ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗಣ್ಣ ಇಂಗಣ್ಣ ಅಂಗಿಬಿಚ್ಚಿ ನುಂಗಣ್ಣ...! ನುಂಗುವುದರ ಸೊಗಸು ನೋಡಾ?

By Staff
|
Google Oneindia Kannada News

950 ಕೋಟಿ ರುಪಾಯಿ
ಮೇವು ತಿಂದರೂ ಲಾಲೂ
ನನಗೆ ಗೊತ್ತು
ನೀನು ಕರೆಯುವುದಿಲ್ಲ ಹಾಲು

- ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಗುಳುಂಘಾತಕರನ್ನು ಹನಿಕವಿ ಕೃಷ್ಣಮೂರ್ತಿ ಆನೇಕಲ್‌ ಕಾಟಿ ಚುಡಾಯಿಸಿದ್ದು ಹೀಗೆ. ನುಂಗುವುದು ಹಾಗೂ ನುಂಗಿದ್ದನ್ನು ಅರಗಿಸಿಕೊಳ್ಳುವುದು ಭಾರತೀಯರಿಗೆ ಹೊಸ ಕಲೆಯೇನಲ್ಲ ; ವಾತಾಪಿ ಕಾಲದಿಂದಲೂ ನುಂಗುವವರಿಗೆ ನಮ್ಮಲ್ಲಿ ಬರ ಬಂದಿದ್ದಿಲ್ಲ . ಅಗಸ್ತ್ಯ ಮಹಾಮುನಿ ಗಂಗೆಯನ್ನೇ ಅಂಗೈನಲ್ಲಿ ಆಪೋಶನ ತೆಗೆದುಕೊಂಡಿದ್ದರು. ಶಿವ ಹಾಲಹಲವನ್ನು ನುಂಗಿ ನೀಲಕಂಠನಾದ. ಬಕಾಸುರ- ಭೀಮರು ಬಂಡಿಗಟ್ಟಲೆ ಅನ್ನವನ್ನು ನುಂಗುತ್ತಿದ್ದ ಕಥೆ ಎಲ್ಲರಿಗೂ ಗೊತ್ತು .

ಸದ್ಯಕ್ಕೆ ನಮ್ಮ ನಡುವೆ ವಾತಾಪಿಯಾಗಲೀ, ಅಗಸ್ತ್ಯರಾಗಲೀ ಇಲ್ಲ . ನೀಲಕಂಠನಾಗುವ ಸಾಮರ್ಥ್ಯವಂತರೂ ಇಲ್ಲ . ಆದರೆ, ನುಂಗುವ ಕಲೆ ಮಾತ್ರ ಉಳಿದಿದೆ. ಕಾಲಕ್ಕೆ ತಕ್ಕಂತೆ ಈ ಕಲೆಯನ್ನು ಮಾರ್ಪಡಿಸಿಕೊಂಡಿರುವ ನಮ್ಮ ನುಂಗಣ್ಣಂದಿರು- ಗುಳುಂಘಾತುಕತನದಲ್ಲಿ ವಿಶ್ವದಲ್ಲೇ ಮುಂದಿನ ಸಾಲಿನಲ್ಲಿ ನಿಲ್ಲ ಬಲ್ಲ ಸಮರ್ಥರು.

ನಮ್ಮ ಕಲಾವಿದರು ಏನನ್ನು ನುಂಗಬಲ್ಲರು: ಕೋಟಿಗಟ್ಟಲೆ ರುಪಾಯಿ, ಸರ್ಕಾರಿ ಭೂಮಿ, ಕೆರೆ, ಉದ್ಯಾನ, ಮಕ್ಕಳ ಆಟದ ಮೈದಾನ. ಬಡವರಿಗೆಂದು ಗೋದಾಮುಗಳಲ್ಲಿ ರಾಶಿ ಪೇರಿಸಿದ ದವಸ.. ಹೀಗೆ ನುಂಗಲಿಕ್ಕೆ ನೂರೆಂಟು ಕ್ಷೇತ್ರ. ಅಪರೂಪಕ್ಕೆ ಅಲ್ಲಲ್ಲಿ ಹಾವು- ಹಲ್ಲಿ ಟೇಸ್ಟು ನೋಡುವವರು, ಬ್ಲೇಡು ಜಗಿದು ಚಪ್ಪರಿಸುವವರೂ, ಕಬ್ಬಿಣವನ್ನು ತಂಬಿಟ್ಟಿನಂತೆ ನುಂಗುವವರೂ ಉಂಟು.

