ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈನಿ, ಸ್ಕೂಟಿ ಮತ್ತು ಸ್ಯಾಮ್‌- ಭಾಗ 2

By Oneindia Staff
|
Google Oneindia Kannada News

ಅರ್ಧ ಗಂಟೆಯಾದರೂ ಫೋನ್‌ ಮಾಡದೆ ಶತಪಥ ತಿರುಗುತ್ತಿದ್ದ ಆಕೆಯನ್ನು ಕುತೂಹಲದಿಂದ ‘ ಏನು ಮೇಡಂ ಫೋನ್‌ ನಂಬರನ್ನೂ ಮನೆಯಲ್ಲಿಯೇ ಬಿಟ್ಟುಬಂದಿದ್ದೀರಾ ? ಅಥವಾ ನಂಬರ್‌ನ್ನು ಜ್ಞಾಪಿಸಿಕೊಳ್ಳುತ್ತಿದ್ದೀರಾ’ ಎಂದು ಕೇಳಿದೆ. ‘ ಇಲ್ಲ , ಫೋನ್‌ ಮಾಡಲು ನಾನು ಇಲ್ಲಿಗೆ ಬಂದಿಲ್ಲ . ಇಂದು ನಾನು ನನ್ನ ಫ್ರೆಂಡ್‌ ಜೊತೆ ಸಂಜೆ ಆರರ ಶೋ ಸಿನಿಮಾಗೆ ಹೋಗಬೇಕು. ಅವಳು ನನ್ನನ್ನಿಲ್ಲಿಗೆ ಬರಲು ತಿಳಿಸಿದ್ದಳು. ಅವಳಿಗಾಗಿ ಕಾಯುತ್ತಿದ್ದೇನೆ’ ಎಂದಳು. ಆಗಲೇ ಐದೂಮುಕ್ಕಾಲಾದ್ದರಿಂದ ಆಕೆಗಿರುವ ಆತುರತೆಯನ್ನು ಗಮನಿಸಿ ಮನದೊಳಗೆ ನಗು ಬಂದರೂ ಪಾಪವೆನಿಸಿ ‘ ಮೇಡಂ , ಆ ಹುಡುಗಿಯ ಮನೆಗಾದರೂ ಫೋನ್‌ ಮಾಡಿ, ಬರಲು ತಿಳಿಸಿ. ಬಹುಶಃ ಮರೆತಿರಬಹುದೇನೋ ?’ ಎಂದೆ. ಅದಕ್ಕೆ ಸ್ಕೂಟಿ ‘ ಅವಳ ಮನೆಯಲ್ಲಿ ಫೋನಿಲ್ಲ. ಫಿಲಂ ಪ್ರೋಗ್ರಾಂ ಫಿಕ್ಸ್‌ ಮಾಡಿದ್ದು ಅವಳೇ. ಬಹುಶಃ ಇದೇ ಬೂತಿನಿಂದಲೇ’ ಎಂದಳು. ಮಾರ್ಚಿ ತಿಂಗಳ ಒಂದು ಭಾನುವಾರ ಬಂದ ಪಕ್ಕದ ಬೀದಿಯ ಕೈನಿಯೇ ಇವಳ ಫ್ರೆಂಡ್‌ ಇರಬಹುದು ಎನಿಸಿ ‘ನೀವು ಹೀಗೆ ಕಾಯುವ ಬದಲು ಅವಳ ಮನೆಗೆ ಹೋಗಿ ಅವಳನ್ನು ಕರೆದುಕೊಂಡು ಹೋಗಬಹುದಲ್ಲವೇ ?’ ಎಂದು ಮಾತು ಬೆಳೆಸಿದೆ. ನನ್ನದು ಅತಿಯಾಯಿತೇನೋ ಎಂಬಂತೆ ಸ್ಕೂಟಿ ಒಲ್ಲದ ಮನಸ್ಸಿನಿಂದ ‘ಅದು ಹಾಗಲ್ಲ , ಅವಳ ಜೊತೆ ಅವಳ ಅಣ್ಣ ಬರುತ್ತಿದ್ದಾನೆ. ನಾನು ಅವಳ ಅಣ್ಣನ ಜೊತೆ ಫಿಲಂಗೆ ಹೋಗುವುದು ಅವರ ತಾಯಿಗೆ ಸರಿಬರುವುದಿಲ್ಲ . ಆದ್ರಿಂದ ನನ್ನನ್ನು ಇಲ್ಲಿಯೇ ಕಾಯುವಂತೆ ಅವಳ ಅಣ್ಣ ತಿಳಿಸಿದ್ದಾನೆ’ ಎಂದಳು. ಈ ಪ್ರೋಗ್ರಾಂ ಫಿಕ್ಸ್‌ ಮಾಡಿರುವುದು ಕೈನಿಯೋ ಅಲ್ಲ ಅವಳ ಅಣ್ಣನೋ ಎಂದು ಖಚಿತಪಡಿಸಿಕೊಳ್ಳಲು- ‘ಮೇಡಂ ನಿಮಗೆ ಫೋನ್‌ ಮಾಡಿದ್ದು ಕೈನಿಯೋ ಅವಳ ಅಣ್ಣನೋ ?’ ಎಂದೆ. ತಲೆಯಿಂದ ಕಾಲಿನ ವರೆಗೆ ನನ್ನನ್ನು ನೋಡಿದ ಅವಳು ‘ಅವಳ ಅಣ್ಣನೇ ಫೋನ್‌ ಮಾಡಿದ್ದು , ಆದರೆ ಪ್ರೋಗ್ರಾಂ ಫಿಕ್ಸ್‌ ಮಾಡಿದ್ದು ಮಾತ್ರ ಅವಳೇ’ ಎಂದು ಖಚಿತವಾಗಿ ನಿಷ್ಠುರವಾಗಿ ನುಡಿದಳು. ಇದೇನಪ್ಪಾ ನನ್ನ ಬೂತಿಗೆ ಬಂದು ಫೋನ್‌ ಮಾಡದೇ ನನ್ನನ್ನೇ ದಬಾಯಿಸುತ್ತಿದ್ದಾಳೆ ಎನಿಸಿದರೂ, ತೆಪ್ಪಗೆ ಪೇಪರ್‌ ಓದುವವನಂತೆ ಕಣ್ಣಾಡಿಸತೊಡಗಿದೆ.

ಅದೆಲ್ಲಿಂದಲೋ ಬಂದ ಸ್ಯಾಮ್‌ ನನ್ನ ಜೊತೆ ಮಾತನಾಡುತ್ತಾ , ಆ ಹುಡುಗಿಯ ಕಡೆ ನೋಡುತ್ತಿದ್ದ. ನಾನು ಮೆಲ್ಲನೆ ‘ ಈ ಸ್ಕೂಟಿ ಬಲು ಘಾಟಿ’ ಎಂದು ಸ್ಯಾಮ್‌ಗೆ ಹೇಳಿದೆ. ಅವನು ನನ್ನ ಕಡೆ ಮುಖಮಾಡಿ ಬೇರೆ ವಿಷಯಗಳ ಬಗ್ಗೆ ಮಾತನಾಡತೊಡಗಿದ. ಸ್ವಲ್ಪ ಹೊತ್ತಾದ ಮೇಲೆ ಸ್ಕೂಟಿ ನನ್ನಲ್ಲಿ ‘ಇಲ್ಲಿ ಯಾರಾದರೂ ಬಂದು ಕೇಳಿದರೆ ನಾನು ಅವರಿಗಾಗಿ ಕಾದು ಹೋದೆನೆಂದು ತಿಳಿಸಿಬಿಡಿ ಪ್ಲೀಸ್‌’ ಎಂದು ಹೊರಡಲು ಅನುವಾದಳು. ನಾನು ಈಗ ಅವಳ ಸಮಸ್ಯೆಯನ್ನು