ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರವ್‌ ಗಂಗೂಲಿಗೆ ಜೀವದಾನ, ಸ್ಟೀವ್‌ ವಾಗೆ ಅರ್ಧಚಂದ್ರ

By Staff
|
Google Oneindia Kannada News

Ganguly retained captain for Zim seriesಬೆಂಗಳೂರು : ವಿಶ್ವದ ಕ್ರಿಕೆಟ್‌ ರಂಗದಲ್ಲಿ ಬುಧವಾರ ಹಲವು ಕುತೂಹಲಕಾರಿ ಘಟನೆಗಳು ಘಟಿಸಿವೆ. ಇತ್ತ ನಾಯಕನಾಗಿ ಸತತವಾಗಿ ವಿಫಲವಾಗುತ್ತಿರುವ ಸೌರವ್‌ ಗಂಗೂಲಿ ಮತ್ತೊಮ್ಮೆ ಭಾರತ ತಂಡದ ನಾಯಕರಾಗಿ ಜೀವದಾನ ಪಡೆದಿದ್ದರೆ ಅತ್ತ, ಬೆರಳೆಣಿಕೆಯ ಪಂದ್ಯದಲ್ಲಿ ಕ್ಲಿಕ್‌ ಆಗದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್‌ ವಾ ಎತ್ತಂಗಡಿ ಆಗಿದ್ದಾರೆ. ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಜಯಭೇರಿ ಬಾರಿಸಿದೆ. ಜಿಂಬಾಬ್ವೆ ಹಾಗೂ ಭಾರತ ನಡುವಿನ ಹೈದರಾಬಾದ್‌ ಪಂದ್ಯಕ್ಕೆ ನೀಡಲಾಗುತ್ತಿರುವ ಕಾಂಪ್ಲಿಮೆಂಟರಿ ಪಾಸ್‌ ವಿವಾದವಾಗಿ ಮಾರ್ಪಟ್ಟಿದೆ.

ಗಂಗೂಲಿಗೆ ಜೀವದಾನ : ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ಧದ ಸರಣಿಯನ್ನು ಸುಲಭವಾಗಿ ಕೈವಶ ಪಡಿಸಿಕೊಳ್ಳುವ ಅವಕಾಶ ಕೈಚೆಲ್ಲಿದರೂ ಕೂಡ ಸೌರವ್‌ ಗಂಗೂಲಿ ಜಿಬಾಂಬ್ವೆ ವಿರುದ್ಧದ 2 ಟೆಸ್ಟ್‌ ಹಾಗೂ 5 ಏಕದಿನದ ಪಂದ್ಯಕ್ಕೆ ನಾಯಕರಾಗಿ ಆಯ್ಕೆ ಆಗಿದ್ದಾರೆ.

ಈ ವಿಷಯವನ್ನು ಆಯ್ಕೆ ಸಮಿತಿಯ ಅಧ್ಯಕ್ಷ ಚಂದು ಬೋರ್ಡೆ ಸುದ್ದಿ ಗಾರರಿಗೆ ತಿಳಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಸೌರವ್‌ ಅವರು ಬ್ಯಾಟಿಂಗ್‌ನಲ್ಲಿ ಅಷ್ಟು ತೃಪ್ತಿದಾಯಕ ಕಾರ್ಯ ನಿರ್ವಹಿಸದಿದ್ದರೂ, ನಾಯಕನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಬಾಯಿಸಿದ್ದಾರೆ. ಹೀಗಾಗಿ ಅವರನ್ನೇ ಜಿಂಬಾಬ್ವೆ ವಿರುದ್ಧದ ಸರಣಿಗೂ ನಾಯಕನನ್ನಾಗಿ ಉಳಿಸಿಕೊಳ್ಳಲಾಯಿತು ಎಂದು ಅವರು ಹೇಳಿದರು. ಮೊದಲ ಟೆಸ್ಟ್‌ ಪಂದ್ಯವು ನಾಗಪುರದಲ್ಲಿ ಫೆ.21ರಿಂದ ಆರಂಭಗೊಳ್ಳಲಿದೆ.

