ಅನ್ನಕ್ಕೆ ಸಂಚಕಾರದ ಆತಂಕ : ಏ.9 ರಂದು ಸರ್ಕಾರದ ವಿರುದ್ಧ ಪ್ರತಿಭಟನೆ
ಬೆಂಗಳೂರು : ರಾಜ್ಯದಲ್ಲಿ ಛಾಪಾ ಕಾಗದ ಬಳಕೆಯನ್ನು ನಿಲ್ಲಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ಛಾಪಾ ಕಾಗದ ಮಾರಾಟಗಾರರ ಹಾಗೂ ಬೆರಳಚ್ಚುಗಾರರ ಸೇವಾ ಸಂಘ ಏಪ್ರಿಲ್ 9 ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ತಾಲ್ಲೂಕು ಕಚೇರಿ ಆವರಣದಿಂದ ವಿಧಾನಸೌಧದವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಲಿದ್ದು , ಛಾಪಾ ಕಾಗದ ಬಳಕೆಯನ್ನು ರದ್ದು ಪಡಿಸುವ ನಿರ್ಧಾರ ಕೈ ಬಿಡುವಂತೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಒತ್ತಾಯಿಸಲಾಗುವುದು ಎಂದು ಕರ್ನಾಟಕ ಛಾಪಾ ಕಾಗದ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಜೆ. ಪಾರ್ಥಸಾರಥಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ ನಿರ್ಧಾರದಿಂದಾಗಿ ಛಾಪಾ ಕಾಗದ ಮಾರಾಟವನ್ನೇ ಅನ್ನದ ಮಾರ್ಗವನ್ನಾಗಿ ಕಂಡುಕೊಂಡಿರುವ ಸಾವಿರಾರು ಜನರಿಗೆ ತೊಂದರೆಯುಂಟಾಗುತ್ತದೆ. ಬೆರಳಚ್ಚುಗಾರರು ಕೂಡ ಕೆಲಸ ಕಳೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಸರ್ಕಾರ ತನ್ನ ನಿರ್ಧಾರವನ್ನು ಕೈ ಬಿಡಬೇಕೆಂದು ಪಾರ್ಥಸಾರಥಿ ಒತ್ತಾಯಿಸಿದರು. ಸಂಘದ ಕಾರ್ಯದರ್ಶಿ ಆರ್.ಶಿವಣ್ಣಾಚಾರಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಕೋಟ್ಯಂತರ ರುಪಾಯಿಗಳ ನಕಲಿ ಛಾಪಾ ಕಾಗದದ ಜಾಲ ಬಯಲಾದ ಹಿನ್ನೆಲೆಯಲ್ಲಿ ಛಾಪಾ ಕಾಗದ ಬಳಕೆಯನ್ನೇ ಕೈ ಬಿಡುವುದಾಗಿ ಮುಖ್ಯಮಂತ್ರಿ ಎಸ್.ಎ.ಕೃಷ್ಣ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...