ಖಂಡಿತವಾಗಿ ಪರಿಹರಿಸಬಹುದೆಂದು ಅವಳಿಗೆ ‘ಮೇಡಂ, ಈ ನನ್ನ ಸ್ಯಾಮ್‌ಗೆ ನಿಮ್ಮ ಫ್ರೆಂಡ್‌ ಮನೆ ಗೊತ್ತಿದೆ. ಅವಳ ಬಳಿ ಕೈನೆಟಿಕ್‌ ಹೋಂಡಾ ಇದೆ ಅಲ್ಲವೇ ? ನೀವು ಇಲ್ಲಿ ಕಾಯುತ್ತಿರುವುದನ್ನು ಈತ ಅವರಿಗೆ ತಿಳಿಸುತ್ತಾನೆ. ಅದೂ ನೀವು ಒಪ್ಪುವಿರಾದರೆ’ ಎಂದು ಸೇರಿಸಿದೆ. ಅವಳಿಗೆ ಖುಷಿಯಾಯಿತೆಂದು ಕಾಣುತ್ತದೆ. ಅಲ್ಲೇ ಇದ್ದ ಹಳೆಯ ಫೋನ್‌ ಬಿಲ್ಲಿನ ಹಿಂದೆ ಏನೋ ಬರೆದು ಸ್ಯಾಮ್‌ಗೆ ಕೊಟ್ಟಳು. ಯಾವ ಸಮಾಜ ಸೇವೆಗೂ ಒಪ್ಪದ ಸ್ಯಾಮ್‌ ಈಗ ಮಾತ್ರ ಮರು ಮಾತಾಡದೆ ಸಮುರಾಯ್‌ ಹತ್ತಿ ಹೋಗಿಯೇ ಬಿಟ್ಟ !

ಅರ್ಧ ಗಂಟೆಯ ನಂತರ, ಸ್ಯಾಮ್‌, ಕೈನಿ ಹಾಗೂ ಅವಳ ಅಣ್ಣ ಮೂವರೂ ಬಂದರು. ಅವರ ದಾರಿಯನ್ನೇ ಎದುರು ನೋಡುತ್ತಿದ್ದ ಸ್ಕೂಟಿ ಒಮ್ಮೆಲೇ ಅವರಿಬ್ಬರನ್ನು ತರಾಟೆಗೆ ತೆಗೆದುಕೊಂಡಳು :
ಸ್ಕೂಟಿ: ಏನಮ್ಮಾ , ಈಗ ಟೈಮೆಷ್ಟು ?
ಕೈನಿ : ಆರೂವರೆ , ಏಕೆ ?
ಸ್ಕೂಟಿ : ಏಕೆಂದು ಬೇರೆ ಕೇಳುತ್ತೀಯಾ. ನೀವಿಬ್ಬರೂ ಇರುವ ಇರುವ ಸ್ಥಿತಿ ನೋಡಿದರೆ ಫಿಲಂಗೆ ಬರುವುದಿಲ್ಲ ಎನಿಸುತ್ತೆ.
ತಲೆಬುಡ ಅರ್ಥವಾಗದ ಕೈನಿ- ‘ಯಾವ ಫಿಲಂ ನಿನ್ನನ್ನು ಇಲ್ಲಿ ಕಾಯಲು ಹೇಳಿದ್ದವರು ಯಾರು ? ’ ಎಂದಳು. ಕೈನಿಯ ಅಣ್ಣನ ಕಡೆಗೆ ತಿರುಗಿದ ಸ್ಕೂಟಿ ‘ಏನಪ್ಪಾ ನೀನೂ ಮರೆತು ಬಿಟ್ಟಿಯಾ’ ಎಂದಳು ಸಿಡುಕುತ್ತಾ. ಅವನಿಗೆ ಇರುಸು ಮುರುಸು . ‘ ನನಗೇನೂ ಗೊತ್ತಿಲ್ಲ , ದಯವಿಟ್ಟು ನನ್ನನ್ನು ನಂಬಿ’ ಎಂದು ಅವನು ಅಂಗಲಾಚುವ ಧ್ವನಿಯಲ್ಲಿ ಹೇಳಿದ.

