ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌.ಕೆ.ಲಕ್ಷ್ಮಣ್‌ ಮೆಚ್ಚಿನ ಕಾಗೆ,ಅವರು ಕಂಡ ಕಂಪ್ಯೂಟರ್‌ ಪಾತಕಿಗಳು ಹೀಗೆ...

By Staff
|
Google Oneindia Kannada News

ಬೆಂಗಳೂರು : ಬಣ್ಣದ ನವಿಲು, ಮಾತಾಡುವ ಗಿಳಿ ಇವು ತುಂಬಾ ಡಲ್‌. ಕಾಗೆ ಬ್ರಿಲಿಯಂಟ್‌. ನನಗೆ ಕಾಗೆ ಇಷ್ಟ. ಯಾಕೆಂದರೆ, ಅದು ಕಾಲದೊಂದಿಗೆ ಬೆಳೆದ ಜಾಣ ಹಕ್ಕಿ!

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಕೊಡಲಿರುವ ಜೀವನ ಸಾಧನೆ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಬಂದಿರುವ ವ್ಯಂಗ್ಯ ಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌, ಬುಧವಾರ ಪ್ರೆಸ್‌ ಕ್ಲಬ್‌ನ ಸಂವಾದದಲ್ಲಿ ಆಡಿರುವ ಮಾತಿದು. ಅವರ ಸರಳ ಮಾತು ಬಹುಕಾಲ ಸುತ್ತಿದ್ದು ಕಾಗೆಯ ಸುತ್ತಲೇ. ಕಲ್ಲು ತುಂಬಿ ಕೊಡದಡಿಯ ನೀರನ್ನು ಮೇಲೆ ಬರುವಂತೆ ಮಾಡಿದ ಕಾಗೆ, ತನ್ನ ಮೊಟ್ಟೆಗಳನ್ನು ತಿನ್ನುತ್ತಿದ್ದ ಹಾವಿನ ಹುತ್ತಕ್ಕೆ ರಾಣಿಯ ಮುತ್ತಿನ ಹಾರ ಹಾಕಿ ಭಟರು ಹಾವನ್ನು ಕೊಲ್ಲುವಂತೆ ಮಾಡಿದ ಕಾಗೆ...ಹೀಗೆ ಸಾಗಿತು ಲಕ್ಷ್ಮಣರ ಕಾಗೆ ಪ್ರಹಸನ.

ಇನ್ನೊಂದು ಕಾಗೆ ಕತೆ, ಲಕ್ಷ್ಮಣ್‌ ಕಂಡಂತೆ...

ಮುಂಬಯಿಯ ನಮ್ಮ ಫ್ಲ್ಯಾಟ್‌ ಪಕ್ಕ ಸ್ಟ್ರೋಕ್‌ ಆಗಿದ್ದ ಒಂದು ಅಜ್ಜಿ ಇತ್ತು. ಕಾಗೆಯಾಂದಕ್ಕೆ ದಿನಾ ಬ್ರೆಡ್‌ ಚೂರು ಕೊಡುವುದು ಅದರ ದಿನಚರಿಗಳಲ್ಲೊಂದು. ಅದನ್ನು ಕೊಕ್ಕಿನಿಂದ ಇಸಿದುಕೊಳ್ಳುತ್ತಿದ್ದ ಕಾಗೆ, ತನ್ನದೇ ರೀತಿಯಲ್ಲಿ ಥ್ಯಾಂಕ್ಸ್‌ ಹೇಳುತ್ತಿತ್ತು. ಅದನ್ನು ನೀರಿನಲ್ಲಿ ಅದ್ದಿ, ಮೆತ್ತಗೆ ಮಾಡಿಕೊಂಡು ತಿನ್ನುತ್ತಿತ್ತು. ಒಂದು ದಿನ ಅಜ್ಜಿ ಬಳಿ ಬ್ರೆಡ್‌ ಇರಲಿಲ್ಲ. ಬ್ರಿಟಾನಿಯಾ ಬಿಸ್ಕತ್‌ ಕೊಟ್ಟರು. ಕಾಗೆಗೋ ಸಿಕ್ಕಾಪಟ್ಟೆ ಕೋಪ. ಅರಚಾಡಿ ಮುಖ ಸಿಂಡರಿಸಿಕೊಂಡು ಹಾರಿತು. ಆಗ ಆ ಅಜ್ಜಿ ನನ್ನನ್ನು ಕೇಳಿದ್ದು- ಬ್ರಿಟಾನಿಯಾ ಬಿಸ್ಕತ್‌ ತಯಾರಿಸುವವರು ಯಾರು?! :-)

ಕಂಪ್ಯೂಟರ್‌ ಸಹವಾಸ ಬೇಡ ! : ಕಾಗೆ ನಂತರ ಲಕ್ಷ್ಮಣ್‌ ಮನುಷ್ಯನ ವಿಷಯಕ್ಕೆ ಬಂದರು. ಟಿವಿ, ಕಂಪ್ಯೂಟರ್‌ ಕಂಡರೆ ಇವರಿಗೆ ಆಗೋದಿಲ್ಲ. ಕಂಪ್ಯೂಟರ್‌ ಮೂಲಕವೇ ಒಬ್ಬನ ಜಾಡು ಹಿಡಿದು, ಅವನನ್ನು ಮುಗಿಸಲು ಹುನ್ನಾರ ಹೂಡುತ್ತಾರೆ. ಹತ್ತು ವರ್ಷದ ಹಿಂದೆ ಟಿಕೇಟು ತಗೊಂಡು, ಸೀದಾ ವಿಮಾನ ಹತ್ತಿ ಕೂರಬಹುದಿತ್ತು. ಈಗ ಹಣದ ಥೈಲಿ ಹೊತ್ತ ದೊಡ್ಡ ಉದ್ಯಮಿ ಏರ್‌ಪೋರ್ಟ್‌ಗೆ ಹೋದರೆ, ಅವನನ್ನು ಪೊಲೀಸರು ಕಳ್ಳನನ್ನು ನೋಡುವಂತೆ ದುರುಗುಟ್ಟುತ್ತಾರೆ. ದೊಡ್ಡ ದೊಡ್ಡ ಬಾಂಬ್‌ ಬಿಸುಡುತ್ತಾರೆ. ಇದನ್ನು ಪ್ರಗತಿ ಎನ್ನುವುದಾದರೂ ಹೇಗೆ, ಗಂಭೀರವಾಗಿ ಪ್ರಶ್ನಿಸಿದರು ಲಕ್ಷ್ಮಣ್‌.

ಕಾರ್ಟೂನಿಸ್ಟ್‌ಗಳು ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಕಚಗುಳಿ ಇಡುತ್ತಲೇ ಮಾಡಬೇಕು. ಆಗ ಮಾತ್ರ ನಮ್ಮಂಥವರ ಜೀವನ ನಡೆದೀತು ಎಂದು ಕಿವಿಮಾತು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X