ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.1ರಿಂದ ಅಮೆರಿಕಾಗೆ 1 ನಿಮಿಷ ಫೋನಾಯಿಸಲು 12ರಿಂದ 15 ರು. ಮಾತ್ರ!

By Oneindia Staff
|
Google Oneindia Kannada News

ಮುಂಬಯಿ : ದೂರಸಂಪರ್ಕ ಕ್ಷೇತ್ರದಲ್ಲಿ ದಶಕಗಳ ಕಾಲದ ವಿದೇಶ್‌ ಸಂಚಾರ್‌ ನಿಗಮ ನಿಯಮಿತ (ವಿಎಸ್‌ಎನ್‌ಎಲ್‌) ದ ಏಕಸ್ವಾಮ್ಯ ಬರುವ ಏಪ್ರಿಲ್‌ನಿಂದ ಮುರಿಯಲಿದೆ. ಕ್ಷೇತ್ರಕ್ಕೆ ಕಾಲಿರಿಸುತ್ತಿರುವ ಹೊಸ ಕಂಪನಿಗಳ ಮಂತ್ರ- ವಿದೇಶೀ ಕರೆಗಳು ಭಾರೀ ಅಗ್ಗ !

ಭಾರತಿ ಗ್ರೂಪ್‌, ಸ್ಟರ್ಲಿಂಗ್‌ ಗ್ರೂಪ್‌, ರಿಲಯನ್ಸ್‌, ಡೇಟಾ ಆ್ಯಕ್ಸಸ್‌ ಮತ್ತು ಸಿಫಿ ಸೇರಿದಂತೆ ಸುಮಾರು ಅರ್ಧ ಡಜನ್‌ ಖಾಸಗಿ ಕಂಪನಿಗಳು ವಿದೇಶೀ ಕರೆಗಳ ದರ ಕಡಿತ ಮಾಡಲು ಹೋಂವರ್ಕ್‌ನಲ್ಲಿ ತೊಡಗಿವೆ. ಈ ಕಂಪನಿಗಳು ವಿದೇಶೀ ಕರೆಗಳ ದರದಲ್ಲಿ ಪ್ರತಿಶತ 50ರಿಂದ 70ರಷ್ಟು ಕಡಿತ ಮಾಡುವ ನಿರೀಕ್ಷೆ ಇದೆ.

ಅಮೆರಿಕೆಗೆ ಫೋನಾಯಿಸಿ ಒಂದು ನಿಮಿಷ ಮಾತಾಡಲು ಕೇವಲ 12 ರಿಂದ 15 ರುಪಾಯಿ!

ವಿಎಸ್‌ಎನ್‌ಎಲ್‌ನ ಪ್ರಸ್ತುತ ದರದನ್ವಯ ಅಮೆರಿಕೆಗೆ ಒಂದು ನಿಮಿಷ ಕರೆ ಮಾಡಿದರೆ 48 ರುಪಾಯಿ ತಗಲುತ್ತದೆ. ಭಾರತಿ ಈಗಾಗಲೇ ನಿಗದಿ ಪಡಿಸಿರುವ ದರ ಅಮೆರಿಕೆಯ ಪ್ರತಿ ನಿಮಿಷದ ಕರೆಗೆ 24 ರುಪಾಯಿ. ಡೇಟಾ ಆ್ಯಕ್ಸಸ್‌ನ ಉದ್ದೇಶ ಈ ದರವನ್ನು ಆದಷ್ಟೂ ಕಡಿಮೆ ಮಾಡುವುದು, ಅಂದರೆ 12ರಿಂದ 15 ರುಪಾಯಿಗೆ ಇಳಿಸುವುದು!

