• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನಕಪುರದಿಂದ ಮಣಿಪುರದವರೆಗೆ... ಸಂಕ್ರಮಣದ ನಿರೀಕ್ಷೆಯಲ್ಲಿ ರಾಜಕಾರಣ

By Super
|

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಗೆಲ್ಲುತ್ತಾರಾ? ಅಬ್ಬರದ ಸ್ಪರ್ಧೆ ನೀಡಿದ ಡಿ.ಕೆ.ಶಿವಕುಮಾರ್‌ ದೆಹಲಿಗೆ ಹೋಗುತ್ತಾರಾ ಅಥವಾ ವಿಧಾನಸೌಧದಲ್ಲೇ ಉಳಿಯುತ್ತಾರಾ? ಈಶ್ವರಪ್ಪ ಅವರ ಕಮಲ ಅರಳುತ್ತದಾ?

-ವಿದ್ಯುನ್ಮಾನ ಯಂತ್ರಗಳಲ್ಲಿ ಅಡಗಿರುವ ಮತದಾರ ಪ್ರಭುವಿನ ಮನಸ್ಸನ್ನು ಅರಿಯುವ ಘಳಿಗೆ ಹತ್ತಿರ ಬರುತ್ತಿದ್ದಂತೆಯೇ ಕುತೂಹಲದ ಕಾವು ಹೆಚ್ಚಾಗುತ್ತಿದೆ. ಭಾನುವಾರ (ಫೆ.24) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರು. ಮಧ್ಯಾಹ್ನ ಊಟದ ಹೊತ್ತಿಗೆ ಫಲಿತಾಂಶ ನಿರೀಕ್ಷೆ . ಸಂಜೆ ವಿಜಯೋತ್ಸವ- ವಿಷಾದ ಗೋಷ್ಠಿಗಳು!

ಕಳೆದ ಹದಿನೈದು ದಿನಗಳಿಂದ ನಿದ್ರೆ ಕಳಕೊಂಡ ಸ್ಪರ್ಧಿಗಳಿಗೆ ಈಗ ಬಿಡುವು ದೊರೆತಿದ್ದರೂ ನಿದ್ದೆಯಿಲ್ಲ . ಗೆಲ್ಲಲಿ, ಸೋಲಲಿ- ಚುನಾವಣೆಯ ಹ್ಯಾಂಗೋವರ್‌ನಿಂದ ಅವರು ಹೊರಗೆ ಬರಲು ತಿಂಗಳುಗಳೇ ಬೇಕಾಗಬಹುದು. ಮತದಾನದ ನಂತರದ ದಿನಗಳನ್ನು ವಿಶ್ರಾಂತಿಗೆ ಮೀಸಲಿಡುವುದಾಗಿ ಹೇಳಿದ್ದ ದೇವೇಗೌಡರು, ಶುಕ್ರವಾರ ಬೆಳಗ್ಗೆ ಸಾತನೂರಿಗೆ ಹೋಗಿ ಬಂದಿದ್ದಾರೆ. ಚುನಾವಣಾ ಘರ್ಷಣೆಯಲ್ಲಿ ಕೊಲೆಯಾದ ಪಕ್ಷದ ಕಾರ್ಯಕರ್ತ ರಾಜುವಿನ ಅಂತ್ಯಕ್ರಿಯೆಯಲ್ಲಿ ಅವರು ಪಾಲ್ಗೊಂಡಿದ್ದರು. ನನಗಾಗಿ ಜನ ಸಾವು ನೋವು ಉಂಡಿರುವಾಗ ನಾನು ಮನೆಯಲ್ಲಿ ಹೇಗೆ ಕೂರಲಿ ಎನ್ನುವುದು ಗೌಡರ ಪ್ರಶ್ನೆ .

ಶಿವಕುಮಾರ್‌ ಕೂಡ ಶುಕ್ರವಾರ ಚನ್ನಪಟ್ಟಣಕ್ಕೆ ಭೇಟಿ ನೀಡಿ, ಗಾಯಗೊಂಡಿದ್ದ ಪಕ್ಷದ ಕಾರ್ಯಕರ್ತರ ಕುಶಲ ವಿಚಾರಿಸಿದರು. ತಿಂಗಳಿಂದಲೂ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ತುರ್ತು ಅವರ ವಿಶ್ರಾಂತಿಗೆ ಅವಕಾಶ ನೀಡುತ್ತಿಲ್ಲ.

ಈಶ್ವರಪ್ಪನವರು ನಾನು ಗೆದ್ದೇ ಗೆಲ್ಲುವೆ ಎನ್ನುವ ವಿಶ್ವಾಸವನ್ನು ಇನ್ನೂ ಕಳೆದುಕೊಂಡಿಲ್ಲ . ಮೂವರೂ ಸ್ಪರ್ಧಿಗಳು ಗೆಲುವು ಅಥವಾ ಸೋಲಿನ ಬಗೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರೂ, ಫಲಿತಾಂಶದ ಬಗೆಗಿನ ಆತಂಕ- ಕುತೂಹಲ ಅವರ ನಡವಳಿಕೆಯಲ್ಲಿ ಒಡೆದು ಕಾಣುತ್ತದೆ.

