರ ಕೂಡ ನಡೆಯುತ್ತಿದೆ ಎಂದು ರೈತ ಮುಖಂಡ ಹಾಗೂ ಉದ್ಯಮಿ ಎಂ.ಬಿ. ಸದಾಶಿವ ಹೇಳಿದರು.

ಕೆಪಿಟಿಸಿಎಲ್‌ ನೀಡುತ್ತಿರುವ ಇಲೆಕ್ಟ್ರಾನಿಕ್‌ ಮೀಟರ್‌ನ ಕಾರ್ಯದಕ್ಷತೆ ಸರಿಯಾಗಿಲ್ಲ. ಇದರಿಂದ ಅನುಕೂಲಕ್ಕಿಂತ ಅನನುಕೂಲವೇ ಜಾಸ್ತಿ ಎಂದು ಮಂಗಳೂರಿನ ಜೆ.ಎಂ. ಮೊಂತೆರೋ ಅಸಮಾಧಾನ ವ್ಯಕ್ತಪಡಿಸಿದರು.

ನಿರುತ್ತರರಾದ ಅಧಿಕಾರಿಗಳು
ಇಲೆಕ್ಟ್ರಾನಿಕ್‌ ಮೀಟರ್‌ಗಳು ದೋಷಯುಕ್ತವಾಗಿವೆ ಎಂಬ ಆರೋಪ ಹಿಂದೆ ಕೇಳಿ ಬಂದಿತ್ತು ಆದರೆ ಈಗ ದೂರುಗಳು ಕೇಳಿ ಬಂದಿಲ್ಲ ಎಂದು ಕೆಪಿಟಿಸಿಎಲ್‌ನ ಹಣಕಾಸು ನಿರ್ದೇಶಕ ರವಿ ಕುಮಾರ್‌ ಹೇಳಿದಾಗ, ಈಗಾಗಲೇ ಬಂದಿರುವ ದೂರಿಗೆ ನಿಗಮ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿ , ಅಧಿಕಾರಿಗಳನ್ನು ನಿರುತ್ತರರನ್ನಾಗಿಸಿದರು.

ಬಳಕೆದಾರರ ಆಕ್ಷೇಪ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಿದ ಕೆಪಿಟಿಸಿಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್‌ ಮಾತನಾಡಿ, ನಿಗಮವು ಉತ್ತಮ ವಿದ್ಯುತ್‌ ಹಾಗೂ ಸೇವೆಯನ್ನು ನೀಡುತ್ತಿದೆ. ಕಳೆದ ವರ್ಷದ ವಿದ್ಯುತ್‌ ಪರಿಸ್ಥಿತಿಗಿಂತ ಈ ವರ್ಷ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡು ಬಂದಿದೆ ಎಂದರು.

ಗುಣಮಟ್ಟದ ವಿದ್ಯುತ್‌ ನೀಡುವುದಕ್ಕಾಗಿಯೇ ದರ ಹೆಚ್ಚಿಸಲಾಗಿದೆ. ಏಪ್ರಿಲ್‌ 17ರಿಂದ ರಾಜ್ಯಾದ್ಯಂತ 1,700 ಪುಲಕೇಶಿ ಪಡೆಗಳು ಗಸ್ತು ತಿರುಗುವ ಮೂಲಕ ವಿದ್ಯುತ್‌ ಕಳ್ಳತನವನ್ನು ಪತ್ತೆ ಹಚ್ಚುತ್ತಾರೆ ಎಂದು ಬಳಿಗಾರ್‌ ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾಗಲೀ, ಸಂಸತ್‌ ಸದಸ್ಯರಾಗಲೀ ಅಥವಾ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ ಸದಸ್ಯರಾಗಲೀ ಭಾಗವಹಿಸಿರಲಿಲ್ಲ.

ಎರಡನೇ ದಿನದ ಬೈಠಕ್‌ನಲ್ಲಿ ರೈತರ ಅಹವಾಲು
ಏಪ್ರಿಲ್‌ 16 ರಂದು ನಡೆದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಬೈಠಕ್‌ನಲ್ಲಿ ಜಿಲ್ಲೆಯ ರೈತರು ತಮ್ಮ ಅಹವಾಲುಗಳನ್ನು ಆಯೋಗದ ಮುಂದೆ ಮಂಡಿಸಿದರು. ಬಂಟ್ವಾಳ ತಾಲ್ಲೂಕಿನ ಕೋಡಪದವು ಗ್ರಾಮದ ರೈತ ಹಾಗೂ ಉದ್ಯಮಿ ಸುಬ್ರಹ್ಮಣ್ಯ ಭಟ್‌ ಅವರು ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ವಿಷಯ ಪ್ರಸ್ತಾಪಿಸಿದರು.