ಸ್ಕೂಟಿಯ ಪಿತ್ತ ಈಗ ನೆತ್ತಿಗೇರಿತು. ಯಾರನ್ನು ಬೈಯ್ಯಬೇಕೆಂದು ತಿಳಿಯದೇ ಬುಸ್‌ ಎನ್ನತೊಡಗಿದಳು. ‘ನಿಮ್ಮಮ್ಮನ ಮುಂದೆ ನನ್ನ ಜೊತೆ ಸಿನಿಮಾಗೆ ಬರಲು ಧೈರ್ಯವಾಗದೆ ಇಲ್ಲಿಗೆ ಬಂದಿರು ಎಂದು ಫೋನ್‌ ಮಾಡಿ ಈಗ ಏನೂ ಗೊತ್ತಿಲ್ಲದಂತೆ ನಾಟಕ ಮಾಡ್ತೀಯಾ ?’ ಎಂದು ಸ್ಕೂಟಿ ಜೊರು ಮಾಡುತ್ತಿದ್ದರೆ, ಅವನು ತಂಗಿಯ ಕಡೆಗೆ ತನಗೇನೂ ಗೊತ್ತಿಲ್ಲ ಎಂಬಂತೆ ನೋಡುತ್ತಾ ಕರ್ಚೀಫ್‌ ತೆಗೆದು ಮುಖ ಒರೆಸಿಕೊಳ್ಳತೊಡಗಿದ.

ಒಳ್ಳೆಯ ಕಾಮಿಡಿ ಸೀರಿಯಲ್ಲಿನ ನೇರಪ್ರಸಾರ ನೋಡುವ ಸೌಭಾಗ್ಯ ಸಿಕ್ಕವನಂತೆ ಪ್ರತಿ ಡೈಲಾಗನ್ನು ಸ್ಯಾಮ್‌ ಎಂಜಾಯ್‌ ಮಾಡುತ್ತಿದ್ದ. ನಾನು ಅಂದಿನ ದಿನಪತ್ರಿಕೆ ಓದೋಣವೆಂದು ಪೇಪರಿಗೆ ಕೈಗೆತ್ತಿಕೊಂಡೆ. ಕಣ್ಣು ಅಕಸ್ಮಾತಾಗಿ ತಾರೀಖು ಕಡೆ ಹೊರಳಿತು. ಅವತ್ತು ಏಪ್ರಿಲ್‌ ಒಂದನೇ ತಾರೀಖು. ಏನೋ ಹೊಳೆದಂತೆನಿಸಿ ಅಂದಿನ ತಾರೀಖನ್ನು ಆ ಮೂವರ ಗಮನಕ್ಕೆ ತಂದೆ. ಈಗ ಸ್ಕೂಟಿಯು ಕೋಪದಿಂದ ಭುಸುಗೊಟ್ಟುತ್ತಾ ಅವರಿಬ್ಬರ ಮೇಲೆ ಹರಿಹಾಯತೊಡಗಿದಳು.
