ಮಾಧ್ಯಮಗಳಲ್ಲಿ ಭಾರತೀಯ ಕಲೆಗೊಂದು ನೆಲೆಯಿರಲಿ -ಮಲ್ಲಿಕಾ ಸಾರಾಭಾಯ್
ಶತಮಾನದ ನೂರು ಮಂದಿ ಭಾರತೀಯ ಸುಂದರಿಯರು ಎಂಬ ಇಂಡಿಯಾ ಟೈಮ್ಸ್ನ ಸಮೀಕ್ಷೆಯಾಂದರಲ್ಲಿ ನೃತ್ಯಗಾತಿ ಮಲ್ಲಿಕಾ ಸಾರಾಭಾಯ್ ಹೆಸರಿದೆ. ಅದು ಮಲ್ಲಿಕಾ ಅವರ ಆಂತರಿಕ ಸೌಂದರ್ಯಕ್ಕೆ ಸಂದ ಮನ್ನಣೆ. ಮಲ್ಲಿಕಾ ಹೆಜ್ಜೆ ಹಾಕಿದ್ದು ಧಿ ದ್ಧಿ ತೈ ತಾಳಕ್ಕೆ ಮಾತ್ರವಲ್ಲ. ಮಹಿಳಾ ಬದುಕಿನ ಬವಣೆಗಳತ್ತ , ಮತ್ತೆ ಆ ಕ್ಷೇತ್ರದಲ್ಲಿ ಇನಿತಾದರೂ ಸುಧಾರಣೆ ತರುವತ್ತ , ಆಧ್ಯಾತ್ಮ ಚಿಂತನೆಗಳತ್ತಲೂ ಮಲ್ಲಿಕಾ ಅಡಿಯಿಟ್ಟಿದ್ದಾರೆ.
ಈ ಬಹುಮುಖ ವ್ಯಕ್ತಿತ್ವದ ಪರಿಣಾಮವಾಗಿಯೇ ಅಹ್ಮದಾಬಾದಿನಲ್ಲಿ ದರ್ಪಣ ಅಕಾಡೆಮಿ ಆಫ್ ಫರ್ಫಾರ್ಮಿಂಗ್ ಆರ್ಟ್ , ಜೊತೆಗೆ ತಾರಾ ಟೀವಿ ಚಾನೆಲ್ ಅವರ ಸಾರಥ್ಯದಲ್ಲಿ ಬೆಳಕು ಕಂಡಿದೆ. ಕಲೆ, ಶಿಕ್ಷಣ ಮತ್ತು ಚಿಂತನೆಗಳ ದಾರಿಯಿಂದ ಮಾಧ್ಯಮದ ಉದ್ಯಮದಲ್ಲಿ ಪ್ರಯೋಗಗಳನ್ನು ಮಾಡುತ್ತಿರುವ ಮಲ್ಲಿಕಾ ಶನಿವಾರ ಬೆಂಗಳೂರಿಗೆ ಬಂದಿದ್ದರು.
ಸಾರ್ವಜನಿಕ ವ್ಯವಹಾರ ಕೇಂದ್ರ ನಗರದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಹೊಸ ಮಾಧ್ಯಮಗಳು ಮತ್ತು ಜನಶಕ್ತಿ ’ ಎಂಬ ವಿಷಯದ ಬಗ್ಗೆ ಅವರು ಮಾತಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬದುಕಿನೊಳಗೆ ತೂರಿಕೊಂಡು ಬಂದಿರುವ ದೃಶ್ಯಮಾಧ್ಯಮವನ್ನು ಆಚೆಗೆ ಕಳಿಸುವುದು ಕಷ್ಟ ಸಾಧ್ಯ. ಆದಕ್ಕಾಗಿಯೇ ಅಲ್ಲಿ ನಮ್ಮ ಸಮಾಜದ ಉತ್ತಮ ಮೌಲ್ಯಗಳನ್ನೇ ಬಿಂಬಿಸಬೇಕು. ಭಾರತೀಯ ಸಮಾಜದಲ್ಲಿ ಕಲೆಯ ಪಾತ್ರ ಮಹತ್ತರವಾದುದು. ಈ ಹಿನ್ನೆಲೆಯಲ್ಲಿ ತಾವು ನಡೆಸುತ್ತಿರುವ ಸಂಸ್ಥೆ ಹಾಗೂ ಚಾನೆಲ್ ಉತ್ತಮ ಮನರಂಜನಾ ಮಾಧ್ಯಮವಾಗಿ ಕೆಲಸ ಮಾಡುತ್ತವೆ ಎಂಬುದು ಮಲ್ಲಿಕಾ ಸಾರಾಭಾಯ್ ಅಭಿಪ್ರಾಯ.
