ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತೊಬ್ಬರು ನಾರಾಯಣಮೂರ್ತಿ ಬೆಳೆಯಲಿ’

By Staff
|
Google Oneindia Kannada News

ಬೆಂಗಳೂರು: ಕರ್ನಾಟಕ ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಹೂಡುವಂತೆ ಸಾರ್ವಜನಿಕ ಹಾಗೂ ಖಾಸಗಿ ವಲಯಕ್ಕೆ ರಾಜ್ಯದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಮುಕ್ತ ಆಹ್ವಾನ ನೀಡಿದ್ದಾರೆ. ಈ ಅವಕಾಶವನ್ನು ಖಾಸಗಿಯವರು ಸದುಪಯೋಗ ಪಡಿಸಿಕೊಂಡರೆ ಈ ಕ್ಷೇತ್ರದಲ್ಲೂ ಇನ್ನೊಬ್ಬರು ನಾರಾಯಣ ಮೂರ್ತಿ ಅಥವಾ ಅಜೀಮ್‌ ಪ್ರೇಮ್‌ಜೀ ಬೆಳೆಯಬಹುದು ಎಂದರು.

ಪ್ರವಾಸೋದ್ಯಮದಲ್ಲಿ ವಿಫುಲ ಅವಕಾಶಗಳಿವೆ. ಇಲ್ಲಿ ಬಂಡವಾಳ ತೊಡಗಿಸುವ ಮೂಲಕ ಮಾಹಿತಿ ತಂತ್ರಜ್ಞಾನದಲ್ಲಿ ಇನ್‌ಫೋಸಿಸ್‌ ನಾರಾಯಣ ಮೂರ್ತಿ ಹಾಗೂ ಅಜೀಮ್‌ ಪ್ರೇಮ್‌ಜೀ ಅವರು ಬೆಳೆದಿರುವಂತೆಯೇ ಪ್ರವಾಸೋದ್ಯಮದಲ್ಲಿ ಹಣ ತೊಡಗಿಸುವವರೂ ಬೆಳೆಯಬಹುದು ಎಂದು ಕೃಷ್ಣ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಪ್ರವಾಸೋದ್ಯಮ ಕೇಂದ್ರಗಳನ್ನು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಅಭಿವೃದ್ಧಿ ಪಡಿಸುವ ಪ್ರಥಮ ಸಮಾವೇಶ ‘ಕನೆಕ್ಟ್‌ ’ ಉದ್ಘಾಟಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವೇ ಬಂಡವಾಳ ಹೂಡಲು ಸಾಧ್ಯವಿಲ್ಲ ಹೀಗಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಪಾಲುದಾರಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಈ ಹೊತ್ತು ರಾಜ್ಯ ಸರಕಾರವು ಆದ್ಯತೆಯ ಮೇಲೆ ಹಣ ಹೂಡಿಕೆ ಮಾಡುತ್ತಿದೆ. ಮೊದಲ ಆದ್ಯತೆ, ವಿದ್ಯುತ್‌, ನೀರಾವರಿ, ಆರೋಗ್ಯ ಆಗಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಹಣ ತೊಡಗಿಸುವುದು ಕಷ್ಟಸಾಧ್ಯವೇ ವಿನಾ ರಾಜ್ಯ ಪ್ರವಾಸೋದ್ಯಮ ಕ್ಷೇತ್ರವನ್ನು ಕಡೆಗಣಿಸಿಲ್ಲ ಎಂದರು. ಈ ನಿಟ್ಟಿನಲ್ಲಿ ಖಾಸಗಿ ಕ್ಷೇತ್ರವನ್ನು ಬಳಸಿಕೊಂಡು ಬ್ಯಾಂಕ್‌ಗಳ ನೆರವಿನೊಂದಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಂಡವಾಳ ಸಂಗ್ರಹಿಸಲಾಗುವುದು ಎಂದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುವಂತೆ ಅವರು, ಖಾಸಗಿ ಹಾಗೂ ಸಾರ್ವಜನಿಕ ವಲಯಕ್ಕೆ ಕರೆ ನೀಡಿದರು. ಖಾಸಗಿ ವಲಯವು ಈ ಅವಕಾಶದ ಸದ್ಭಳಕೆ ಮಾಡಿಕೊಂಡರೆ, ರಾಜ್ಯಕ್ಕೆ ಹೆಚ್ಚು ಹೆಚ್ಚು ವಿದೇಶೀ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದರು. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲಭೂತ ಸೌಲಭ್ಯ ಒದಗಿಸಲು ರಾಜ್ಯ ಸರಕಾರ ಕೂಡ ಬದ್ಧವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.

ಹಿಂದಿ, ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಪ್ರವಾಸಿಗರಿಗೆ ಮಾಹಿತಿ ಒದಗಿಸಲು ಕಾಲ್‌ಸೆಂಟರ್‌ಗಳನ್ನು ತೆರೆಯಲಾಗಿದೆ ಎಂದು ಪ್ರವಾಸೋದ್ಯಮ ಆಯುಕ್ತ ಐ.ಎಂ. ವಿಠ್ಠಲ ಮೂರ್ತಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ರೋಷನ್‌ಬೇಗ್‌, ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಮನೋರಮಾ ಮಧ್ವರಾಜ್‌, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ವತ್ಸಲಾವತ್ಸ, ಮೊದಲಾದವರು ಪಾಲ್ಗೊಂಡಿದ್ದರು.

(ಇನ್‌ಪೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X