ವಿಎಸ್‌ಎನ್‌ಎಲ್‌ನ ಬಹು ವರ್ಷಗಳ ಏಕಸ್ವಾಮ್ಯ ಮುರಿಯುವ ಸವಾಲಿಗೆ ಖಾಸಗಿ ಕಂಪನಿಗಳ ಮೊದಲ ಮಂತ್ರ ದರ ಕಡಿತ; ಅದೂ ಭಾರೀ ಪ್ರಮಾಣದಲ್ಲಿ. ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ಕೆಲವು ತಿಂಗಳುಗಳೇ ಬೇಕಾಗಬಹುದು. ಆದರೆ ಮುಂದೆ ಇಡೀ ದೂರಸಂಪರ್ಕ ಕ್ಷೇತ್ರದ ಸ್ವರೂಪವೇ ಏಕಾಏಕಿ ಬದಲಾಗಲಿದೆ ಎನ್ನುತ್ತಾರೆ ಎಬಿಎನ್‌ ಆ್ಯಮ್ರೋ ಇಕ್ವಿಟೀಸ್‌ನ ಪರಿವೀಕ್ಷಕ ಅನುಪಮ್‌ ತರೇಜಾ.

ವಿಎಸ್‌ಎನ್‌ಎಲ್‌ಗೆ ಹೊಡೆತ ಕಟ್ಟಿಟ್ಟ ಬುತ್ತಿ : 2001ನೇ ಇಸವಿಯಲ್ಲಿ 2.7 ಶತಕೋಟಿ ನಿಮಿಷಗಳ ಧ್ವನಿ ಕರೆ ಗಾತ್ರವನ್ನು ಗ್ರಾಹಕರು ಬಳಸಿದ್ದಾಗಿ ವಿಎಸ್‌ಎನ್‌ಎಲ್‌ ವರದಿ ಮಾಡಿದೆ. ಇನ್ನು ಒಂದು ಅಥವಾ ಎರಡು ವರ್ಷಗಳಲ್ಲಿ ಈ ಗಾತ್ರದಲ್ಲಿ ಪ್ರತಿಶತ 50ರಷ್ಟು ಏರಿಕೆಯಾಗಲಿದೆ. ಖಾಸಗಿಯವರಿಗೆ ಕ್ಷೇತ್ರದಲ್ಲಿ ಸೇವೆ ಒದಗಿಸುವ ಅನುಮತಿ ಕೊಟ್ಟಿರುವ ಸರ್ಕಾರದ ನಿಲುವಿನಿಂದ ವಿಎಸ್‌ಎನ್‌ಎಲ್‌ ಗಳಿಕೆಗೆ ದೊಡ್ಡ ಹೊಡೆತ ಬೀಳುವುದರಲ್ಲಿ ಅನುಮಾನವಿಲ್ಲ. ಆದರೆ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯ ತ್ರಾಸಿನಿಂದ ತಕ್ಷಣಕ್ಕೆ ಕೈತೊಳೆದುಕೊಳ್ಳುವುದು ಸರ್ಕಾರದ ಇಂಗಿತ.

ಕಳೆದ ಜನವರಿ 26ರಿಂದ 7 ಸೆಲ್ಯುಲರ್‌ ಕಂಪನಿಗಳು ದರ ಕಡಿತ ಮಾಡಿ ಸಮರಕ್ಕಿಳಿದಿವೆ. ಇದರಿಂದ ಈಗಾಗಲೇ ಲಾಭ ಪಡೆಯುತ್ತಿರುವ ಗ್ರಾಹಕನಿಗೆ ಏಪ್ರಿಲ್‌ 1ರಿಂದ ಇನ್ನಷ್ಟು ನಗೆ. ವಿದೇಶೀ ಕರೆ ಕಡಿತದ ಸುಗ್ಗಿ. ಕನ್ನಡ ಪತ್ರಿಕೆಗಳ ಬೆಲೆ ಇಳಿಯಿತಲ್ಲ, ಥೇಟ್‌ ಹಾಗೇ. ಆದರೆ, ಕಂಪನಿಗಳ ಈ ತುರುಸಿನ ಸಮರದಲ್ಲಿ ಗೆಲ್ಲುವವರಾರು? ಕೆಲವೇ ದಿನಗಳಲ್ಲಿ ಗ್ರಾಹಕರೇ ನಿರ್ಧರಿಸುತ್ತಾರೆ.

(ಎಎಫ್‌ಪಿ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X