ಕಚ್ಚಾ ವಸ್ತು ದುಬಾರಿ; ಐಟಿಸಿಯ ಎರಡು ಬ್ರಾಂಡ್ಸಿಗರೇಟು ತುಟ್ಟಿ !
ಕೋಲ್ಕತ: ಕಚ್ಚಾವಸ್ತುಗಳ ಬೆಲೆಯೇರಿಕೆ ಹಾಗೂ ತೆರಿಗೆ ಭಾರದಿಂದಾಗಿ ಪ್ರಮುಖ ಸಿಗರೇಟು ತಯಾರಕ ಕಂಪನಿಯಾದ ಐಟಿಸಿ ತನ್ನ ಎರಡು ಪ್ರಮುಖ ಬ್ರಾಂಡ್ ಸಿಗರೇಟುಗಳ ಬೆಲೆಯೇರಿಸಲು ನಿರ್ಧರಿಸಿದೆ.
ತೆರಿಗೆ ಹೆಚ್ಚಳ, ಜಾಹೀರಾತು ನೀಡಿಕೆಯ ನಿರ್ಬಂಧ, ಸಾರ್ವಜನಿಕ ಕ್ಷೇತ್ರದಲ್ಲಿ ಧೂಮಪಾನ ನಿಷೇಧ ಮುಂತಾದ ಕ್ರಮಗಳು ಸಿಗರೇಟು ಉದ್ಯಮದ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಸಿಗರೇಟು ದರವನ್ನು ಹೆಚ್ಚಿಸದೇ ಬೇರೆ ವಿಧಿಯಿಲ್ಲ ಎಂದು ಐಟಿಸಿ ಕಂಪೆನಿಯ ಬಾತ್ಮೀದಾರರು ಹೇಳಿದ್ದಾರೆ.
ಗೋಲ್ಡ್ ಫ್ಲೇಕ್ ರೆಗ್ಯುಲರ್ ಫಿಲ್ಟರ್ ಮತ್ತು ಬ್ರಿಸ್ಟೋಲ್ ಬ್ರಾಂಡ್ನ ಸಿಗರೇಟುಗಳ ದರವನ್ನು ಹೆಚ್ಚಿಸಲಾಗಿದೆ. ದರ ಪರಿಷ್ಕರಣೆಯಿಂದ ಗೋಲ್ಡ್ಫ್ಲೇಕ್ ಸಿಗರೇಟಿನ ಬೆಲೆ ಸುಮಾರು 19 ರೂಪಾಯಿಗಳಷ್ಟು ಹೆಚ್ಚಾಗಲಿದೆ. ಪರಿಷ್ಕೃತ ದರ ಯಾವತ್ತಿನಿಂದ ಜಾರಿಗೆ ಬರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಈ ನಡುವೆ ಕಳೆದ ಒಂದು ವರ್ಷದ ಅವಧಿಯಲ್ಲಿ ಸಿಗರೇಟು ಮಾರಾಟ ದರದಲ್ಲಿ ಶೇ 12ರಷ್ಟು ಇಳಿಕೆ ಕಂಡು ಬಂದಿರುವುದಾಗಿ ಭಾರತೀಯ ತಂಬಾಕು ಸಂಸ್ಥೆ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...