ಬಿಗಿ ಬಂದೋಬಸ್ತ್‌ : ಮತ ಎಣಿಕೆ ಕೇಂದ್ರದ 100 ಮೀಟರ್‌ ಸುತ್ತ ಮುತ್ತ ಸೆಕ್ಷನ್‌ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆಯ ಸ್ಥಳದಲ್ಲಿ ಸಾವಿರಾರು ಜನರು ಸೇರುವ ಸಂಭವ ಇರುವುದರಿಂದ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ರಾಷ್ಟ್ರ ರಾಜಕಾರಣಕ್ಕೆ ಸಂಕ್ರಮಣದ ಕಾಲ ?

ಉತ್ತರಪ್ರದೇಶ, ಪಂಜಾಬ್‌, ಉತ್ತರಾಂಚಲ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭೆಗಳಿಗೆ ನಡೆದಿರುವ ಚುನಾವಣೆಯ ಮತ ಎಣಿಕೆಯೂ ಭಾನುವಾರದಂದೇ. 2500 ಅಭ್ಯರ್ಥಿಗಳ ಭವಿಷ್ಯ ನಿರ್ಣಯಿಸಲಿರುವ ಮತ ಎಣಿಕೆಯ ಸಿದ್ಧತೆಗಳು ಪೂರ್ಣವಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಂತೂ ಅಧಿಕಾರ ಹಿಡಿಯಲು ಹಣಾಹಣಿ ಏರ್ಪಟ್ಟಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜನಾಥ್‌ ಸಿಂಗ್‌, ಪಂಜಾಬ್‌ನ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್‌ ಬಾದಲ್‌, ಉತ್ತರಾಂಚಲದ ಮುಖ್ಯಮಂತ್ರಿ ಭಗತ್‌ಸಿಂಗ್‌ ಕೋಶಿಯಾರಿ, ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಕಲ್ಯಾಣ್‌ಸಿಂಗ್‌ ಮತ್ತು ರಾಜೀಂದರ್‌ ಕೌರ್‌ ಭಟ್ಟಳ್‌ ಹಾಗೂ ಮಣಿಪುರದ ದೀರ್ಘ ಕಾಲದ ಮುಖ್ಯಮಂತ್ರಿ ರಿಶಾಂಗ್‌ ಕೀಯ್‌ಶಿಂಗ್‌ ಅವರ ಭವಿಷ್ಯ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.

ಇದುವರೆಗಿನ ಚುನಾವಣಾ ಸಮೀಕ್ಷೆಗಳು ಬಿಜೆಪಿಯ ಪಾಲಿಗೆ ಅನುಕೂಲಕರವಾಗಿಲ್ಲ . ಉತ್ತರ ಪ್ರದೇಶದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಗಳಿದ್ದು , ಬಹುಜನ ಸಮಾಜವಾದಿ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸರ್ಕಾರ ರಚನೆಯಲ್ಲಿ ಬಿಜೆಪಿ ಪಾತ್ರದ ಕುರಿತು ನಿರ್ಣಯ ಕೈಗೊಳ್ಳುವ ಸಲುವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜನಾಥ್‌ ಸಿಂಗ್‌, ಪ್ರಧಾನಿ ವಾಜಪೇಯಿ ಜೊತೆ ಶನಿವಾರ ಒಂದು ಗಂಟೆಯ ಕಾಲ ಚರ್ಚಿಸಿದರು. ಸಭೆಯಲ್ಲಿ ಗೃಹ ಸಚಿವ ಎಲ್‌.ಕೆ.ಅಡ್ವಾಣಿ, ಕುಶಭಾವು ಠಾಕ್ರೆ ಮೊದಲಾದ ಮುಖಂಡರಿದ್ದರು.

ಜಯಲಲಿತಾ ಮತ್ತೆ ಮುಖ್ಯಮಂತ್ರಿ?

ತಮಿಳುನಾಡಿನ ಆಂಡಿಪಟ್ಟಿ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಲಿದ್ದು , ಎಐಡಿಎಂಕೆಯ ಸರ್ವೋಚ್ಛ ನಾಯಕಿ ಜಯಲಲಿತಾ ಗೆಲ್ಲುವ ಬಗ್ಗೆ ಯಾರಿಗೂ ಅನುಮಾನಗಳಿಲ್ಲ . ಆಕೆ ಮುಂದಿನ ಮುಖ್ಯಮಂತ್ರಿ ಎಂದೇ ಮತದಾರರು ಭಾವಿಸಿದ್ದಾರೆ.

403 ಕ್ಷೇತ್ರಗಳ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಭಾನುವಾರ ರಾತ್ರಿಯ ವೇಳೆಗೆ ಸ್ಪಷ್ಟವಾಗುವ ನಿರೀಕ್ಷೆಯಿದೆ. ಉತ್ತರಪ್ರದೇಶದಂತೆಯೇ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಿರುವ ಪಂಜಾಬ್‌, ಮಣಿಪುರ ಹಾಗೂ ಉತ್ತರಾಂಚಲಗಳ ಫಲಿತಾಂಶವನ್ನು ಮಧ್ಯಾಹ್ನದ ವೇಳೆಗೇ ನಿರೀಕ್ಷಿಸಲಾಗುತ್ತಿದೆ.

English summary
Feb 24 : Destination deciding day for bunch of politicians
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X