ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೌಸ್‌ ಶಾಪಿಂಗ್‌ : ಸಂಗಾತಿ ಆರಿಸಲು ಕೋಲ್ಕತಾದಲ್ಲಿ ಹೀಗೊಂದು ಜಾತ್ರೆ!

By Staff
|
Google Oneindia Kannada News

Find your right choiceಕೋಲ್ಕತ : ವೈನಾದ ಸಂಗಾತಿ ಬೇಕೆಂದು ಮಾಧ್ಯಮಗಳಲ್ಲಿ ಜಾಹೀರಾತು ಕೊಟ್ಟರೆ, ಎಂತೆಂಥವರೋ ಬಂದು ಮನೆ ಬಾಗಿಲು ಬಡಿಯುತ್ತಾರೆ. ಹುಡುಗಿ ಕನಿಷ್ಠ ಹೀಗಾದರೂ ಇರಬೇಕು ಅಂತ ಇಂಟರ್ನೆಟ್‌ನಲ್ಲಿ ಪ್ರೊಫೈಲ್‌ ಕಳುಹಿಸದರೆ, ಮಾಧುರಿ ದೀಕ್ಷಿತಳ ಫೋಟೋ ಹಾಕಿಕೊಂಡು ತಮ್ಮ ಬಯೋಡೇಟಾ ಕಳುಹಿಸಿ ಲೇವಡಿ ಮಾಡುತ್ತಾರೆ.

ಇನ್ನು ಮದುವೆ ದಲ್ಲಾಳಿಗಳ ಬೆನ್ನಿಗೆ ಬಿದ್ದರೆ ಕಿಸೆ ಹಗುರಾಗುತ್ತದೆ. ಅವರು ಸುಳ್ಳು ಪೋಣಿಸಿ ಮದುವೆ ಮಾಡಿಸಿ, ಕಮೀಷನ್ನು ಪಡೆಯುವ ಭಯವೂ ಇಲ್ಲದಿಲ್ಲ. ಮನೆ ಮನೆಗೆ ಹೋಗಿ, ಹೆಣ್ಣು ಕೇಳುವುದಕ್ಕೆ ಪುರುಸೊತ್ತಿಲ್ಲ. ಹಾಗಾದರೆ, ಸರಿ ಹೊಂದುವಂಥ ಜೀವನ ಸಂಗಾತಿಯ ಹುಡುಕಿಕೊಳ್ಳುವುದಾದರೂ ಹೇಗೆ? ಹಾಗಂತ ಅಪ್ಪ- ಅಮ್ಮ ತೋರಿದ ಹುಡುಗಿಗೆ ಸುಮ್ಮನೆ ತಾಳಿ ಕಟ್ಟಲು ಮನಸ್ಸು ಒಪ್ಪುವುದೇ?

ಪ್ರೀತಿಸಿ, ಪರೀಕ್ಷಿಸಲೂ ವ್ಯವಧಾನವಿಲ್ಲದ ಈ ಕಾಲದಲ್ಲಿ ರಿಲೇಷನ್ಸ್‌ ಎಂಬ ಸಂಸ್ಥೆ ಸಂಗಾತಿ ಬೇಟೆಗಾಗಿ ಕೋಲ್ಕತಾದಲ್ಲಿ ವಿಶೇಷ ಜಾತ್ರೆಯನ್ನೇ ಆಯೋಜಿಸಿದೆ. ಆಧುನಿಕ ಭಾಷೆಯಲ್ಲಿ ಇದನ್ನು ಅವರು ಕರೆದಿರುವುದು- ‘ಸ್ಪೌಸ್‌ ಶಾಪಿಂಗ್‌’, ಅರ್ಥಾತ್‌ ಸಂಗಾತಿ ಖರೀದಿ ! ಈ ಪದಗಳ ಪ್ರಯೋಗಕ್ಕೆ ಸಂಸ್ಕೃತಿ ಪ್ರಿಯರು ತಗಾದೆ ತೆಗೆಯುವುದನ್ನು ಪಕ್ಕಕ್ಕಿರಿಸಿ, ಈ ಹೊಸ ಜಾತ್ರೆಯನ್ನು ಮಾತ್ರ ನೋಡೋಣ.