ಈಗಾಗಲೇ ಸ್ಟುವರ್ಟ್‌ ಕಾರ್ಲೈಲ್‌ ನೇತೃತ್ವದ ಜಿಂಬಾಬ್ವೆ ತಂಡ ಭಾರತಕ್ಕೆ ಬಂದಿಳಿದಿದೆ. 35 ದಿನಗಳ ಸುದೀರ್ಘ ಪ್ರವಾಸದಲ್ಲಿ ಅದು ಭಾರತ ತಂಡದ ವಿರುದ್ಧ 2 ಟೆಸ್ಟ್‌ ಹಾಗೂ 5 ಏಕದಿನದ ಪಂದ್ಯ ಆಡಲಿದೆ. ಅಧಿಕೃತ ಪಂದ್ಯಗಳಿಗೆ ಮುನ್ನ ಇದೇ ತಿಂಗಳ 15ರಿಂದ 17ರವರೆಗೆ ವಿಜಯವಾಡದಲ್ಲಿ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಇಲೆವೆನ್‌ ತಂಡದ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

ಸ್ಟೀವ್‌ ವಾಗೆ ಕೊಕ್‌ : ತಾಯ್ನೆಲದಲ್ಲೇ ನಡೆದ ತ್ರಿಕೋಣ ಸರಣಿಯಲ್ಲಿ ತಂಡವನ್ನು ಫೈನಲ್‌ ತಲುಪುವಲ್ಲಿ ವಿಫಲರಾದ ಸ್ಟೀವ್‌ ವಾ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಏಕದಿನ ಪಂದ್ಯಗಳ ನಾಯಕತ್ವದಿಂದ ತೆಗೆದುಹಾಕಿದೆ. ಆದರೆ, ಸತತ 16ಟೆಸ್ಟ್‌ ಜಯದೊಂದಿಗೆ ವಿಶ್ವದಾಖಲೆ ಸ್ಥಾಪಿಸಿದ ವಾ ಅವರನ್ನು ಟೆಸ್ಟ್‌ ಪಂದ್ಯಗಳಿಗೆ ನಾಯಕನನ್ನಾಗಿ ಉಳಿಸಿಕೊಳ್ಳಲಾಗಿದೆ.

ಮಾರ್ಚ್‌ ತಿಂಗಳಿನಿಂದ ಆರಂಭವಾಗಲಿರುವ, ದಕ್ಷಿಣ ಆಫ್ರಿಕಾ ವಿರುದ್ಧ 7 ಒಂದು ದಿನದ ಪಂದ್ಯಗಳಿಗೆ ಹೊಸ ನಾಯಕನ ಆಯ್ಕೆ ಇನ್ನೊಂದು ವಾರದೊಳಗೆ ನಡೆಯಲಿದೆ. ವಾ ಅವರ ಸ್ಥಾನಕ್ಕೆ ಹಿರಿಯ ಆಟಗಾರ ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌, ವಿಕೆಟ್‌ ಕೀಪರ್‌ ಆಡಮ್‌ ಗಿಲ್‌ಕ್ರಿಸ್ಟ್‌ ಅಥವಾ ರಿಕಿ ಫಾಂಟಿಂಗ್‌ ಆಯ್ಕೆ ಆಗುವ ಸಾಧ್ಯತೆ ಇದೆ. ಫೈನಲ್‌ ತಲುಪದ ಆಸ್ಟ್ರೇಲಿಯಾ ತಂಡದ ಬಗ್ಗೆ ಅಲ್ಲಿನ ಪತ್ರಿಕೆಗಳು ಕಿಡಿ ಕಾರಿದ್ದವು.