‘ತಮಾಷೆಯೆಂದರೆ ತಮಾಷೆಯಲ್ಲಿಯೇ ಮುಗಿಯಬೇಕು, ಅದು ಬಿಟ್ಟು ಈ ತರಹ ತಮಾಷೆ ತೀರಾ ಅತಿಯಾಯಿತು. ದೇರ್‌ ಈಸ್‌ ನೋ ಪಾರ್ಡನ್‌ ಫಾರ್‌ ಯೂ ಟೂ.’ ಎಂದು ಹೊರಗೆ ಹೋಗಿ ಗಾಡಿಯನ್ನೂ ಸ್ಟಾರ್ಟ್‌ ಮಾಡಿ ಹೊರಟು ಹೋದಳು. ಕೈನಿಯ ಅಣ್ಣ ದಿಕ್ಕೆಟ್ಟವನಂತೆ ಕೈನಿಯ ಕಡೆಗೆ ನೋಡಿ ತನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲವೆಂದು ಸೋತವನಂತೆ ಹೆಳಿದ. ಕೈನಿಯೂ ಅಣ್ಣನಿಗೆ, ‘ನಾನೂ ಅವನಿಗೆ ಇಲ್ಲಿಗೆ ಬರಲು ಹೇಳಿಲ್ಲ. ಜೊತೆಗೆ ಫಿಲಂಗೆ ಹೋಗಲು ಅವಳೇ ಪ್ರೋಗ್ರಾಂ ಫಿಕ್ಸ್‌ ಮಾಡುವವಳಿದ್ದಳು. ಇದನ್ನು ಅವಳಿಗೆ ನೆನಪಿಸಿ ನಾವಿಬ್ಬರೂ ಅವಳನ್ನು ಸಮಾಧಾನ ಪಡಿಸೋಣ’ ಎಂದು ಅಣ್ಣನ ಜೊತೆಗೆ ಕೈನೆಟಿಕ್‌ ಹೋಂಡಾ ಹತ್ತಿ ಸ್ಕೂಟಿ ಹೋದ ದಿಕ್ಕಿಗೆ ಹೊರಟು ಹೊರಟಳು.

ಎಲ್ಲರೂ ಹೋದ ಮೇಲೆ ಸ್ಯಾಮ್‌ ಬಿದ್ದೂ ಬಿದ್ದೂ ನಗ ತೊಡಗಿದ. ಕಾರಣ ಕೇಳಿದರೆ ಅವನು ಮತ್ತೆ ನಗಲು ಶುರು ಮಾಡಿದ. ಮತ್ತೆ ಕೇಳಲು ಕೈನೆಟಿಕ್‌ ಹೋಂಡಾ ಎಂದವನು ಮತ್ತೆ ನಕ್ಕ. ನನಗೇನೋ ಅನುಮಾನವಾಗಿ ‘ಏನೋ ನೀನೇ ಅವಳ ಅಣ್ಣನ ಹಾಗೆ ಮಾತನಾಡಿ ಸ್ಕೂಟಿಯನ್ನು ಇಲ್ಲಿಗೆ ಕರೆಸಿದೆಯೇನೋ ಎಂದೆ.’ ‘ಅವಳನ್ನು ನಾನಿದೇ ಮೊದಲು ನೋಡುತ್ತಿರುವುದು. ಜೊತೆಗೆ ನನಗೆ ಆ ಹುಡುಗಿಯ ನಂಬರು ಸಿಗುವುದಾದರೂ ಹೇಗೆ?’ ಎಂದು ಮರುಪ್ರಶ್ನೆ ಹಾಕಿ ಮತ್ತೆ ನಗತೊಡಗಿದ.