ಸಾಧಕರ ಕಥೆ ಬಿಡಿ; ಮಕ್ಕಳು ಸೀಮೆಸುಣ್ಣ , ಬಳಪ, ಹುಣಸೆ ಪಿತ್ತ , ನಾಕಾಣೆ ಬಿಲ್ಲೆ ನುಂಗಿ ನೀರು ಕುಡಿಯುತ್ತಾರೆ. ಮಕ್ಕಳ ಇಂಥ ಸಾಹಸದಿಂದ ಖಾಲಿಯಾಗುವುದು ಅಪ್ಪನ ಜೇಬು- ಅಮ್ಮನ ಕಣ್ಣೀರು. ಪಾಪ, ಡಾಕ್ಟರ್‌- ಹೆತ್ತವರ ಮನ ಹಗುರ ಮಾಡಲು - ಕಲಿತ ವಿದ್ಯೆಯನ್ನೆಲ್ಲಾ ಖರ್ಚು ಮಾಡಬೇಕು.

ಅಂದಹಾಗೆ- ನೀವೇನು ನುಂಗಿದ್ದೀರಿ?
ಹಡಗಿನಂಥ ದೊಡ್ಡದೇನೂ ಇಲ್ಲದಿದ್ದರೂ, ಚಿಕ್ಕಂದಿನಲ್ಲಿ ನೇರಳೆಯನ್ನೋ ಪೇರಳೆಯನ್ನೋ ತಿನ್ನುವಾಗ ಹಣ್ಣಿನೊಂದಿಗೆ ಬೀಜವನ್ನೂ ನುಂಗಿಯೇ ಇರುತ್ತೀರಿ. ನುಂಗಿದ ಬೀಜ ಹೊಟ್ಟೆಯಲ್ಲಿ ಮೊಳಕೆಯಾಡೆದು ಮರವಾಗುತ್ತದೆ- ಯಾರೋ ಹೇಳಿದ್ದನ್ನು ಕೇಳಿ ಹೆದರಿಯೂ ಇರುತ್ತೀರಿ. ಹೊಟ್ಟೆ ಮುಂದೆ ಬಂದ ಅಕ್ಕನ ನೋಡಿದಾಗ, ಅವಳ ಹೊಟ್ಟೆಯಾಳಗೆ ಯಾವ ಬೀಜ ನುಂಗಿರಬಹುದು ಎಂದು ಸೋಜಿಗ ಪಟ್ಟಿರುತ್ತೀರಿ. ಈಗಲೂ ಆ ನೆನಪುಗಳ ಮೆಲುಕು ಹಾಕಿ- ನಿಮ್ಮ ಮೊಗದಲ್ಲಿ ಅದೇ ಬಾಲ್ಯ ನಿಮಗೆ ಗೊತ್ತಿಲ್ಲದಂತೆ ಪ್ರತ್ಯಕ್ಷವಾಗುತ್ತದೆ.

