ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿಗೆ ಹೋಗದೆ ಓತ್ಲಾ ಹೊಡೆಯುವ 150 ಸರ್ಕಾರಿ ವೈದ್ಯರ ಕೆಲಸ ಗೋತಾ

By Staff
|
Google Oneindia Kannada News

ಬೆಂಗಳೂರು : ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವುದಿಲ್ಲ ಎಂದು ಹಟ ಹಿಡಿದಿರುವ ವೈದ್ಯರ ಸಂಖ್ಯೆ ದೊಡ್ಡದಿದೆ. ಸರ್ಕಾರಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕಾದ್ದು ಕಡ್ಡಾಯ ಎಂದಿದ್ದರೂ, ಇದಕ್ಕೆ ಸ್ಪಂದಿಸದವರೇ ಹೆಚ್ಚು. ಇನ್ನು ಕೆಲವರು ಪುಸ್ತಕದ ಮೇಲಷ್ಟೇ ವೈದ್ಯರು. ರಿಜಿಸ್ಟರ್‌ ಪ್ರಕಾರ ಅವರು ಸದಾ ಹಾಜರ್‌. ಆದರೆ ಡಾಕ್ಟರು ಒಳಗಿರುವುದೇ ಇಲ್ಲ. ವರ್ಷಗಳು ಹೀಗೇ ಉರುಳಿರುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಒಲ್ಲೆ ಎಂದ 150 ಸರ್ಕಾರಿ ವೈದ್ಯರನ್ನು ಆರೋಗ್ಯ ಸಚಿವ ಎ.ಬಿ.ಮಲಕ ರೆಡ್ಡಿ ಕೆಲಸದಿಂದ ತೆಗೆದಿರುವುದೇ ಇದಕ್ಕೆ ಸಾಕ್ಷಿ.

ಕಳೆದೊಂದು ತಿಂಗಳಲ್ಲಿ ಕ್ರಮವಾಗಿ 26 ಹಾಗೂ 32 ವೈದ್ಯರನ್ನು ಕೆಲಸದಿಂದ ತೆಗೆಯಬೇಕೆಂದು ಎರಡು ಆದೇಶಗಳನ್ನು ಸಚಿವರು ಹೊರಡಿಸಿದ್ದಾರೆ. ಈ ವೈದ್ಯರ ಮೇಲೆ ಕರ್ತವ್ಯ ಲೋಪದ ಆರೋಪವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊದಲ 6 ವರ್ಷಗಳ ಕಾಲ ಕಡ್ಡಾಯವಾಗಿ ಸಲ್ಲಿಸಬೇಕಿರುವ ಸೇವೆಗೆ ಈ ವೈದ್ಯರು ಬೆನ್ನು ತೋರಿದ್ದಾರೆ.

ಸರ್ಕಾರಿ ವೈದ್ಯರು ಹಳ್ಳಿಗಳಿಗೆ ಹೋಗಲು ಸಿದ್ಧವಿದ್ದರೂ ಅವರ ಹೆಂಡತಿಯರು ಬಿಡಬೇಕಲ್ಲ. ನಾನು ತಣ್ಣಗೆ ಕೆಲಸ ಮಾಡುವುದರಿಂದ, ಈತ ಏನೂ ಮಾಡುವುದಿಲ್ಲ ಎಂಬ ಆರೋಪ ನನ್ನ ಮೇಲಿದೆ. ನಿಂದನೆಗೆ ಚಿಂತೆಯಿಲ್ಲ. ನನ್ನ ಕೆಲಸವನ್ನು ನಾನು ಸದ್ದಿಲ್ಲದೆ ಮಾಡುತ್ತಿದ್ದೇನೆ ಎಂದು ಸಚಿವರು ಪ್ರಶ್ನೆಗಳಿಗೆ ಉತ್ತರಿಸಿದರು.

ಈವರೆಗೆ ಲಂಚ, ಅವ್ಯವಹಾರ, ಅಪ್ರಾಮಾಣಿಕತೆ ಹಾಗೂ ಕರ್ತವ್ಯ ಚ್ಯುತಿ ಕಾರಣಕ್ಕೆ 300 ವೈದ್ಯರನ್ನು ಅಮಾನತ್ತುಗೊಳಿಸಲಾಗಿದೆ. 1994ರಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ ರಾಜ್ಯದ ಪ್ರತಿತ 70ರಷ್ಟು ಹಳ್ಳಿಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ವೈದ್ಯರು 6 ವರ್ಷ ಕಡ್ಡಾಯ ಸೇವೆ ಸಲ್ಲಿಸಬೇಕೆಂಬ ನಿಯಮ ಜಾರಿಗೆ ತಂದೆ ಎಂದರು.

ಕೆಲವು ವೈದ್ಯರು ಪುಸ್ತಕದಲ್ಲಿ ಹಾಜರು. ಹೋಗಿ ನೋಡಿದರೆ ವರ್ಷಗಳಿಂದ ಕೆಲಸಕ್ಕೇ ಬಂದಿರುವುದಿಲ್ಲ. ರಜೆ ಹಾಕುವುದು ಇವರ ಜಾಯಮಾನ ಅಲ್ಲವೇ ಅಲ್ಲ. ಹೀಗಾಗಿ ಈ ಜಾಗಕ್ಕೆ ಹೊಸ ನೇಮಕಾತಿಯೂ ಸಾಧ್ಯವಾಗಿಲ್ಲ . ಇದೀಗ ಪರಿಶೀಲನೆಯ ನಂತರ 556 ವೈದ್ಯರನ್ನು ಹೊಸದಾಗಿ ಸರ್ಕಾರ ಸದ್ಯದಲ್ಲೇ ನೇಮಿಸಿಕೊಳ್ಳಲಿದೆ ಎಂದು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X