ಧೂಮಪಾನ ತ್ಯಜಿಸುವವರಿಗೆ ಡಾಲರ್ ಗಟ್ಟಲೆ ಬಹುಮಾನ !
ಮಂಗಳೂರು : ನೀವು ಧೂಮಪಾನಿಗಳೇ? ಸಿಗರೆಟ್ ಸೇವನೆ ಹೆಚ್ಚಾಗಿ ಕೆಮ್ಮುವಾಗಲೆಲ್ಲಾ ಸಿಗರೆಟ್ ಬಿಡುವ ಯೋಚನೆ ಮಾಡುತ್ತೀರಾ? ನಿಜವಾಗಲೂ ನೀವು ಸಿಗರೆಟ್ ಬಿಡುವ ನಿರ್ಧಾರ ಕೈಗೊಂಡಿದ್ದರೆ, ನಿಮಗೊಂದು ಸಂತಸದ ಸುದ್ದಿ ಇದೆ. ಸಿಗರೆಟ್ ಬಿಟ್ಟು ಡಾಲರ್‌ಗಟ್ಟಲೆ ಬಹುಮಾನ ಗೆಲ್ಲುವ ಅವಕಾಶ ನಿಮಗೆ ಲಭಿಸಲಿದೆ.
ಮಂಗಳೂರು ಲಯನ್ಸ್ ಕ್ಲಬ್‌ನವರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ‘ಧೂಮಪಾನ ತ್ಯಜಿಸಿ, ಹಣ ಗೆಲ್ಲಿ’ ಎಂಬ ವಿಶಿಷ್ಟ ಸ್ಪರ್ಧೆ ಏರ್ಪಡಿಸಿದ್ದಾರೆ. ಧೂಮಪಾನ ತ್ಯಜಿಸುವಂತೆ ಬಹಳಷ್ಟು ಜನರನ್ನು ಪ್ರೇರೇಪಿಸುವುದು ಮತ್ತು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ.
ಒಂದು ತಿಂಗಳ ಕಾಲ ಧೂಮಪಾನ ತ್ಯಜಿಸುವ ವ್ಯಕ್ತಿಗೆ ರಾಷ್ಟ್ರಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗೆಲ್ಲಲು ಅವಕಾಶವಿದೆ. ರಾಷ್ಟ್ರಮಟ್ಟದಲ್ಲಿ ಬಹುಮಾನ ಗೆದ್ದ ಧೂಮಪಾನ ತ್ಯಜಿಸಿದ ಸ್ಪರ್ಧಿಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ 10 ಸಾವಿರ ಡಾಲರ್ ಮೊತ್ತದ ಪ್ರಥಮ ಬಹುಮಾನ ಅಥವಾ ತಲಾ 2500 ಡಾಲರ್‌ಗಳ ಆರು ಪ್ರಾದೇಶಿಕ ಬಹುಮಾನ ತಮ್ಮದಾಗಿಸಿಕೊಳ್ಳಬಹುದು.
ದಕ್ಷಿಣ ಭಾರತದಲ್ಲಿ ಸ್ಪರ್ಧೆಯನ್ನು ಅತ್ತಾವರದ ಕೆಎಂಸಿ ಆಸ್ಪತ್ರೆ ಸಂಘಟಿಸಲಿದೆ. ಈ ವಿಷಯವನ್ನು ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯಕುಮಾರ್ ಜಲನ್ ತಿಳಿಸಿದ್ದಾರೆ. ವಿಶ್ವಸ್ವಾಸ್ಥ್ಯ ಸಂಘಟನೆ, ರಾಷ್ಟ್ರೀಯ ಸಾರ್ವಜನಿಕ ಸ್ವಾಸ್ಥ್ಯ ಸಂಸ್ಥೆ, ಫಿನ್‌ಲ್ಯಾಂಡ್ ಮತ್ತು ಫಾರ್ಮಾಸಿಯಾ ಕಾರ್ಪೊರೇಷನ್, ಗ್ಲಾಕ್ಸೋ ಮೊದಲಾದ ಹಲವಾರು ಸಂಸ್ಥೆಗಳೂ ಈ ಸ್ಪರ್ಧೆಯ ಪ್ರಾಯೋಜಕತ್ವದ ಹೊಣೆ ಹೊತ್ತಿವೆ ಎಂದವರು ತಿಳಿಸಿದ್ದಾರೆ.
‘ಧೂಮಪಾನ ತ್ಯಜಿಸಿ, ಹಣ ಗೆಲ್ಲಿ’ ಸ್ಪರ್ಧೆಯ ಬಗ್ಗೆ ಹೆಚ್ಚಿನ ವಿವರ ತಿಳಿಯಬಯಸುವವರು ಕೆಎಂಸಿ ಆಸ್ಪತ್ರೆ, ಕ್ಯಾನ್ಸರ್ ಚಿಕಿತ್ಸಾ ಘಟಕ, ಅತ್ತಾವರ, ಮಂಗಳೂರು - 575001, ದೂರವಾಣಿ ಸಂಖ್ಯೆ 0824-445858 (ವಿಸ್ತರಣೆ 235) ಅಥವಾ 218733 ಸಂಪರ್ಕಿಸಬಹುದು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...