ಫೆಬ್ರವರಿ 24ರ ಭಾನುವಾರ ನಡೆಯಲಿರುವ ಈ ವಧು- ವರ ಆಯ್ಕೆಯ ಜಾತ್ರೆಯಲ್ಲಿ ಒಂದು ಕೈ ನೋಡೇ ಬಿಡುವ ಎಂದು 250 ಜನ ಬಯೋ- ಡೇಟಾ, ಫೋಟೋ ಕಳುಹಿಸಿ ಕೊಟ್ಟಿದ್ದಾರೆ. ಈ ಪೈಕಿ 100 ಯುವಕರು, 150 ಯುವತಿಯರು. ಯುವಕರಿಗೇ ಛಾಯ್ಸ್‌ ಜಾಸ್ತಿ ಎಂದಾಯಿತು. ಮದುವೆ ವಯಸ್ಸಿಗೆ ಬಂದಿರುವ ತರಹೇವಾರಿ ಮಂದಿ ಇಲ್ಲಿಗೆ ಬರುವರು. ವಿಧವೆಯರು, ವಿದುರರು, 49 ತುಂಬಿದ ನಂತರ ಮದುವೆ ಬೇಕು ಅಂತ ತೀರ್ಮಾನಿಸಿರುವಾತ, 40 ದಾಟಿದರೂ ನನ್ನ ಚೆಲುವು ಮಾಸಿಲ್ಲ ಎಂದು ಬೀಗುತ್ತಿರುವಾಕೆ, ವಿವಾಹ ವಿಚ್ಛೇದನ ಪಡಕೊಂಡು ಇನ್ನೊಂದು ಮದುವೆಯಾಗಲು ಬಯಸಿರುವವರು ಹೀಗೆ.

‘ರಿಲೇಷನ್ಸ್‌’ ಮಾಡಿಸುತ್ತಿರುವುದು ಯುವಕ- ಯುವತಿಯರ ಪರಸ್ಪರ ಪರಿಚಯ. ಟೀ ಕುಡಿಯುತ್ತಾ, ಊಟ ಮಾಡುತ್ತಾ ನಿಮಗೆ ಮೆಚ್ಚಾದವರನ್ನು ಮಾತಾಡಿಸಿ, ಆರಿಸಿಕೊಳ್ಳುವ ಅವಕಾಶ ಇದು. ಪದೇ ಪದೇ ಇಂಟರ್‌ವ್ಯೂಗೆ ಕರೆದು, ಕಮಿಷನ್‌ ಕೆರೆದು ಬಯ್ಗುಳ ಪಡೆಯುವ ಮದುವೆ ದಲ್ಲಾಳಿ ಸಂಸ್ಥೆಗಳ ಪಟ್ಟಿಯಿಂದ ಹೊರ ಬರುವ ಯತ್ನ ‘ರಿಲೇಷನ್ಸ್‌’ದು.

ಅಂದಹಾಗೆ, ಈ ರೀತಿಯ ಜಾತ್ರೆಯನ್ನು ಸಂಸ್ಥೆ ಕಳೆದ ವರ್ಷವೂ ಆಯೋಜಿಸಿತ್ತು. ಆದರೆ ಆಗ ಸೇರಿದ್ದುದು 100 ಮಂದಿ ಮಾತ್ರ. ಆದದ್ದು 20 ಮದುವೆ. ಅಂದರೆ, ಜಾತ್ರೆ 40% ಯಶಸ್ವಿ. ಕಳೆದ ವರ್ಷ 150 ಮದುವೆ ಮಾಡಿಸಿರುವ ಹೆಮ್ಮೆ ಈ ಸಂಸ್ಥೆಯದು. ಈ ವರ್ಷ ಜಾತ್ರೆಗೆ ಬಂದಿರುವ ಪ್ರತಿಕ್ರಿಯೆ ನೋಡಿದರೆ, ಜೋಡಿಗಳ ಸಂಖ್ಯೆ ಜಾಸ್ತಿಯಾಗಲಿದೆ. ಈ ಜಾತ್ರೆ ನೈತಿಕ ಚೌಕಟ್ಟನ್ನು ಮೀರದಿರಲಿ ಎಂದು ಸಂಸ್ಥೆ ಎಚ್ಚರಿಕೆ ವಹಿಸಿದೆ. ಇಲ್ಲಿಗೆ ಬರುವವರು ಅಪ್ಪ ಅಥವಾ ಅಮ್ಮನನ್ನು ಕರೆತರುವುದು ಕಡ್ಡಾಯ!

ಅದಿರಲಿ, ಕೆಲವೇ ಗಂಟೆಗಳ ಕಾಲ ಮಾತಾಡಿ, ಸಂಗಾತಿಯ ಆರಿಸಿಕೊಳ್ಳುವುದು ಸಾಧ್ಯವೇ? ನೀವೇ ಹೇಳಿ.

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X