ಸ್ಯಾಮ್‌ ಮೇಲೆ ನನ್ನ ಸಂಶಯ ಬಲವಾಯಿತು. ಅಂದು ಕೈನಿ ಮಾಡಿದ ಫೋನ್‌ ಬಿಲ್ಲನ್ನು ಅವಳು ಬೇಡವೆಂದಾಗ ಅದನ್ನು ಕಸದ ಬುಟ್ಟಿಗೆ ಹಾಕಿದ್ದು ನೆನಪಾಗಿ ಕಳ್ಳ ಸಿಕ್ಕಿ ಬಿದ್ದ ಎಂದುಕೊಂಡೆ. ‘ಆವತ್ತು ಕಾಫಿಗೆ ಹೇಳಿಬರಲು ನನ್ನನ್ನು ಕ್ಯಾಂಟೀನಿಗೆ ಕಳುಹಿಸಿ, ನಾನು ಬರುವಷ್ಟರಲ್ಲಿ ನೀನೇ ಈ ಕೆಲಸ ಮಾಡಿರುವುದು. ಅವಳು ಬಿಟ್ಟು ಹೋದ ಫೋನ್‌ ಬಿಲ್ಲಿನಿಂದ ನಂಬರ್‌ ತಿಳಿದುಕೊಂಡಿದ್ದೀಯಲ್ಲವೇ’ ಎಂದು ಹೊಡೆಯಲು ಕೈಯೆತ್ತುತ್ತಿದ್ದಾಗ ತಡೆದ ಸ್ಯಾಮ್‌, ‘ನಿನ್ನ ಮುಂದೆಯೇ ಕೆಲಸದವಳು ಕಸವನ್ನೆಲ್ಲಾ ಸೇರಿಸಿ ಬೆಂಕಿಯಿಟ್ಟುದನ್ನು ಮರೆತೆಯಾ ?’ ಎಂದು ಮತ್ತೆ ನಗತೊಡಗಿದ. ಅವನು ಹೇಳುತ್ತಿರುವುದು ನಿಜವೆನಿಸಿದರೂ ಒಳ ಮನಸ್ಸು ಮಾತ್ರ ಇವನೇ ಕಳ್ಳನೆಂದು ಸಾರಿ ಸಾರಿ ಹೇಳುತ್ತಿತ್ತು. ಪರಿಪರಿಯಾಗಿ ಕೇಳಿದ ಮೇಲೆ ‘ನೋಡು, ಭಾನುವಾರ ನಾನು ಕಾಫಿ ಕುಡಿಯದೇ ಹೋದೆ. ಈಗ ಕಾಫಿಯ ಜೊತೆ ದೋಸೆ ಕೊಡಿಸಿದರೆ ಮಾತ್ರ ರಹಸ್ಯವನ್ನು ತಿಳಿಸುತ್ತೇನೆ’ ಎಂದ. ಕುತೂಹಲ ಹೆಚ್ಚಾಗಿತ್ತು , ಅವನ ಬೇಡಿಕೆಯನ್ನೆಲ್ಲಾ ಪೂರೈಸಿದೆ. ಗಡದ್ದಾಗಿ ತಿಂದ ಅವನನ್ನು ‘ಈಗಲಾದರೂ ಹೇಳಪ್ಪಾ ಮಾರಾಯ’ ಎಂದಾಗ ಅವನು ನಗುತ್ತಾ ‘ನಾನು ಮೂವರನ್ನು ಮಾತ್ರ ಫೂಲ್‌ ಮಾಡಿದೆ ಎಂದುಕೊಂಡರೆ, ನೀನೂ ಫೂಲಾದೆ. ಇಷ್ಟು ಸಣ್ಣ ವಿಷಯ ತಿಳಿಯದ ನೀನೇ ನಾಲ್ಕನೆಯ ಹಾಗೂ ದೊಡ್ಡ ಫೂಲ್‌’ ಎಂದು ಟೆಲಿಫೋನ್‌ ಮೇಲಿದ್ದ ರೀ ಡಯಲ್‌ ಬಟನ್‌ ತೋರಿಸಿ, ಅಲ್ಲಿಂದೆದ್ದು ತನ್ನ ಸಮುರಾಯ್‌ ಸ್ಟಾರ್ಟ್‌ ಮಾಡಿ ಹೊರಟೇಬಿಟ್ಟ.

ಯಾರೋ ಗಿರಾಕಿ ಬಂದರು. ನನ್ನ ತಲೆಯಲ್ಲಿ ಕೈನೆಟಿಕ್‌, ಸ್ಕೂಟಿ ಮತ್ತು ಸಮುರಾಯ್‌ ತಿರುಗುತ್ತಲೇ ಇದ್ದವು.


ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X