ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹೃತ ಪತ್ರಕರ್ತ ಡೇನಿಯಲ್‌ ಪರ್ಲ್‌ ಹತ್ಯೆ : ಅಮೆರಿಕ ದೃಢೀಕರಣ

By Staff
|
Google Oneindia Kannada News

Daniel Pearlವಾಷಿಂಗ್ಟನ್‌ ಡಿಸಿ : ನಾಲ್ಕು ವಾರಗಳ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ವಾಲ್‌ಸ್ಟ್ರೀಟ್‌ ಪತ್ರಿಕೆಯ ವರದಿಗಾರ ಡೇನಿಯಲ್‌ ಪರ್ಲ್‌ನನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆ. ಪಾಕಿಸ್ತಾನ ಒದಗಿಸಿದ ವಿಡಿಯೋ ಕ್ಯಾಸೆಟ್‌ ವೀಕ್ಷಿಸಿದ ಬಳಿಕ ಅಮೆರಿಕಾ ಈ ವಿಷಯವನ್ನು ದೃಢಪಡಿಸಿದೆ. ಅಮೆರಿಕ ಸರಕಾರದ ಅಧಿಕೃತ ವಕ್ತಾರ ರಿಚರ್ಡ್‌ ಬೋಚರ್‌ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.

ಪರ್ಲ್‌ ಅವರ ಹತ್ಯೆಯ ಸುದ್ದಿ ತಮಗೆ ಇಂದು ಪಾಕಿಸ್ತಾನದ ನಮ್ಮ ರಾಯಭಾರ ಕಚೇರಿಯಿಂದ ತಿಳಿದುಬಂದಿದ್ದು. ಈ ವಿಷಯವನ್ನು ಪರ್ಲ್‌ ಅವರ ಕುಟುಂಬದವರಿಗೂ ತಿಳಿಸಲಾಗಿದೆ ಹಾಗೂ ಅವರ ನಿಧನಕ್ಕೆ ಸರಕಾರದ ಪರವಾಗಿ ಸಂತಾಪ ಸೂಚಿಸಲಾಗಿದೆ ಎಂದು ವಿವರಿಸಿದರು. ಆದರೆ ಅವರು ಪರ್ಲ್‌ ಹತ್ಯೆಯ ಬಗ್ಗೆ ಹೆಚ್ಚಿನ ವಿವರ ಒದಗಿಸಲು ನಿರಾಕರಿಸಿದರು.

ವಾಲ್‌ ಸ್ಟ್ರೀಟ್‌ನ ದಕ್ಷಿಣ ಏಷ್ಯಾ ವರದಿಗಾರರಾಗಿ ಮುಂಬೈನಿಂದ ಕಾರ್ಯ ನಿರ್ವಹಿಸುತ್ತಿದ್ದ ಪರ್ಲ್‌ ಅವರು ಸುದ್ದಿ ಸಂಗ್ರಹಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದಾಗ, ಜನವರಿ 23ರಂದು ಅಲ್‌ಕ್ವಿದಾ ಸಂಘಟನೆಯಾಂದಿಗೆ ಸಂಪರ್ಕ ಇರುವ ಮೂಲಭೂತವಾದಿ ನಾಯಕರೊಂದಿಗೆ ಸಂದರ್ಶನ ಕೊಡಿಸುವುದಾಗಿ ಹೇಳಿ ಅವರನ್ನು ಅಪಹರಿಸಲಾಗಿತ್ತು. ಅವರ ಬಿಡುಗಡೆಗೆ ಒತ್ತೆ ಹಣ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಡಲಾಗಿತ್ತು. ಆದರೆ ಆ ಬೇಡಿಕೆಗಳನ್ನು ಅಮೆರಿಕಾ ಒಪ್ಪಿರಲಿಲ್ಲ.

ಬುಷ್‌ ದಿಗ್ಭ್ರಮೆ : ಚೀನಾ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಪತ್ರಕರ್ತ ಪರ್ಲ್‌ ಹತ್ಯೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಪ್ರಜೆಗಳಲ್ಲಿ ಈ ಘಟನೆ ಮತ್ತಷ್ಟು ಆಕ್ರೋಶ ಉಂಟು ಮಾಡಿದೆ. ಭಯೋತ್ಪಾದನೆಯನ್ನು ಮಟ್ಟಹಾಕುವ ಕೆಲಸವನ್ನು ತಾವು ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.

ಈ ಮಧ್ಯೆ ಪರ್ಲ್‌ ಹತ್ಯೆಗೆ ಕಾರಣರಾದ ಎಲ್ಲ ಆರೋಪಿಗಳನ್ನೂ ಪತ್ತೆಹಚ್ಚಿ ಉಗ್ರವಾಗಿ ಶಿಕ್ಷಿಸುವುದಾಗಿ ಪಾಕ್‌ ಅಧ್ಯಕ್ಷ ಮುಷ್ರಫ್‌ ಹೇಳಿದ್ದಾರೆ. ಪರ್ಲ್‌ ಅವರ ನಿಧನಕ್ಕೆ ವಿಶ್ವದೆಲ್ಲೆಡೆ ದಿಗ್ಭ್ರಮೆ ವ್ಯಕ್ತವಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ ಅವರು ಪತ್ರಕರ್ತರು ಎದುರಿಸುವ ಅಪಾಯಗಳಿಗೆ ಇದು ಸಾಕ್ಷಿಯಾಗಿದೆ ಎಂದಿದ್ದರೆ, ವಾಲ್‌ಸ್ಟ್ರೀಟ್‌ ಇದೊಂದು ಅನಾಗರಿಕ ಕೃತ್ಯ ಎಂದು ಬಣ್ಣಿಸಿದೆ.

(ಏಜೆನ್ಸಿಗಳು)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X