ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೊಗರಿ ಬೆಳೆ ಹಾನಿ : ಕೈಸುಟ್ಟುಕೊಂಡ ರೈತರಿಗೆ ಚಿಕ್ಕಾಸೂ ಪರಿಹಾರ ಇಲ್ಲ

By Staff
|
Google Oneindia Kannada News

ಬೆಂಗಳೂರು : ಬೆಳೆ ನಾಶದಿಂದ ಕೈಸುಟ್ಟುಕೊಂಡಿರುವ ತೊಗರಿ ರೈತರಿಗೆ ಸರ್ಕಾರ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಕೃಷಿ ಸಚಿವ ಟಿ.ಬಿ.ಜಯಚಂದ್ರ ಕಡ್ಡಿ ಮುರಿದಂತೆ ಹೇಳಿದ್ದಾರೆ. ಗುಲ್ಬರ್ಗಾ ರೈತರ ಒತ್ತಾಯಕ್ಕೆ ಇದು ಅವರು ಕೊಟ್ಟಿರುವ ಉತ್ತರ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದ ಸಚಿವರು, ಸಾಮಾನ್ಯವಾಗಿ ಜೂನ್‌- ಜುಲೈ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ತೊಗರಿ ಬೆಳೆಗೆ ಬೀಜ ಬಿತ್ತುವುದು ವಾಡಿಕೆ. ಈ ಬಾರಿ ಮಳೆ ತಡವಾದ್ದರಿಂದ ಆಗಸ್ಟ್‌ನಲ್ಲಿ ಬಿತ್ತನೆ ಕೆಲಸ ನಡೆದಿದೆ. ಹೀಗೆ ಮಾಡಿದರೆ ಫಸಲಿಗೆ ಹಾನಿಯಾಗುತ್ತದೆ ಎಂದು ಸರ್ಕಾರ ಮೊದಲೇ ಎಚ್ಚರಿಕೆ ಕೊಟ್ಟಿತ್ತು. ಅದನ್ನು ಕಿವಿಮೇಲೆ ಹಾಕಿಕೊಳ್ಳದೆ ತೊಗರಿ ರೈತರು ಬಿತ್ತನೆ ಮಾಡಿದರು. ಜೊತೆಗೆ ಕೀಟಗಳ ಬಾಧೆಯೂ ಬೆಳೆ ಹಾಳು ಮಾಡಿತು ಎಂದರು.

ರಾಜ್ಯದ ಅಂದಾಜು 64 ಸಾವಿರ ಹೆಕ್ಟೇರ್‌ ಇಳುವರಿ ಭೂಮಿಯಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಈ ಬಾರಿ 40 ಸಾವಿರ ಹೆಕ್ಟೇರ್‌ ಪ್ರದೇಶದ ತೊಗರಿ ಬೆಳೆ ಹಾಳಾಗಿದೆ. ಈ ಪೈಕಿ 18 ಸಾವಿರ ಹೆಕ್ಟೇರ್‌ ಬೆಳೆ ವಿಮಾ ವ್ಯಾಪ್ತಿಗೆ ಬರುತ್ತದೆ. ಈ ಜಾಗಗಳ ರೈತರು ಪರಿಹಾರಕ್ಕೆ ಅರ್ಜಿ ಕೋರಬಹುದು. ಪೈರನ್ನು ಕೊಯ್ದ ನಂತರ ಅಂದಾಜು ನಷ್ಟವನ್ನು ಉಲ್ಲೇಖಿಸಬಹುದು. ವಿಮೆ ವ್ಯಾಪ್ತಿಗೆ ಬರದಿರುವ ರೈತರಿಗೆ ಸರ್ಕಾರ ಯಾವುದೇ ನೆರವನ್ನೂ ಕೊಡುವುದಿಲ್ಲ ಎಂದು ಹೇಳಿದರು.

ಕಳೆದ ನಾಲ್ಕು ದಿನಗಳಿಂದ ಜೇವರ್ಗಿಯಲ್ಲಿ ಆಮರಣಾಂತ ಉಪವಾಸ ಧರಣಿ ಕೂತಿರುವ ತೊಗರಿ ರೈತರಿಗೆ ಹಟ ಬಿಡುವಂತೆ ಸಚಿವ ಜಯಚಂದ್ರ ಮನವಿ ಮಾಡಿದ್ದಾರೆ. ತೊಗರಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಈಗಾಗಲೇ ಸ್ಪಂದಿಸಿದೆ. ಮಂಡಳಿ ಸ್ಥಾಪನೆಗೆ 5 ಕೋಟಿ ರುಪಾಯಿ ಕೂಡ ಮಂಜೂರು ಮಾಡಿದೆ. ಬೆಳೆ ಹಾನಿಗೊಳಗಾಗಿರುವ ಪ್ರತಿ ಎಕರೆಗೆ 500 ರುಪಾಯಿಯಂತೆ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಈಗಲೇ ಸರ್ಕಾರ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X