ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಗಲೀಜು ಮಾಡುವವರು ಸಾಂಗ್ಲಿಯಾನ ಕೆಮೆರಾದಲ್ಲಿ ದಾಖಲು !

By Staff
|
Google Oneindia Kannada News

ಬೆಂಗಳೂರು : ನಗರದ ಯಾವುದೋ ಫುಟ್‌ಪಾತ್‌ನಲ್ಲಿ ಉಚ್ಚೆ ಹುಯ್ಯುವ ನೀವು ಕೆಮೆರಾ ಕಣ್ಣಿನಲ್ಲಿ ಬಂಧಿಯಾದೀರಿ, ಜೋಕೆ? ನಿಮಗೆ ಎಷ್ಟೇ ಅವಸರವಾದರೂ, ಶೌಚಾಲಯ ಸಿಗುವವರೆಗೂ ತಡಕೊಳ್ಳಲೇಬೇಕು! ಇಲ್ಲವಾದಲ್ಲಿ 500 ರುಪಾಯಿವರೆಗೆ ದಂಡ ಅಥವಾ ಒಂದು ವಾರ ಕಾಲ ಜೈಲು ವಾಸ.

ಸೋಮವಾರ ಬಹುತೇಕರಿಗೆ ಶಾಕ್‌; ತಾವು ರಸ್ತೆ ಬದಿಯಲ್ಲಿ ಉಗುಳಿದ್ದು, ಉಚ್ಚೆ ಹುಯ್ದಿದ್ದು ವಿಡಿಯೋಗ್ರಾಫ್‌ ಆಗಿದ್ದನ್ನು ನೋಡಿ. ಬಸ್ಸಿನ ಫುಟ್‌ಬೋರ್ಡ್‌ ಮೇಲೆ ನಿಂತವರನ್ನು ಇಂಕ್‌ ಎರಚುವ ಮೂಲಕ ಪತ್ತೆ ಮಾಡುತ್ತಿದ್ದ ಎಚ್‌.ಟಿ.ಸಾಂಗ್ಲಿಯಾನ ಹೊಸ ವರಸೆ ಇದು. ನೀವು ಸುಳ್ಳು ಹೇಳಿ ತಪ್ಪಿಸಿಕೊಳ್ಳುವಂತೆಯೇ ಇಲ್ಲ.

ಕಳೆದ ಮೂರು ದಿನಗಳಲ್ಲಿ 250 ಮಂದಿ, ಈ ಪೈಕಿ ಬಹುತೇಕರು ಯುವಕರು, ಸಾಂಗ್ಲಿಯಾನ ಕೆಮೆರಾ ಕಣ್ಣಿನಲ್ಲಿ ಬಂಧಿಯಾಗಿದ್ದಾರೆ. ಇವರಲ್ಲಿ ಅನೇಕರು ದಂಡ ಕಕ್ಕಿದ್ದಾರೆ. ರಾತ್ರಿ ಹೊತ್ತು ಪಬ್‌ಗಳು ಮತ್ತು ಬಾರ್‌ಗಳ ಸಮೀಪ ಗಲೀಜು ಮಾಡಿದವರೇ ಹೆಚ್ಚು.

ಬೆಂಗಳೂರನ್ನು ಸ್ವಚ್ಛವಾಗಿಡಲು ಈ ಕ್ರಮ ಅತ್ಯಗತ್ಯ. ಜನ ಪರಿಜ್ಞಾನವೇ ಇಲ್ಲದಂತೆ ಗಲೀಜು ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ. ತಪ್ಪಿತಸ್ಥರಿಗೆ ಸ್ಥಳದಲ್ಲೇ 500 ರುಪಾಯಿ ದಂಡ ವಿಧಿಸುತ್ತೇವೆ. ಇಲ್ಲವೇ 7 ದಿನಗಳ ಕಾಲ ಜೈಲುವಾಸ ಅನುಭವಿಸಬೇಕು ಎನ್ನುತ್ತಾರೆ ನಗರ ಪೊಲೀಸ್‌ ಆಯುಕ್ತ ಎಚ್‌.ಟಿ.ಸಾಂಗ್ಲಿಯಾನ.

ಪ್ರತಿಷ್ಠಿತ ಹಾಗೂ ಜನಸಂದಣಿ ಇರುವ ರಸ್ತೆಗಳ ಬದಿಯಲ್ಲಿರುವ ಭಿಕ್ಷುಕರನ್ನು ಮಾಗಡಿ ರಸ್ತೆಯಲ್ಲಿರುವ ಬೆಗ್ಗರ್ಸ್‌ ಕಾಲೋನಿಗೆ ಶಿಫ್ಟ್‌ ಮಾಡುವ ಕೆಲಸ ಕೂಡ ಈಗ ಚುರುಕಾಗಿದೆ. ಅಷ್ಟೇ ಅಲ್ಲ, ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ದಿಢೀರನೆ ಕ್ರಾಸ್‌ ಮಾಡಿ, ಸಂಚಾರ ಅಸ್ತವ್ಯಸ್ತವಾದರೆ, ಅಂಥವರಿಗೂ ದಂಡ. ಇದು ಸಾಂಗ್ಲಿಯಾನ ಮಾನದಂಡ.

ಅಂಬೆಗಾಲಿಟ್ಟ ಅಂಗವಿಕಲ : ಹುಟ್ಟಿ 12 ವರ್ಷಗಳಾದರೂ ನಡೆಯಲಾರದ ಅರೀಫ್‌ ಪಾಷ ಎಂಬುವ ಪೀಣ್ಯದಲ್ಲಿ ಭಿಕ್ಷೆ ಬೇಡುತ್ತಿದ್ದ. ಇವನನ್ನು ನೋಡಿ ಸಾಂಗ್ಲಿಯಾನ ಮನ ಕರಗಿತು. ಈತನಿಗೆ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ಪೋಷಕರನ್ನು ಕೇಳಲು, ಅವರು ಒಪ್ಪಿಲ್ಲ. ಕಾರಣ- ಭಿಕ್ಷೆ ಬೇಡಿ, ಪ್ರತಿದಿನ ಅರೀಫ್‌ 50 ರುಪಾಯಿ ತರುತ್ತಿದ್ದ. ಹಟ ಹಿಡಿದ ಸಾಂಗ್ಲಿಯಾನ, ಹುಡುಗನನ್ನು ಹೊಸ್ಮಟ್‌ ಆಸ್ಪತ್ರೆಗೆ ಸೇರಿಸಿದರು. ಮೂಳೆ ರೋಗ ತಜ್ಞ ಡಾ.ಥಾಮಸ್‌ ಎ.ಕ್ಯಾಂಡಿ ಹೇಳುವಂತೆ, ಅರೀಫ್‌ ಈಗ ಅಂಬೆಗಾಲಿಡುತ್ತಿದ್ದಾನೆ.

(ಇನ್ಫೋ ವಾರ್ತೆ)

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X