ಮೀಟರ್‌ ಅಳವಡಿಕೆ ಕಾರ್ಯ ಮುಗಿಯುವವರೆಗೆ ಕೃಷಿ ವಿದ್ಯುತ್‌ಗೆ ಯಾವ ರೀತಿ ದರ ನಿಗದಿ ಪಡಿಸಲಾಗುವುದು ಎನ್ನುವ ಭಟ್‌ರ ಹೇಳಿಕೆಯನ್ನು ಕೆಇಆರ್‌ಸಿ ಅಧ್ಯಕ್ಷ ಪಿಲಿಪೋಸ್‌ ಮಥಾಯಿ ಬೆಂಬಲಿಸಿದಾಗ, ಕೆಪಿಟಿಸಿಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್‌ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ . ಪ್ರತಿ ಅಶ್ವಶಕ್ತಿ ವಿದ್ಯುತ್‌ಗೆ 300 ರುಪಾಯಿ ವಿಧಿಸಲಾಗುವುದು ಎನ್ನುವ ಬಳಿಗಾರ್‌ ಉತ್ತರ ಮಥಾಯಿ ಅವರಿಗೆ ತೃಪ್ತಿ ತರಲಿಲ್ಲ .

ಮರು ದನಿಸಿದ ಸುಳ್ಯದ ಸಮಸ್ಯೆ
ಸುಳ್ಯದ ವಿದ್ಯುತ್‌ ಸಮಸ್ಯೆ ಎರಡನೇ ದಿನವೂ ಆಯೋಗದೆದುರು ಚರ್ಚೆಗೆ ಬಂತು. ಈ ಕುರಿತು ಮಾತನಾಡಿದ ಕೆಇಆರ್‌ಸಿಯ ಪಿಲಿಪೋಸ್‌ ಮಥಾಯಿ- ಇದು ವಿದ್ಯುತ್‌ ದರ ಪರಿಷ್ಕರಣೆ ಕುರಿತ ಚರ್ಚೆಯ ವೇದಿಕೆಯೇ ಹೊರತು ವಿದ್ಯುತ್‌ ಅದಾಲತ್‌ ಅಲ್ಲ . ರಾಜ್ಯ ವಿದ್ಯುತ್‌ ಶಕ್ತಿ ನಿಯಂತ್ರಣ ಆಯೋಗಕ್ಕೆ ಸಂಬಂಧ ಪಡದ ವಿಚಾರಗಳ ಕುರಿತು ಗಮನ ಹರಿಸಲಾಗದು ಎಂದರು.

ಸುಳ್ಯ ಕೃಷಿಕರು ಮತ್ತೆ ವಿದ್ಯುತ್‌ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ, ಒತ್ತಡಕ್ಕೆ ಮಣಿದ ಆಯೋಗ ಸಮಸ್ಯೆ ಬಗ್ಗೆ ಚರ್ಚಿಸಲು ಅನುಮತಿ ನೀಡಿತು. ಸುಳ್ಯ ತಾಲ್ಲೂಕಿನ ಮಂಡೆಕೋಲು ಎಂಬಲ್ಲಿ ವಿದ್ಯುತ್‌ ಸರಬರಾಜು ಸರಿಯಾಗಿಲ್ಲ . ಹಳೆಯ ವಿದ್ಯುತ್‌ ಲೈನ್‌ಗಳು ಸಾಮರ್ಥ್ಯ ಕಳೆದುಕೊಂಡಿವೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ನಾರಾಯಣ ಭಟ್‌ ದೂರಿದರು. ಈ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಆಯೋಗದ ಸದಸ್ಯ ಗೋಪಾಲ್‌ ಅವರು ಕೆಪಿಟಿಸಿಎಲ್‌ ನಿರ್ದೇಶಕ (ಹಣಕಾಸು) ಮತ್ತು ಮುಖ್ಯ ಇಂಜಿನಿಯರ್‌ ಅವರನ್ನು ವಿವರಣೆ ಕೇಳಿದಾಗ ಅವರು ಚಡಪಡಿಸಿದರು. ಈ ಸಮಸ್ಯೆಗೆ ಅಧಿಕಾರಿಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯೇ ಕಾರಣ ಎಂದು ಅವರು ಜಾರಿಕೊಂಡರು.

ಎರಡನೆಯ ದಿನದ ಬೈಠಕ್‌ನಲ್ಲೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯಾವ ಜನ ಪ್ರತಿನಿಧಿಯೂ ಹಾಜರಿರಲಿಲ್ಲ !

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more