ತಾವು ಮಾಡಿದ ಸಂಗೀತ ವೀಡಿಯೋಗಳಂತಹ ಯಶಸ್ವೀ ಪ್ರಯೋಗಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಗುಜರಾತ್ನಂತಹ ಹೊತ್ತಿ ಉರಿಯುತ್ತಿರುವ ರಾಜ್ಯಗಳಲ್ಲಿ ಮಾಧ್ಯಮಗಳು ತೀರಾ ಸೂಕ್ಷ್ಮವಾಗಿ, ಸಾರ್ವಜನಿಕ ಮನಸ್ಸಿಗೆ ಘಾಸಿಯಾಗದ ಹಾಗೆ ನೋಡಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಮಲ್ಲಿಕಾ ಮಾಧ್ಯಮಗಳಿಗೆ ಸಲಹೆ ಮಾಡಿದರು.
ಉದ್ದೇಶವಿಲ್ಲದ ಕಾರ್ಯಕ್ರಮಗಳೇ.. ಛೆ ! ಛೆ !
ಮಲ್ಲಿಕಾ ಸುಂದರವಾಗಿ ಕಥೆ ಹೇಳಬಲ್ಲರು. ಈ ಪ್ರವೃತ್ತಿಯೇ ಕಳೆದೆರಡು ದಶಕಗಳಿಂದ ಕೂಚಿಪುಡಿ ಅಭ್ಯಾಸ ಮತ್ತು ಸಾಧನೆಯಲ್ಲಿ ಆಕೆ ತೊಡಗುವಂತೆ ಮಾಡಿದೆ. ಕೂಚಿಪುಡಿ ಮತ್ತು ಭರತನಾಟ್ಯಂ ಜೊತೆ ಮಲ್ಲಿಕಾ ನಟನೆಯನ್ನು ನೆಚ್ಚಿಕೊಂಡಿದ್ದಾರೆ. ನಟನಾ ಕ್ಷೇತ್ರಕ್ಕೆ ಕಾಲಿಟ್ಟಾಗ ಅವರಿಗೆ ಹದಿನೈದು ವರ್ಷ ವಯಸ್ಸು. ಸುಮಾರು 15 ಗುಜರಾತಿ ಚಿತ್ರಗಳಲ್ಲಿ ಮಲ್ಲಿಕಾ ಅಭಿನಯಿಸಿದ್ದಾರೆ. ಪೀಟರ್ ಬ್ರೂಕ್ ನಿರ್ದೇಶಿಸಿದ್ದ ಮಹಾಭಾರತ ಚಿತ್ರದಲ್ಲಿ ಮಲ್ಲಿಕಾ ಅವರದು ದ್ರೌಪದಿಯ ಪಾತ್ರ. ಈ ಚಿತ್ರದಲ್ಲಿ ನಟಿಸಿದ ಏಕೈಕ ಭಾರತೀಯರೆಂಬ ಅಗ್ಗಳಿಕೆಯೂ ಮಲ್ಲಿಕಾ ಅವರಿಗೇ ಸಲ್ಲಬೇಕು. ಬರವಣಿಗೆಯೂ ಅವರ ಆಸಕ್ತಿಗಳಲ್ಲಿ ಒಂದು.
ತಮ್ಮ ಉಪನ್ಯಾಸದ ನಂತರ ನೃತ್ಯ ಪ್ರದರ್ಶನಗಳ ಬಗ್ಗೆ ಪತ್ರಕರ್ತರ ಪ್ರಶ್ನೆಯಾಂದಕ್ಕೆ ಉತ್ತರಿಸಿದ ಮಲ್ಲಿಕಾ, ಸಾಮಾಜಿಕ ಸಮಸ್ಯೆಯಾಂದನ್ನು ಬಿಂಬಿಸದ, ಭಾರತೀಯ ಕಲೆಯನ್ನು ಪಸರಿಸುವ ಉದ್ದೇಶವಿಲ್ಲದ ಸಣ್ಣ ಪುಟ್ಟ ನೃತ್ಯ ಪ್ರದರ್ಶನ ನೀಡುವುದರಲ್ಲಿ ನನಗೆ ನಂಬಿಕೆಯಿಲ್ಲ, ಆಸಕ್ತಿನೂ ಇಲ್ಲ ಬಿಡಿ ಎಂದು ಕೈಯ್ಯಾಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