ಈ ನುಂಗುವುದರ ಮೆಲುಕಿಗೆ ನೆಪ ಹುಡುಕಿಕೊಟ್ಟ ಮಹಾನುಭಾವ ಚಂಡೀಗಢದ ನುಂಗಣ್ಣ ! ಕೃತಕ ಹಲ್ಲು ಕಟ್ಟಿಸಿಕೊಂಡವರು ಹಲ್ಲಿನ ಸೆಟ್ಟು ನುಂಗುವ ಪ್ರಕರಣಗಳು ಧಾರಾಳವಾಗಿವೆ, ಆದರೆ ಅನಿಲ್‌ಕುಮಾರ್‌ ಎನ್ನುವ ಈತ ನುಂಗಿದ್ದು ಹಲ್ಲುಜ್ಜುವ ಬ್ರಷ್‌. ಟೀವಿ ಮುಂದೆ ಕೂತು ಕಾರ್ಯಕ್ರಮ ನೋಡುತ್ತ ಹಲ್ಲುಜ್ಜುತ್ತಿದ್ದ ಅನಿಲ್‌ಕುಮಾರ್‌ ಬ್ರಷ್‌ ನುಂಗಿಬಿಟ್ಟ . ಯಾವ ಮಾಯಾಂಗನೆ ಹಲ್ಲು ತೋರಿದಳೋ!?

ಹೊಟ್ಟೆಯಾಳಗೆ ಸೇರಿದ ಬ್ರಷ್ಷು , ಅರಗಲಾರದೆ ಹೋದದ್ದರಿಂದ ನೋವು ಶುರುವಾಯಿತು. ಆಪರೇಷನ್‌ ಮಾಡಲೇಬೇಕು ಅಂದರು ಡಾಕ್ಟರು: ಆಪರೇಷನ್‌ ಮೂರು ಗಂಟೆ ಹಿಡಿಯಿತು. ಹೋಪ್‌ ಕ್ಲಿನಿಕ್‌ನ ಡಾ.ಹರೀಶ್‌ ಗುಪ್ತ ಆಪರೇಷನ್‌ ನಡೆಸಿದ ತಂಡದ ಮುಂದಾಳಾಗಿದ್ದರು. ಈ ಮುನ್ನ- ನಾಣ್ಯ, ಸ್ಕೂೃ, ಕೋಳಿ ಎಲುಬು, ಉಂಗುರ, ಲಾಕೆಟ್‌ ಹಾಗೂ ಆಟಿಕೆಗಳನ್ನು ಆಪರೇಷನ್‌ ಮೂಲಕ ತೆಗೆದಿದ್ದೆ. ಟೂಥ್‌ಬ್ರಷ್‌ ತೆಗೆದದ್ದು ಇದೇ ಮೊದಲು. ಒಬ್ಬ ವ್ಯಕ್ತಿ ಹೇಗೆ ಟೂಥ್‌ಬ್ರಷ್‌ ನುಂಗಬಲ್ಲ ಅನ್ನುವುದೇ ನನಗೆ ಅಂದಾಜಾಗುತ್ತಿಲ್ಲ . ಏನೇ ಇರಲಿ, ಇನ್ನು ಮುಂದಂತೂ ಅನಿಲ್‌ಕುಮಾರ್‌ ಹುಷಾರಾಗಿರಬೇಕು ಎಂದು ಗುಪ್ತ ಸೋಜಿಗಪಟ್ಟುಕೊಂಡರು. ಅಂದಹಾಗೆ, ಅನಿಲ್‌ಕುಮಾರ್‌ ಪ್ರಕರಣವನ್ನು ವರದಿ ಮಾಡಿದ್ದು ‘ನವಯುಗ’ ಪತ್ರಿಕೆ.

ಈ ಬರಹದ ನೀತಿ-
ನುಂಗುವುದರಲ್ಲಿ ತಪ್ಪೇನೂ ಇಲ್ಲ: ನಮಗೆ ಆದರ್ಶ ಅನಿಲ್‌ಕುಮಾರ್‌, ಲಲ್ಲೂ ಅಲ್ಲ - ನುರಿಯದಡಕೆಯ ಬಾಯಲ್ಲಿ ಹೊರಳಿಸಿ ಹೊರಳಿಸಿ ರಸ ನುಂಗುವ ಹಲ್ಲಿಲ್ಲದ ಮುದುಕ- ಮುದುಕಿ!

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X