ಹೈದರಾಬಾದ್‌ ಕಿರಿಕಿರಿ: ಮಾರ್ಚ್‌ 16ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನದ ಪಂದ್ಯಕ್ಕೆ ನೀಡಲಾಗುತ್ತಿರುವ ಕಾಂಪ್ಲಿಮೆಂಟರಿ ಟಿಕೆಟ್‌ಗಳ ಬಗ್ಗೆ ಈಗ ವಿವಾದ ಹುಟ್ಟಿಕೊಂಡಿದೆ. ಈ ಪಂದ್ಯದ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವಂತೆ ಆಂಧ್ರ ಸರ್ಕಾರಕ್ಕೆ ಕೆಲವು ಕ್ರಿಕೆಟಿಗರು ಮನವಿ ಮಾಡಿದ್ದಾರೆ.

ಈ ಪಂದ್ಯಕ್ಕೆ ಸುಮಾರು 6 ಸಾವಿರ ಕಾಂಪ್ಲಿಮೆಂಟರಿ ಟಿಕೆಟ್‌ ನೀಡಲಾಗುತ್ತಿದ್ದು, ಯಾರು ಯಾರಿಗೆ ಯಾವ ಕಾರಣಕ್ಕಾಗಿ ನೀಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಹಿರಿಯ ಕ್ರಿಕೆಟ್‌ ಆಟಗಾರ ಪಿ.ಆರ್‌. ಮಾನಸಿಂಗ್‌ ಪ್ರಶ್ನಿಸಿದ್ದಾರೆ. ಆದರೆ, ಇವರು ಬರೆದಿರುವ ಪತ್ರಕ್ಕೆ ಕ್ರಿಕೆಟ್‌ ಮಂಡಳಿ ಈವರೆಗೆ ಉತ್ತರ ನೀಡಿಲ್ಲ ಎಂದು ಸಿಂಗ್‌ ಆರೋಪಿಸಿದ್ದಾರೆ.

ಆದರೆ, ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯ ಹಾಗೂ ಹೈದರಾಬಾದ್‌ ಕ್ರಿಕೆಟ್‌ ಮಂಡಳಿ ಕಾರ್ಯದರ್ಶಿ ಶಿವಲಾಲ್‌ ಯಾದವ್‌ ಅನಿಸಿಕೆಯೇ ಬೇರೆಯಾಗಿದೆ. ಕಾಂಪ್ಲಿಮೆಂಟರಿ ಟಿಕೆಟ್‌ ಕೊಡುವ ಹಕ್ಕು ಮಂಡಳಿಗಿದೆ. ಹೈದರಾಬಾದ್‌ ಆಂಧ್ರದ ರಾಜಧಾನಿ. ಈ ಬೃಹತ್‌ ನಗರಿಯಲ್ಲಿರುವ ಎಲ್ಲ ವಿವಿಐಪಿಗಳಿಗೆ ಹಾಗೂ ಮಂಡಲಿ ಸದಸ್ಯರಿಗೆ ನಾವು ಟಿಕೆಟ್‌ ನೀಡಲೇಬೇಕು. ಇಂತಿಷ್ಟೇ ಕಾಂಪ್ಲಿಮೆಂಟರಿ ಟಿಕೆಟ್‌ ನೀಡಬೇಕು ಎಂಬ ನಿಯಮ ಎಲ್ಲೂ ಇಲ್ಲ ಎನ್ನುತ್ತಾರೆ ಅವರು.

ನ್ಯೂಜಿಲೆಂಡ್‌ಗೆ ಜಯ : ಈ ಮಧ್ಯೆ ಕ್ರೆೃಸ್ಟ್‌ಚರ್ಚ್‌ನಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡಿನ 196ರನ್ನುಗಳ ಸುಲಭ ಸವಾಲನ್ನು ಎದುರಿಸಿದ ನ್ಯೂಜಿಲೆಂಡ್‌ನಾಲ್ಕು ವಿಕೆಟ್‌ ಜಯಗಳಿಸುವ ಮೂಲಕ ಶುಭಾರಂಭ ಮಾಡಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X